ಇಂದಿನಿಂದ ತ್ರಿಕೋನ ಏಕದಿನ ಸರಣಿ: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ

7

ಇಂದಿನಿಂದ ತ್ರಿಕೋನ ಏಕದಿನ ಸರಣಿ: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ

Published:
Updated:

ಮೆಲ್ಬರ್ನ್: ಐದು ವರ್ಷಗಳ ಹಿಂದೆ ಭಾರತ ತಂಡದವರು ಕಾಂಗರೂ ಪಡೆಯನ್ನು ಅವರದ್ದೇ ಗುಹೆಯಲ್ಲಿ ಸದೆಬಡಿದು ತ್ರಿಕೋನ ಏಕದಿನ ಸರಣಿ ಗೆದ್ದು ಬೀಗಿದ್ದರು. ಈ ಬಾರಿ ಏಕದಿನ ಚಾಂಪಿಯನ್ನರು ಎಂಬ ಹಣೆಪಟ್ಟಿ ಹೊತ್ತಿರುವ ಮಹೇಂದ್ರ ಸಿಂಗ್ ದೋನಿ ಪಡೆ ಮತ್ತೊಂದು ಸವಾಲಿಗೆ ಸಜ್ಜಾಗುತ್ತಿದೆ.ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾನುವಾರ ಆಸ್ಟ್ರೇಲಿಯಾ ಹಾಗೂ ಭಾರತ ಮುಖಾಮುಖಿಯಾಗಲಿವೆ. ಈ ಸರಣಿಯಲ್ಲಿರುವ ಇನ್ನೊಂದು ತಂಡ ಶ್ರೀಲಂಕಾ.ಟೆಸ್ಟ್ ಸರಣಿಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಮಹಿ ಪಡೆ ಆತಿಥೇಯರ ಎದುರಿನ ಕೊನೆಯ ಟ್ವೆಂಟಿ-20 ಪಂದ್ಯವನ್ನು ಗೆದ್ದು ತಾಲೀಮು ನಡೆಸಿದೆ. ಚುಟುಕು ಕ್ರಿಕೆಟ್ ಪಂದ್ಯಗಳನ್ನು ಆಡದ ಸಚಿನ್ ತೆಂಡೂಲ್ಕರ್ ತಂಡಕ್ಕೆ ವಾಪಸಾಗಿದ್ದಾರೆ.ಸಚಿನ್ ವಿಶ್ವಕಪ್ ಫೈನಲ್ ಬಳಿಕ ಏಕದಿನ ಪಂದ್ಯ ಆಡಿಲ್ಲ. ಅದಾಗಿ ಈಗಾಗಲೇ ಎಂಟು ತಿಂಗಳು ಕಳೆದಿವೆ. ಹಾಗೇ, ಟೆಸ್ಟ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗದ ತೆಂಡೂಲ್ಕರ್ ಇಲ್ಲಿ ಆ ಸಾಧನೆ ಮಾಡುವರೇ ಎಂಬ ನಿರೀಕ್ಷೆಗಳು ಮತ್ತೆ ಗರಿಗೆದರಿವೆ.ಟೆಸ್ಟ್ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿಯೇ ಇದ್ದ ತೆಂಡೂಲ್ಕರ್ ಅವರ ಆಗಮನ ತಂಡಕ್ಕೆ ಬಲ ನೀಡಿರುವುದು ನಿಜ. ಅವರು ವೀರೇಂದ್ರ ಸೆಹ್ವಾಗ್ ಜೊತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಐದು ವರ್ಷಗಳ ಹಿಂದೆ ಇಲ್ಲಿ ನಡೆದ ಸರಣಿಯ ಫೈನಲ್‌ನಲ್ಲಿ ಸಚಿನ್ ಶತಕ ಗಳಿಸಿ ಭಾರತ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು.ಹಾಗೇ, ಗೌತಮ್ ಗಂಭೀರ್ ಶುಕ್ರವಾರ ನಡೆದ ಟ್ವೆಂಟಿ-20 ಸರಣಿಯ ಕೊನೆಯ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದು ತಂಡದ ವಿಶ್ವಾಸ ಹೆಚ್ಚಿಸಿದೆ. ಇರ್ಫಾನ್ ಪಠಾಣ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.ಆದರೆ ಮೈಕಲ್ ಕ್ಲಾರ್ಕ್ ಸಾರಥ್ಯದ ಆಸೀಸ್ ಈಗ ಏಕದಿನ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಈ ತಂಡದವರು ಈಗ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಏಕೆಂದರೆ ಈ ತಂಡದವರು ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ವಿರುದ್ಧ ಸೋತು ಹೊರಬಿದ್ದಿದ್ದರು. ಆ ಸೇಡು ಈ ತಂಡದ ಪ್ರತಿ ಆಟಗಾರರ ಎದೆಯಲ್ಲಿ ಕುದಿಯುತ್ತಿದೆ.ಕ್ಲಾರ್ಕ್ ಹಾಗೂ ರಿಕಿ ಪಾಂಟಿಂಗ್ ಟೆಸ್ಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಆ ಪ್ರದರ್ಶನವನ್ನು ಇಲ್ಲೂ ಮುಂದುವರಿಸುವ ವಿಶ್ವಾಸದಲ್ಲಿ ಅವರಿದ್ದಾರೆ. ಈ ತಂಡದ ವೇಗಿಗಳು ಭಾರತದ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕಕ್ಕೆ ಮತ್ತೊಮ್ಮೆ ಪೆಟ್ಟು ನೀಡಲು ಸನ್ನದ್ಧರಾಗಿದ್ದಾರೆ.ನಾವೇ ಫೇವರಿಟ್: ಏಕದಿನ ಸರಣಿಯಲ್ಲಿ ಕೂಡ ಗೆಲ್ಲುವ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.`ಇಲ್ಲೂ ನಾವೇ ಗೆಲುವಿನ ಫೇವರಿಟ್. ಆದರೆ ಭಾರತ ಹಾಗೂ ಶ್ರೀಲಂಕಾ ತಂಡಗಳನ್ನು ಮಣಿಸಲು ಅತ್ಯುತ್ತಮ ಪ್ರದರ್ಶನ ನೀಡಬೇಕು. ಏಕೆಂದರೆ ಈ ಎರಡು ತಂಡಗಳು ವಿಶ್ವಕಪ್ ಫೈನಲ್ ತಲುಪಿದ್ದವು. ಆದರೆ ನಾವೀಗ ವಿಶ್ವದ ಅಗ್ರ ರ‌್ಯಾಂಕ್‌ನ ತಂಡ. ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ನಮ್ಮಲ್ಲಿದೆ~ ಎಂದು ಅವರು ತಿಳಿಸಿದ್ದಾರೆ.ಈ ತ್ರಿಕೋನ ಸರಣಿಯಲ್ಲಿ ಪ್ರತಿ ತಂಡಗಳು ಎದುರಾಳಿ ಜೊತೆ ನಾಲ್ಕು ಪಂದ್ಯಗಳನ್ನು ಆಡಲಿವೆ.ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್, ಆರ್.ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಆರ್.ವಿನಯ್ ಕುಮಾರ್, ಇರ್ಫಾನ್ ಪಠಾಣ್, ರವೀಂದ್ರ ಜಡೇಜಾ ಹಾಗೂ ಮನೋಜ್ ತಿವಾರಿ.ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಡೇವಿಡ್ ವಾರ್ನರ್, ರಿಕಿ ಪಾಂಟಿಂಗ್, ಮ್ಯಾಥ್ಯೂ ವೇಡ್, ಡೇನಿಯಲ್ ಕ್ರಿಸ್ಟಿಯಾನ್, ಕ್ಸೇವಿಯರ್ ಡೋಹರ್ತಿ, ಪೀಟರ್ ಫಾರೆಸ್ಟ್, ಮೈಕ್ ಹಸ್ಸಿ, ಡೇವಿಡ್ ಹಸ್ಸಿ, ರ‌್ಯಾನ್ ಹ್ಯಾರಿಸ್, ಮಿಷೆಲ್ ಸ್ಟಾರ್ಕ್, ಕ್ಲಿಂಟ್ ಮೆಕ್‌ಕೇ, ಬ್ರೆಟ್ ಲೀ ಹಾಗೂ ಮಿಷೆಲ್ ಮಾರ್ಷ್.ಪಂದ್ಯ ಆರಂಭ: ಭಾರತೀಯ ಕಾಲಮಾನ ಬೆಳಿಗ್ಗೆ  8.50ಕ್ಕೆ. ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry