ಮಂಗಳವಾರ, ನವೆಂಬರ್ 19, 2019
28 °C
ವಿಧಾನಸಭಾ ಚುನಾವಣಾ ಪ್ರಕ್ರಿಯೆ ಆರಂಭ

ಇಂದಿನಿಂದ ನಾಮಪತ್ರ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಕಸರತ್ತು ಮುಂದುವರಿದಿದೆ. ಇದರ ಬೆನ್ನಿಗೇ ಬುಧವಾರ ಚುನಾವಣಾ ಅಧಿಸೂಚನೆ ಹೊರ ಬೀಳುವುದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಆಯೋಗವು ಸಕಲ ಸಿದ್ಧತೆ ನಡೆಸಿದೆ. ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಬುಧವಾರ ಅಧಿಸೂಚನೆ ಹೊರಡಿಸುವುದರೊಂದಿಗೆ ವಿದ್ಯುಕ್ತವಾಗಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.ಬುಧವಾರದಿಂದ ಇದೇ 17ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಯುಗಾದಿ ಹಬ್ಬ (ಏ.11) ಹಾಗೂ ಭಾನುವಾರ (ಏ.14) ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಈಗಾಗಲೇ ಚುನಾವಣಾಧಿಕಾರಿಗಳ ನೇಮಕವಾಗಿದ್ದು, ಗೆಜೆಟ್‌ನಲ್ಲಿ ಅವರ ಪಟ್ಟಿ ಪ್ರಕಟಿಸಲಾಗಿದೆ.ಒಂದೇ ಪ್ರಮಾಣ ಪತ್ರ: ಹಿಂದಿನ ಚುನಾವಣೆಗಳಲ್ಲಿ ಅಭ್ಯರ್ಥಿಯು ಆಸ್ತಿ ಮತ್ತು ಅಪರಾಧ ಹಿನ್ನೆಲೆ ಕುರಿತಂತೆ ಎರಡು ಪ್ರಮಾಣಪತ್ರ ಸಲ್ಲಿಸಬೇಕಿತ್ತು. ಆದರೆ, ಈ ಸಲ ಎರಡೂ ಅಂಶಗಳಿಗೆ ಸಂಬಂಧಪಟ್ಟಂತೆ ನಮೂನೆ 26ರಲ್ಲಿ ಒಂದೇ ಪ್ರಮಾಣಪತ್ರ ಸಲ್ಲಿಸಿದರೆ ಸಾಕು. ಆಯೋಗದ ಸೂಚನೆಯಂತೆ ಈ ಬದಲಾವಣೆ ಮಾಡಲಾಗಿದೆ.ನಾಮಪತ್ರ ಸಲ್ಲಿಸಿದ 24 ಗಂಟೆಗಳಲ್ಲಿ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ನಾಮಪತ್ರ ವಾಪಸ್ ಪಡೆದರೂ, ಪ್ರಮಾಣ ಪತ್ರಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲೆ ಇರುತ್ತದೆ. ನಾಮಪತ್ರ ಸಲ್ಲಿಸುವಾಗ ಸಾಮಾನ್ಯ ವರ್ಗದ ಅಭ್ಯರ್ಥಿಗಳಾದರೆ ಹತ್ತು ಸಾವಿರ ರೂಪಾಯಿ, ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಾದರೆ ಐದು ಸಾವಿರ ರೂಪಾಯಿ ಠೇವಣಿ ಪಾವತಿಸಬೇಕಾಗುತ್ತದೆ. ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೂ ಠೇವಣಿ ಹಣ ಪಾವತಿಸಬೇಕಾಗುತ್ತದೆ.ವೀಕ್ಷಕರ ನೇಮಕ: ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ವೀಕ್ಷಕರು ಕ್ಷೇತ್ರಗಳಿಗೆ ತೆರಳಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಸಾಮಾನ್ಯ ವೀಕ್ಷಕರು, ಲೆಕ್ಕವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಿದೆ. ಅಲ್ಲದೆ ಅವರಿಗೆ ತರಬೇತಿಯನ್ನೂ ನೀಡಲಾಗಿದೆ. ಭದ್ರತಾ ವ್ಯವಸ್ಥೆ ಕುರಿತು ನಿಗಾ ವಹಿಸಲು ಮೊದಲ ಬಾರಿಗೆ ಪೊಲೀಸ್ ವೀಕ್ಷಕರನ್ನು ನೇಮಕ ಮಾಡಲಾಗಿದೆ.ಮುಗಿಯದ ಗೊಂದಲ: ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿದ್ದರೂ, ಅಭ್ಯರ್ಥಿಗಳ ಆಯ್ಕೆ ಗೊಂದಲ ಬಗೆಹರಿದಿಲ್ಲ. ಆಡಳಿತಾರೂಢ ಬಿಜೆಪಿ ಮಂಗಳವಾರ ಎರಡನೇ ಪಟ್ಟಿ ಬಿಡುಗಡೆ ಮಾಡುವುದರೊಂದಿಗೆ ಇದುವರೆಗೆ ಒಟ್ಟು 176 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಆದರೆ, ಉಳಿದ ಕ್ಷೇತ್ರಗಳ ಪಟ್ಟಿಯನ್ನು ಅಂತಿಮಗೊಳಿಸಲು ಇನ್ನೂ ಸಾಧ್ಯವಾಗಿಲ್ಲ.ವಿರೋಧ ಪಕ್ಷವಾದ ಕಾಂಗ್ರೆಸ್ ಮೊದಲ ಹಂತದಲ್ಲಿ 177 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದೆ. ಉಳಿದ 47 ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸುವುದು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸಚಿವರ ಮಕ್ಕಳಿಗೆ ಟಿಕೆಟ್ ನೀಡುವ ವಿಷಯದಲ್ಲಿ ಒಮ್ಮತ ಮೂಡಿಲ್ಲ. ಕೆಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಎರಡನೇ ಪಟ್ಟಿ ಅಂತಿಮಗೊಳಿಸುವ ಸಂಬಂಧ ವರಿಷ್ಠರು ದೆಹಲಿಯಲ್ಲಿ ಕಸರತ್ತು ನಡೆಸಿದ್ದಾರೆ.ಜೆಡಿಎಸ್ ಮೊದಲ ಹಂತದಲ್ಲಿ 122 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ ಸಿದ್ಧವಾಗಿದೆ. ಆದರೆ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ನಂತರವೇ ಜೆಡಿಎಸ್ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.ಕರ್ನಾಟಕ ಜನತಾ ಪಕ್ಷ ಇದುವರೆಗೆ ಮೂರು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಇನ್ನೂ ಕೆಲವು ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸಿಲ್ಲ. ಪ್ರಬಲ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿರುವ ಆ ಪಕ್ಷ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಬೇರೆ ಪಕ್ಷಗಳ ಕೆಲ ನಾಯಕರು ಪಕ್ಷಾಂತರ ಮಾಡಿ ಕೆಜೆಪಿ ಸೇರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.ಮೊದಲ ಹಂತದಲ್ಲೇ ಟಿಕೆಟ್ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಯಾವ ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳಿಗೆ ಇನ್ನೂ `ಬಿ' ಫಾರಂ ನೀಡಿಲ್ಲ. ಎಲ್ಲ 224 ಕ್ಷೇತ್ರಗಳ ಪಟ್ಟಿ ಸಿದ್ಧವಾದ ನಂತರ `ಬಿ' ಫಾರಂ ನೀಡುವ ಸಾಧ್ಯತೆ ಇದೆ. ಹೀಗಾಗಿ ಯುಗಾದಿ ನಂತರವೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.ಬೆಳಿಗ್ಗೆ 7ಕ್ಕೇ ಮತದಾನ ಶುರು

ರಾಜಕೀಯ ಪಕ್ಷಗಳ ಮನವಿ ಆಧರಿಸಿ ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಬೆಳಿಗ್ಗೆ 8 ಗಂಟೆ ಬದಲು ಮೊದಲಿನ ಹಾಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಸಂಜೆ 5ಕ್ಕೆ ಮುಕ್ತಾಯವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ತಿಳಿಸಿದರು.`ಬೇಸಿಗೆಯಲ್ಲಿ 8 ಗಂಟೆಗೆ ಮತದಾನ ಆರಂಭವಾದರೆ, ಮತ ಚಲಾಯಿಸಲು ತೊಂದರೆ ಆಗುತ್ತದೆ. ಮತದಾರರು ಮತಗಟ್ಟೆಗೆ ಬರುವುದಿಲ್ಲ. ಆದ್ದರಿಂದ ಸಮಯ ಬದಲಾಯಿಸಿ ಎಂದು ರಾಜಕೀಯ ಪಕ್ಷಗಳ ಮುಖಂಡರು ಮನವಿ ಮಾಡಿದ್ದರು. ಇದನ್ನು ಪರಿಗಣಿಸಿ ಮತದಾನದ ಅವಧಿಯನ್ನು ಬೆಳಿಗ್ಗೆ 7ರಿಂದ ಸಂಜೆ 5ಕ್ಕೆ ನಿಗದಿಪಡಿಸಲಾಗಿದೆ' ಎಂದರು.ವೇಳಾಪಟ್ಟಿ

ನಾಮಪತ್ರ ಸಲ್ಲಿಕೆ - ಏ.10 ರಿಂದ 17ನಾಮಪತ್ರ ಪರಿಶೀಲನೆ - ಏ.18ನಾಮಪತ್ರ ವಾಪಸ್‌ಗೆಕೊನೆಯ ದಿನಾಂಕ - ಏ.20ಮತದಾನದ ದಿನಾಂಕ - ಮೇ 5ಮತ ಎಣಿಕೆ - ಮೇ 8ಮತದಾನ ಅವಧಿ - ಬೆಳಿಗ್ಗೆ 7ರಿಂದ ಸಂಜೆ 5ಠೇವಣಿ ಮೊತ್ತ ಎಷ್ಟು?

ಸಾಮಾನ್ಯ ವರ್ಗದ ಅಭ್ಯರ್ಥಿ ರೂ  10,000

ಪರಿಶಿಷ್ಟ ಜಾತಿ, ವರ್ಗ ರೂ 5,000

 

ಪ್ರತಿಕ್ರಿಯಿಸಿ (+)