ಇಂದಿನಿಂದ ಬಿತ್ತನೆಬೀಜ ರಿಯಾಯಿತಿ ಮಾರಾಟ

7

ಇಂದಿನಿಂದ ಬಿತ್ತನೆಬೀಜ ರಿಯಾಯಿತಿ ಮಾರಾಟ

Published:
Updated:

ದಾವಣಗೆರೆ: ಕೃಷಿ ಇಲಾಖೆ ವತಿಯಿಂದ 2013–14ರ ಹಿಂಗಾರು ಹಂಗಾಮಿಗೆ ಅನುಕೂಲ ಅಗುವಂತೆ ಸೆ.25ರಿಂದ ರಿಯಾಯಿತಿ ದರದಲ್ಲಿ ಬಿತ್ತನೆಬೀಜ ವಿತರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್‌.ಜಿ.ಗೊಲ್ಲರ್‌ ತಿಳಿಸಿದ್ದಾರೆ.ಪ್ರಮಾಣಿತ ಹಾಗೂ ನಿಜಚೀಟಿ ಬಿತ್ತನೆಬೀಜಗಳ ಪೂರೈಕೆ ಮತ್ತು ಇತರ ಹೂಡುವಳಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಗರಿಷ್ಠ 5 ಎಕರೆ ಮಿತಿಯೊಳಗೆ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮಾರಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ರಿಯಾಯಿತಿ ಬಿತ್ತನೆಬೀಜ ಪಡೆಯಲು ಇಚ್ಛಿಸುವ ರೈತರು ತಮ್ಮ ಗ್ರಾಮ ಲೆಕ್ಕಾಧಿಕಾರಿಯಿಂದ ಅನುಮತಿ ಹಾಗೂ ಸ್ವಂತದ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಒಂದು ಅನುಮತಿಗೆ ಒಬ್ಬ ರೈತ ಮಾತ್ರ ಸೌಲಭ್ಯ ಪಡೆಯಬಹುದು.ಬಿತ್ತನೆಬೀಜಗಳ ವಿತರಣೆಯನ್ನು ಸೆ.25ರಿಂದ ಹಂತ ಹಂತವಾಗಿ ಆರಂಭಿಸಲಾಗುವುದು. ಆರಂಭದಲ್ಲಿ ಜೋಳ, ಅಲಸಂದೆ, ಸೂರ್ಯಕಾಂತಿ ಬೀಜಗಳನ್ನು ಮಾತ್ರ ಒದಗಿಸಲಾಗುವುದು. ನಂತರ ಇತರ ಬೀಜಗಳನ್ನು ಮಳೆ ಮುನ್ನಡೆ ಗಮನಿಸಿ ನೀಡಲಾಗುವುದು. ಪ್ರತಿ ಕೆ.ಜಿ. ಪ್ರಮಾಣಿತ ಜೋಳ ಬಿತ್ತನೆಬೀಜಕ್ಕೆ ರೂ. 10, ಹೈಬ್ರೀಡ್‌ ಸೂರ್ಯಕಾಂತಿಗೆ ರೂ. 80 ಹಾಗೂ ಅಲಸಂದೆಗೆ ರೂ. 20 ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಬಿತ್ತನೆಬೀಜ ಪಡೆಯುವ ಕ್ಷೇತ್ರ ಗುಂಟೆಗಳಿದ್ದಲ್ಲಿ ಆ ಅನುಪಾತದಲ್ಲಿ ರಿಯಾಯಿತಿ ಸೌಲಭ್ಯ ನೀಡಲಾಗುವುದು. ಆ ಪ್ಯಾಕೆಟ್‌ನಲ್ಲಿ ಉಳಿದ ಬಿತ್ತನೆಬೀಜಕ್ಕೆ ಸಂಬಂಧಿಸಿದಂತೆ ರೈತರು ಪೂರ್ಣ ದರ ಸಂದಾಯ ಮಾಡಬೇಕು. ಯಾವುದೇ ಕಾರಣಕ್ಕೂ ತೆರೆದ ಪ್ಯಾಕೆಟ್‌ಗಳಲ್ಲಿ ಬೀಜ ಮಾರುವುದಿಲ್ಲ. ಯಾವುದೇ/ ಎಷ್ಟೇ ಬೆಳೆಯಾದರೂ ಸಹ ಪ್ರತಿ ಎಕರೆಗೆ ಒಂದು ಪ್ಯಾಕೆಟ್‌ನಂತೆ ಗರಿಷ್ಠ 5 ಎಕರೆಗೆ 5 ಪ್ಯಾಕೆಟ್‌ ಬಿತ್ತನೆಬೀಜ ಮಾತ್ರ ಪೂರೈಸಲಾಗುವುದು. ಬಿತ್ತನೆಬೀಜಗಳ ಗುಣಮಟ್ಟದ ಬಗ್ಗೆ ಮೊದಲೇ ಖಾತ್ರಿ ಮಾಡಿಕೊಳ್ಳಲಾಗಿದೆ. ಆದರೆ,ಕೆಲವು ಪ್ರಕರಣಗಳಲ್ಲಿ ಅನಗತ್ಯ ದೂರು ಕೇಳಿ ಬಂದಿದ್ದು, ಬೀಜ ಖರೀದಿಸುವ ಮುನ್ನ ಹವಾಮಾನಕ್ಕೆ ಅನುಗುಣವಾಗಿ ಅಗತ್ಯ ಸಾಗವಳಿ ಕ್ರಮದ ಬಗ್ಗೆ ಖಚಿತ ಮಾಹಿತಿ ಪಡೆಯಬೇಕು ಎಂದು ಕೋರಿದ್ದಾರೆ.ಹರಿಹರ ತಾಲ್ಲೂಕಿನಲ್ಲಿ ಎಪಿಎಂಸಿ ದಾಸ್ತಾನು ಮಳಿಗೆಯಲ್ಲಿ 1, ಹರಪನಹಳ್ಳಿ ತಾಲ್ಲೂಕಿನಲ್ಲಿ ಚಿಗಟೇರಿ, ತೆಲಗಿ, ಅರಸೀಕೆರೆ, ಹರಪನಹಳ್ಳಿಯ ರೈತ ಸಂಪರ್ಕ ಕೇಂದ್ರ, ಹೊನ್ನಾಳಿ ತಾಲ್ಲೂಕಿನ ನ್ಯಾಮತಿ, ಗೋವಿನಕೋವಿ, ಹೊನ್ನಾಳಿ, ಸಾಸ್ವೇಹಳ್ಲಿ ರೈತ ಸಂಪರ್ಕ ಕೇಂದ್ರ, ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು, ದೇವರಹಳ್ಳಿ, ಚನ್ನಗಿರಿ ರೈತ ಸಂಪರ್ಕ ಕೇಂದ್ರಗಳು, ಜಗಳೂರು ತಾಲ್ಲೂಕಿನಲ್ಲಿ ಜಗಳೂರು, ಹೊಸಕೆರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮಾರಾಟ ಕೇಂದ್ರ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.ಹೆಚ್ಚು ಮೌಲ್ಯದ ನೋಟು ನೀಡುವವರ ವಿವರ ದಾಖಲಿಸಲು ಹಾಗೂ ಪ್ರತ್ಯೇಕವಾಗಿ ಪರಿಶೀಲಿಸಲು ರೈತರು ಸಹಕಾರ ನೀಡಬೇಕು. ಎಲ್ಲ ರಿಯಾಯಿತಿ ಬೀಜ ಮಾರಾಟ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ವಿಮಾ ನಿಯಮಗಳಿಗೆ ಅನುಗುಣವಾಗಿ ಬೆಳಿಗ್ಗೆ 9.30ರಿಂದ ಸಂಜೆ 5ರವರೆಗೆ ಮಾತ್ರ ಬೀಜ ಮಾರಾಟ ಮಾಡಲಾಗುವುದು ಎಂದು ಗೊಲ್ಲರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry