ಶುಕ್ರವಾರ, ಜೂನ್ 18, 2021
28 °C

ಇಂದಿನಿಂದ ಬೆಂಗಳೂರಲ್ಲಿ ಹಾಕಿ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ ಕೂಟಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹಾಕಿ ಆಟಗಾರರ ತರಬೇತಿ ಶಿಬಿರ ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾಗಲಿದೆ. ಶಿಬಿರ ಸಂಘಟಿಸುವುದಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ (ಎಚ್‌ಐ) ಮತ್ತು ಕ್ರೀಡಾ ಸಚಿವಾಲಯದ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಆದರೆ ಇಬ್ಬರ ನಡುವಿನ `ಹೋರಾಟ~ ಸೋಮವಾರ ಶಮನಗೊಂಡಿತು.ಇದರಿಂದ ಬೆಂಗಳೂರಿನ ಎಸ್‌ಎಐ ಕೇಂದ್ರದಲ್ಲಿ ಮಂಗಳವಾರದಿಂದ ಶಿಬಿರಕ್ಕೆ ಚಾಲನೆ ನೀಡಲು ನಿರ್ಧರಿಸಲಾಯಿತು. ಹಾಕಿ ಶಿಬಿರ ಆರಂಭಿಸಲು ಕ್ರೀಡಾ ಸಚಿವಾಲಯ ಅನುಮತಿ ನೀಡುತ್ತಿಲ್ಲ ಎಂದು ಎಚ್‌ಐ ಆರೋಪಿಸಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದ ಸಚಿವಾಲಯ, `ಶಿಬಿರದ ದಿನಾಂಕವನ್ನು ಹಾಕಿ ಇಂಡಿಯಾ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿದೆ~ ಎಂದು ದೂರಿತ್ತು.`ಆಟಗಾರರ ಶಿಬಿರ ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾಗಲಿದೆ~ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರಾ ನುಡಿದರು. ಅದೇ ರೀತಿ ಲಂಡನ್ ಒಲಿಂಪಿಕ್ ಕೂಟದವರೆಗೆ ಹಾಕಿ ಕ್ರೀಡೆಯ `ದೀರ್ಘಾವಧಿಯ ಅಭಿವೃದ್ಧಿ ಯೋಜನೆ~ಗೆ ಕ್ರೀಡಾ ಸಚಿವಾಲಯ ತನ್ನ ಅನುಮತಿ ನೀಡಿದೆ ಎಂದು ಅವರು ಸೋಮವಾರ ನಡೆದ ಸಭೆಯ ಬಳಿಕ ತಿಳಿಸಿದರು.`ಶಿಬಿರ ಎಸ್‌ಎಐ ಕೇಂದ್ರದಲ್ಲಿ ಸೋಮವಾರ ಆರಂಭವಾಗಬೇಕಿತ್ತು. ಆದರೆ ಅದಕ್ಕೆ ಕ್ರೀಡಾ ಸಚಿವಾಲಯ ಅನುಮತಿ ನೀಡಿಲ್ಲ~ ಎಂದು ಎಚ್‌ಐ ಮೂಲಗಳು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.ಈ ಆರೋಪವನ್ನು ಅಲ್ಲಗಳೆದಿದ್ದ ಸಚಿವಾಲಯ, `ಹಾಕಿ ಇಂಡಿಯಾ ಮೊದಲ ಹಂತದ ಶಿಬಿರವನ್ನು ಮಾ. 13 ರಿಂದ ಏಪ್ರಿಲ್ 27ರ ವರೆಗೆ ನಡೆಸಲು ನಿರ್ಧರಿಸಿತ್ತು. ಆದರೆ ವಿಶ್ವ ಹಾಕಿ ಸರಣಿ ನಡೆಯುತ್ತಿರುವ ಕಾರಣ ದುರುದ್ದೇಶದಿಂದ ಶಿಬಿರವನ್ನು ಬೇಗನೇ ಆರಂಭಿಸಲು ಎಚ್‌ಐ ತೀರ್ಮಾನಿಸಿದೆ~ ಎಂದು ಹೇಳಿದೆ.`ನಿಗದಿತ ವೇಳಾಪಟ್ಟಿಯಂತೆ ಶಿಬಿರವನ್ನು ಮಾ. 13 ರಂದು ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಭಾರತ ಹಾಕಿ ತಂಡ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಪಡೆದ ಮರುದಿನ ಬಾತ್ರಾ ಅವರು ಪತ್ರ ಬರೆದು ಶಿಬಿರ ಮಾ. 5 ರಂದು ಆರಂಭವಾಗಲಿದೆ ಎಂದಿದ್ದರು~ ಎಂಬುದಾಗಿ ಮೂಲಗಳು ತಿಳಿಸಿವೆ.`ಇತ್ತೀಚೆಗೆ ನಡೆದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಆಡಿದ್ದ ಹದಿನೆಂಟು ಆಟಗಾರರು ಮಾ. 15 ರಂದು ಶಿಬಿರ ಸೇರಿಕೊಳ್ಳುವರು. ಇತರ 30 ಆಟಗಾರರು ಮಂಗಳವಾರ ಶಿಬಿರಕ್ಕೆ ಆಗಮಿಸುವರು~ ಎಂದು ಬಾತ್ರಾ ಹೇಳಿದ್ದಾರೆ.ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಂಡಿರುವ ಆಟಗಾರರ ಮೇಲೆ ಕ್ರಮ ಕೈಗೊಳ್ಳುವಿರಾ ಎಂಬ ಪ್ರಶ್ನೆಗೆ ಬಾತ್ರಾ, `ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ, ಮಂಗಳವಾರ ಆರಂಭವಾಗುವ ಶಿಬಿರದಲ್ಲಿ ಯಾವೆಲ್ಲಾ ಆಟಗಾರರು ತಮ್ಮ ಹೆಸರು ನೋಂದಾಯಿಸುವರು ಎಂಬುದನ್ನು ಕಾದುನೋಡುವ~ ಎಂದು ಉತ್ತರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.