ಭಾನುವಾರ, ಮೇ 9, 2021
25 °C

ಇಂದಿನಿಂದ ಶ್ರೀರಾಮುಲು ಪಾದಯಾತ್ರೆ

ಪ್ರಜಾವಾಣಿ ವಾರ್ತೆ / ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಬಳ್ಳಾರಿ ರೆಡ್ಡಿ ಬಂಧುಗಳು ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಎಂದರೆ ಹೆಲಿಕಾಪ್ಟರ್ ಮತ್ತು ವಿಮಾನದಲ್ಲಿ ಹಾರಾಡುವ ಗಣಿ ಧಣಿಗಳು. ಕಾಲಿಗೆ ಧೂಳು ಹತ್ತದಂತೆ ವಾಹನಗಳಲ್ಲಿ ಓಡಾಡುವವರು.ಅವರಂಥವರು ನೂರಾರು ಕಿ.ಮೀ. ನಡೆದುಕೊಂಡು ಹೋಗುವುದೆಂದರೆ ಯಾರೂ ನಂಬದ ಮಾತು. ಆದರೆ ಶ್ರೀರಾಮುಲು ಅಂಥ ಸಾಹಸ ಮಾಡಲು ಹೊರಟಿದ್ದಾರೆ. ಯಾವಾಗಲೂ ಪಂಚತಾರಾ ಹೋಟಲ್‌ನಲ್ಲಿ ಉಳಿದುಕೊಳ್ಳುವ ಅವರು ಏಪ್ರಿಲ್ 24 ರಿಂದ 54 ದಿನ ಸತತವಾಗಿ ಬಡವರ ಜೋಪಡಿಗಳಲ್ಲಿ ಮಲಗಿಕೊಳ್ಳಲಿದ್ದಾರೆ. ರಸ್ತೆ ಬದಿಯಲ್ಲಿ ಕುಳಿತು ಊಟ ಮಾಡಲಿದ್ದಾರೆ.ಸ್ವಾಭಿಮಾನಿ ಶ್ರೀರಾಮುಲು ಎಂದೇ ಈಗಾಗಲೇ ಗುರುತಿಸಿಕೊಂಡಿರುವ ಅವರು ಬಡವರ, ಹಿಂದುಳಿದವರಲ್ಲಿ ಸ್ವಾಭಿಮಾನದ ಬೀಜ ಬಿತ್ತಲು ಈ ಅಭಿಯಾನ ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ತೊರೆದು ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಗೊಂಡ ಅವರು ಈಗ ಬಿಎಸ್‌ಆರ್ (ಬಡವ, ಶ್ರಮಿಕ, ರೈತರ) ಹೆಸರಿನ ಪಕ್ಷ ಸ್ಥಾಪಿಸಿ ಅದನ್ನು ರಾಜ್ಯಾದ್ಯಂತ ಸಂಘಟಿಸುವ ಉದ್ದೇಶವನ್ನೂ ಹೊಂದಿದ್ದಾರೆ.ಅವರು ಕೈಗೊಳ್ಳುವ ಈ ಮಹತ್ವದ ಪಾದಯಾತ್ರೆ ಆರಂಭಿಸಲು ಸಾಮಾಜಿಕ ಬದಲಾವಣೆಯ ಹರಿಕಾರ ಬಸವಣ್ಣನ ಜನ್ಮದಿನ ಮತ್ತು ಅವರ ಕಾಯಕಭೂಮಿಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಇಲ್ಲಿ ಕಳೆದ ಒಂದು ತಿಂಗಳಿಂದ ಅವರ ಅಭಿಮಾನಿಗಳು ಪಾದಯಾತ್ರೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರರೆಡ್ಡಿ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ. ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಒಂದು ಲಕ್ಷ ಜನರು ಭಾಗವಹಿಸುವರು ಎಂಬ ಭರವಸೆ ಇವರದ್ದಾಗಿದೆ.24 ರಂದು ಬೆಳಿಗ್ಗೆ ಬಿ.ಶ್ರೀರಾಮುಲು ಅವರು ಇಲ್ಲಿನ ಅನುಭವ ಮಂಟಪ ಮತ್ತು ಇತರೆ ದೇವಸ್ಥಾನ, ದರ್ಗಾ ಮತ್ತು ವಿವಿಧ ವೃತ್ತಗಳಿಗೆ ಹೋಗಿ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡುವರು. ನಂತರ ಕೋಟೆಯಿಂದ ರಥ ಮೈದಾನದವರೆಗೆ ಮೆರವಣಿಗೆ ನಡೆಸಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.ಸಮಾರಂಭಕ್ಕಾಗಿ ರಥ ಮೈದಾನದಲ್ಲಿ ಬೃಹತ್ ಮಂಟಪ, ಆಕರ್ಷಕ ವೇದಿಕೆ ನಿರ್ಮಿಸಲಾಗಿದೆ. ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿನ ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನು, ಎಲ್ಲೆಡೆ ಕಟೌಟ್ ಹಾಕಿಸಲಾಗಿದೆ. ಇಲ್ಲಿಂದ ಹೊರಡುವ ಪಾದಯಾತ್ರೆ ಹುಮನಾಬಾದ್, ಗುಲ್ಬರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಜೂನ್ 17 ರಂದು ಬೆಂಗಳೂರು ತಲುಪುತ್ತದೆ.ಪ್ರತಿದಿನ 15-20 ಕಿ.ಮೀ ನಷ್ಟು ಕ್ರಮಿಸಿ ಅಲ್ಲಲ್ಲಿ ವಿಶ್ರಾಂತಿ ಪಡೆದು ಜನರ ಸಮಸ್ಯೆಗಳನ್ನು ಆಲಿಸಲಾಗುತ್ತದೆ. ಒಟ್ಟು 921 ಕಿ.ಮೀ.ನಷ್ಟು ಪಾದಯಾತ್ರೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ಪಾದಯಾತ್ರೆ ರಾಜ್ಯ ರಾಜಕೀಯದ ದಿಕ್ಕು ಬದಲಿಸಲು ಸಫಲ ಆಗುವುದೇ ಎಂಬುದನ್ನು ಕಾದು ನೋಡಬೇಕಷ್ಟೇ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.