ಸೋಮವಾರ, ಮೇ 17, 2021
21 °C

ಇಂದಿನಿಂದ 2ನೇ ಹಂತದ ಬಜೆಟ್ ಅಧಿವೇಶನ:ಕಾವೇರಿದ ಚರ್ಚೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಆರ್ಥಿಕ ನೀತಿಯ ಸ್ಥಿತಿಗತಿ ಮತ್ತು ಹೆಚ್ಚುತ್ತಿರುವ ನಕ್ಸಲರ ಹಾವಳಿ ಸೇರಿದಂತೆ ಇತರ ವಿಷಯಗಳನ್ನು ಮಂಗಳವಾರದಿಂದ ಆರಂಭವಾಗುವ ಎರಡನೇ ಹಂತದ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮೂಲಕ ಪ್ರತಿಪಕ್ಷಗಳು ಕಾವೇರಿದ ಚರ್ಚೆಯನ್ನು ಸೃಷ್ಟಿಸುವ ನಿರೀಕ್ಷೆ ಇದೆ.ಮಂಗಳವಾರ ಬಜೆಟ್ ಅಧಿವೇಶನ ಮುಂದುವರಿಯುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಬಿಜೆಪಿ ಸೋಮವಾರ ಪಕ್ಷದ ಸಂಸದೀಯ ಕಾರ್ಯಕಾರಿ ಸಮಿತಿ ಸಭೆ ನಡೆಸಿತು.2014ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೊದಲು ದೇಶದಲ್ಲಿ ಯಾವುದೇ ಪ್ರಮುಖ ಆರ್ಥಿಕ ಸುಧಾರಣೆಗಳು ನಡೆಯುವ ಸಾಧ್ಯತೆ ಇಲ್ಲ ಎಂಬ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ಹೇಳಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮತ್ತು ದೇಶದ ಆರ್ಥಿಕ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಬೇಕು ಎಂಬ ಬೇಡಿಕೆಯನ್ನು ಮುಂದಿಡಲು ಬಿಜೆಪಿ ನಿರ್ಧರಿಸಿದೆ.ಛತ್ತೀಸ್‌ಗಡದಲ್ಲಿ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ನಕ್ಸಲರು ಅಪಹರಿಸಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನೂ ಪ್ರಸ್ತಾಪಿಸಲು ಬಿಜೆಪಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪರಿಸ್ಥಿತಿಯನ್ನು ಸಂಸತ್ತಿನ ಮುಂದಿಡಲಿದೆ ಎಂದು ಮೂಲಗಳು ವಿವರಿಸಿವೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಮತ್ತು ನಿರುದ್ಯೋಗ ಸಮಸ್ಯೆಗಳ ಕುರಿತ ಚರ್ಚೆ ಈಗಾಗಲೇ ಲೋಕಸಭೆಯಲ್ಲಿ ಬಾಕಿ  ಉಳಿದಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮೇ 5ರಂದು ನಡೆಯಲಿರುವುದರಿಂದ, ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ) ವಿಚಾರವು ಸಂಸತ್ತಿನಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿಲ್ಲ ಎಂದೂ ಮೂಲಗಳು ಹೇಳಿವೆ.ಬಜೆಟ್ ಅಂಗೀಕಾರ: 8ರೊಳಗೆ ಪೂರ್ಣ

ನವದೆಹಲಿ (ಪಿಟಿಐ):  ಬಜೆಟ್ ಮತ್ತು 2012-13ನೇ ಸಾಲಿನ ಹಣಕಾಸು ಮಸೂದೆಯ ಅಂಗೀಕಾರ ಪ್ರಕ್ರಿಯೆ ಮೇ 8ರ ಒಳಗೆ ಪೂರ್ಣಗೊಳ್ಳುವ ವಿಶ್ವಾಸವನ್ನು ಕೇಂದ್ರ ಸರ್ಕಾರ ಸೋಮವಾರ ವ್ಯಕ್ತಪಡಿಸಿದೆ.ತೆರಿಗೆ ಮತ್ತು ಸಾಲ ಮರುಪಾವತಿ ಕಾಲಾವಧಿಯ ವಿಸ್ತರಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15 ದಿನಗಳ ಗಡುವು ನೀಡಿರುವ ಹೊರತಾಗಿಯೂ, ತೃಣಮೂಲ ಕಾಂಗ್ರೆಸ್ ಪಕ್ಷವು ಬಜೆಟ್ ಮತ್ತು ಹಣಕಾಸು ಮಸೂದೆ ಅಂಗೀಕಾರ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ತೊಡಗಿಕೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 

ಮೇ7-8ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆಯ ಕುರಿತ ಚರ್ಚೆ ಕೈಗೆತ್ತಿಕೊಳ್ಳುವ ಮತ್ತು ನಂತರ ಮತಕ್ಕೆ ಹಾಕುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಸರ್ಕಾರದ ಮಿತ್ರರಾಗಿದ್ದು, ಇನ್ನೂ ಪ್ರಮುಖ ಮಿತ್ರರಾಗಿಯೇ ಮುಂದುವರಿಯಲಿದ್ದಾರೆ. ಎಲ್ಲಾ ವಿಚಾರಗಳನ್ನು ಚರ್ಚಿಸಿ ಪರಿಹರಿಸಲಾಗುತ್ತದೆ. ಮೈತ್ರಿ ರಾಜಕಾರಣದಲ್ಲಿ ಇದೆಲ್ಲಾ ನಡೆಯುತ್ತಾ ಇರುತ್ತದೆ~ ಎಂದು ಮಮತಾ ಅವರು ನೀಡಿರುವ 15 ದಿನಗಳ ಗಡುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.