ಮಂಗಳವಾರ, ಮೇ 17, 2022
26 °C

ಇಂದಿನ ಸಂತೆಗಿಲ್ಲ ಹಿಂದಿನ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪ್ರಸ್ತುತ ಸಂದರ್ಭದಲ್ಲಿನ ಸಂತೆಗಳು ತನ್ನ ವೈಭವವನ್ನು ಕಳೆದುಕೊಳ್ಳುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಕಳವಳ ವ್ಯಕ್ತಪಡಿಸಿದರು.ಶಿವಮೊಗ್ಗ ತಾಲ್ಲೂಕಿನ ಆಯನೂರು ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಜಾನುವಾರು ಸಂತೆಯಲ್ಲಿ ಆಯ್ಕೆಯಾದ ಉತ್ತಮ ಎತ್ತಿನ ಜೋಡಿಗಳಿಗೆ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದಿನ ದಿನಗಳಲ್ಲಿ ಸಂತೆಗಳು ಜನರಿಂದ ಕಿಕ್ಕಿರಿದು ತುಂಬಿರುತ್ತಿತ್ತು. ಆದರೆ, ಇಂದು ನಗರೀಕರಣ ಹಾಗೂ ಸಾರಿಗೆ ವ್ಯವಸ್ಥೆಗಳ ಅನುಕೂಲಗಳಿಂದಾಗಿ ಉತ್ತಮ ಸರಕನ್ನು ಅರಸಿ ಜನರು ಸಂತೆಗಳಿಗಿಂತಲೂ ಪೇಟೆಗಳೆಡೆಗೆ ವಲಸೆ ಹೋಗುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಗ್ರಾಹಕರನ್ನು ಸೆಳೆಯುವಂತಹ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ರೈತರು ಬೆಳೆದ ಬೆಳೆಗೆ ಸೂಕ್ತವಾದ ಬೆಲೆ, ತಾಜಾ ಸರಕುಗಳ ವ್ಯಾಪಾರ, ಗ್ರಾಹಕರಿಗೆ ಕೈಗೆ ಎಟಕುವಂತೆ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಮಾರುಕಟ್ಟೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತಹ ಕೆಲಸಗಳು ನಡೆಯಬೇಕು ಎಂದು ಸಲಹೆ ನೀಡಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮ್ಮಿಕೊಳ್ಳುವ ಜನಪರ ಕಾರ್ಯ ಚಟುವಟಿಕೆಗಳೊಂದಿಗೆ ರೈತರೂ ಕೈ ಜೋಡಿಸುವಂತಾಗಬೇಕು. ಆಗ ಮಾತ್ರವೇ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ ಸಂತೆಗಳ ಬಳಿಯೇ ಉಗ್ರಾಣಗಳನ್ನು ನಿರ್ಮಾಣ ಮಾಡುವಂತಹ ಕಾರ್ಯವನ್ನು ಸರ್ಕಾರ ಮಾಡಲಿದೆ. ಸದ್ಯ ಬಳಕೆಯಲ್ಲಿರುವ ಉಗ್ರಾಣಗಳನ್ನು ಗ್ರಾಮ ಪಂಚಾಯ್ತಿ ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಸ್ವಚ್ಛತೆಯ ಕೊರತೆ ಹಿನ್ನೆಲೆಯಲ್ಲಿ ಅನೇಕ ಸಾಂಕ್ರಾಮಿಕ ಕಾಯಿಲೆಗಳು ಹರಡಲು ಕಾರಣವಾಗುತ್ತಿದೆ. ರೈತರೂ ಉಗ್ರಾಣಗಳ ಸ್ವಚ್ಛತೆ ನಿರ್ವಹಣಾ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಆಯನೂರು ಶಿವಾನಂದಪ್ಪ, ಸದಸ್ಯ ಸಿ. ಲಕ್ಷ್ಮೀಕಾಂತ ಶೆಟ್ಟಿ, ಮಹೇಂದ್ರ ಸಿಂಗ್, ಚಂದ್ರಕಲಾ ಬಾಬು, ದೇವರಾಜ್, ಶಶಿಧರ್, ವಿರೂಪಾಕ್ಷಪ್ಪ ಬಡಿಗೇರ, ವಿಜಯ್‌ಕುಮಾರ್, ದೇವಿಬಾಯಿ ಇದ್ದರು.  ಅಂಬುಲೆನ್ಸ್ ಸೇವೆ 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಡಿ ಫಿಬ್ರಿಲೇಟರ್ ಮತ್ತು ಮಲ್ಟಿ ಪ್ಯಾರಾ ಮೀಟರ್ ಮಾನಿಟರ್ ಸೌಲಭ್ಯ ಹೊಂದಿರುವ ತುರ್ತು ಅಂಬುಲೆನ್ಸ್ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದೆ.ಅಪಘಾತ, ಹೃದಯಾಘಾತ, ಯಾವುದೇ ಅಂಬುಲೆನ್ಸ್ ವಾಹನಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಹಾಗೂ ಸಾಂಕ್ರಾಮಿಕ ರೋಗಗಳು ಹರಡಿರುವ ಸಂದರ್ಭಗಳಲ್ಲಿ ಈ ತುರ್ತು ಅಂಬುಲೆನ್ಸ್ ವಾಹನದ ಸೌಲಭ್ಯವನ್ನು ಬಳಸಿಕೊಳ್ಳಬಹುದು. ವಾಹನವನ್ನು ಬಳಸಿಕೊಳ್ಳುವ ಫಲಾನುಭವಿಗಳೇ ವಾಹನದ ಇಂಧನ ವೆಚ್ಚವನ್ನು ಭರಿಸುವುದು ಕಡ್ಡಾಯ. ಸೌಲಭ್ಯಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿ ದೂರವಾಣಿ: 08182 222382, ಮೊಬೈಲ್: 94498 43063, ತಾಲ್ಲೂಕು ಆರೋಗ್ಯಾಧಿಕಾರಿ: 08182 220169, ಮೊಬೈಲ್: 94489 23809, ವಾಹನ ಚಾಲಕ ಮಂಜುನಾಥ್ ಮೊಬೈಲ್: 99804 88619 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.