ಇಂದಿರಾ ಕಾಲದ ಒಳನೋಟಗಳ ಕೊನೆಯ ಕೊಂಡಿ

ಶನಿವಾರ, ಜೂಲೈ 20, 2019
28 °C

ಇಂದಿರಾ ಕಾಲದ ಒಳನೋಟಗಳ ಕೊನೆಯ ಕೊಂಡಿ

Published:
Updated:

1975ರ ತುರ್ತು ಪರಿಸ್ಥಿತಿ ನಮ್ಮ ರಾಷ್ಟ್ರದ ಸ್ವಾತಂತ್ರ್ಯೋತ್ತರ ರಾಜಕೀಯದಲ್ಲಿ ಬಲು ಮಹತ್ವದ, ಚರ್ಚಾಸ್ಪದ ಘಟನೆ. `ಕರಾಳ ಅವಧಿ~ ಎಂದೇ ಬಿಂಬಿತವಾದ ತುರ್ತು ಪರಿಸ್ಥಿತಿಯನ್ನು ಹೇರಿದವರು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ, ಸರ್ವಾಧಿಕಾರಿ- ಪ್ರಜಾಪ್ರಭುತ್ವ ವಿರೋಧಿ ಎಂಬೆಲ್ಲಾ ಟೀಕೆಗಳು ಇಂದಿಗೂ ಅಪ್ಪಳಿಸುತ್ತಿವೆ. ತುರ್ತು ಪರಿಸ್ಥಿತಿಯನ್ನು, ಅದರ ಕಹಿ ನೆನಪುಗಳನ್ನು ಭಾವುಕ ನೆಲೆಯಲ್ಲಿ ನೋಡುವವರ ಸಂಖ್ಯೆ ಏನೂ ಕಡಿಮೆ ಇಲ್ಲ.ಇದೆಲ್ಲಾ ಜನಸಾಮಾನ್ಯರ ಮಾತಾಯಿತು. ಆದರೆ ಒಬ್ಬ ಸೌಮ್ಯ ಸ್ವಭಾವದ, ಅದುವರೆಗೆ ಅಷ್ಟಾಗಿ ಏಳುಬೀಳಿಲ್ಲದ ಯಶಸ್ವೀ ಜೀವನ ನಡೆಸಿದ್ದ, ರಾಷ್ಟ್ರದ ಅಧಿಕಾರ ಕೇಂದ್ರಕ್ಕೆ ತೀರಾ ಹತ್ತಿರವಿದ್ದ ಒಬ್ಬ ಸೂಕ್ಷ್ಮಮತಿ ಅಧಿಕಾರಿಗೆ ಅದರ ಬಗ್ಗೆ ಏನನ್ನಿಸುತ್ತದೆ? ಅದನ್ನು ಆತ ಹೇಗೆ ಅರಗಿಸಿಕೊಳ್ಳುತ್ತಾನೆ?- ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಮೂರು ದಿನಗಳ ಹಿಂದೆ ನಿಧನರಾದ ಪಿ.ಎನ್.ಧರ್ ಅವರ ಬದುಕು ನೋಡಬೇಕು.ಪೃಥ್ವಿನಾಥ್ ಧರ್ ಹುಟ್ಟಿದ್ದು 1918ರಲ್ಲಿ. ಕಾಶ್ಮೀರದ ಡಾ.ವಿಷ್ಣು ಹಕೀಂ- ರಾಧಾ ಹಕೀಂ ದಂಪತಿಯ ಮಗನಾಗಿ.  ಆರಂಭಿಕ ಶಿಕ್ಷಣ ಶ್ರೀನಗರದಲ್ಲಿ. ನಂತರ ಪದವಿಯಲ್ಲಿ ಅರ್ಥಶಾಸ್ತ್ರ ವ್ಯಾಸಂಗ ಮಾಡುವ ಸಲುವಾಗಿ ದೆಹಲಿಯ ಹಿಂದೂ ಕಾಲೇಜು ಪ್ರವೇಶ. ವ್ಯಾಸಂಗ ಮುಗಿದ ಮೇಲೆ ವೃತ್ತಿಗಾಗಿ ದೆಹಲಿಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ, ಚಿಂತನ-ಮಂಥನ, ಆರ್ಥಿಕ ಬೆಳವಣಿಗೆಗಳ ಕುರಿತು ಬರವಣಿಗೆ, ಅಧ್ಯಾಪನಗಳಲ್ಲಿ ತೊಡಗಿದ ನಿರುದ್ವಿಗ್ನ ಜೀವನ. ಇದೇ ವೇಳೆ, ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ ಗ್ರೋಥ್‌ನಲ್ಲಿ ಪ್ರಮುಖರಾಗಿ, ನ್ಯೂಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿ ಅವರು ಹೆಸರು ಮಾಡಿದ್ದರು. ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಸ್ಥಾಪನೆಯ್ಲ್ಲಲೂ ಭಾಗಿಯಾಗಿದ್ದರು.ಆರ್ಥಿಕ ತಜ್ಞರಾಗಿ ಗುರುತಿಸಿಕೊಂಡಿದ್ದ ಧರ್ ಅವರಿಗೆ  1970ರಲ್ಲಿ ಪ್ರಧಾನಿ ಸಚಿವಾಲಯದ (ಪಿಎಂಒ) ನೇಮಕಾತಿಗೆ ಬುಲಾವ್ ಬಂತು. ರಾಷ್ಟ್ರದ ಆರ್ಥಿಕ ಬೆಳವಣಿಗೆ ಉತ್ತೇಜಿಸುವ ನೀತಿ ನಿರೂಪಣೆಯಲ್ಲಿ ಭಾಗಿಯಾಗಬೇಕೆಂಬ ಬಯಕೆ ಹೊಂದಿದ್ದ ಅವರು ಅದನ್ನು ಒಪ್ಪಿಕೊಂಡರು.  ಆಗ ಐಎಎಸ್, ಎಎಫ್‌ಎಸ್ ಮಾಡದೆಯೂ ಪಿಎಂಒಗೆ ನೇಮಕಗೊಂಡಿದ್ದ ಅಧಿಕಾರಿ ಅವರೊಬ್ಬರೇ ಆಗಿದ್ದುದು ಅವರ ಹೆಗ್ಗಳಿಕೆ. ಆದರೆ, ಯಾವ ಆಸೆಯಿಂದ ಧರ್ ಪಿಎಂಒ ಕಚೇರಿ ಸೇರಿದರೋ, ಅದನ್ನು ಸಾಕಾರಗೊಳಿಸುವುದು ಅಷ್ಟು ಸುಲಭವಿರಲಿಲ್ಲ. ನೆರೆ ಹೊರೆಯ ರಾಷ್ಟ್ರಗಳೊಂದಿಗಿನ ಬಿಕ್ಕಟ್ಟಿನಿಂದಾಗಿ ಎಡರು ತೊಡರುಗಳು ಎದುರಾದವು.

 

ಆದರೂ ಅವರ ಇಚ್ಛಾಶಕ್ತಿ ದೊಡ್ಡದಿತ್ತು. ಆರ್ಥಿಕ ಉದಾರೀಕರಣದ ಬಗ್ಗೆ ಒಲವಿದ್ದ ಅವರು ನೀತಿ ನಿರೂಪಣೆಯಲ್ಲಿ ಭಾಗಿಯಾಗುವುದನ್ನು ಅವರು ಮಹಾನ್ ಅವಕಾಶವೆಂದೇ ಭಾವಿಸಿದ್ದರು. ಅವರೇ ಹೇಳುವ ಪ್ರಕಾರ, ಪಿಎಂಒದಲ್ಲಿ ಆರ್ಥಿಕ ನೀತಿ ನಿರೂಪಕನಾಗಿ ಖುಷಿಯ ಹಾಗೂ ಭ್ರಮ ನಿರಸನದ ಸಂದರ್ಭಗಳೆರಡರನ್ನೂ ಅನುಭವಿಸಿದ್ದಾರೆ. ಪಿಎಂಒ ಅಧಿಕಾರಿಯಾಗಿ ರಾಷ್ಟ್ರವು ಪ್ರಪ್ರಥಮ ಅಣು ಬಾಂಬ್ ಪರೀಕ್ಷೆ ನಡೆಸಿದ ಸಂದರ್ಭಕ್ಕೆ ಕೂಡ ಅವರು ಸಾಕ್ಷಿಯಾಗಿದ್ದರು. 1971ರ ಪಾಕ್ ಯುದ್ಧದ ನಂತರ, ಇಂದಿರಾಗಾಂಧಿ ಅವರು ಹೆಸರಾಂತ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದಾಗ ಅವರೊಂದಿಗೇ ಇದ್ದರು.ತಮ್ಮ ಒಳನೋಟದಿಂದಾಗಿ ಗಮನ ಸೆಳೆದಿದ್ದ ಧರ್ 1973-77ರ ಅವಧಿಯಲ್ಲಿ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದರು. ಅದು ರಾಷ್ಟ್ರದಲ್ಲಿ ಬದಲಾವಣೆಗಳ ಸಂಧಿಕಾಲ. ಅವರು ಎಣಿಸದೇ ಇದ್ದುದು ನಡೆಯಿತು. 1975ರಲ್ಲಿ ಇಂದಿರಾ ಅವರು ತುರ್ತು ಪರಿಸ್ಥಿತಿ ಘೋಷಿಸಿಬಿಟ್ಟರು.ಈ ಸ್ಥಿತಿಗೆ ಪೂರ್ವಭಾವಿಯಾಗಿ ಹಾಗೂ ಆನಂತರ ನಡೆದ ವಿದ್ಯಮಾನಗಳನ್ನು ಹತ್ತಿರದಿಂದ ಬಲ್ಲ ಧರ್ ಅವನ್ನೆಲ್ಲಾ ವಿಶ್ಲೇಷಿಸಿ ನಂತರ `ಇಂದಿರಾ ಗಾಂಧಿ, ಎಮರ್ಜನ್ಸಿ ಅಂಡ್ ಇಂಡಿಯನ್ ಡೆಮಾಕ್ರಸಿ~ ಎಂಬ ಪುಸ್ತಕ ಬರೆದರು. ಹಲವು ಸೂಕ್ಷ್ಮ ಅಂಶಗಳ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿರುವ ಹೆಸರಾಂತ ಪುಸ್ತಕ ಇದಾಗಿದೆ.ರಾಷ್ಟ್ರವೊಂದರ ತುರ್ತು ಪರಿಸ್ಥಿತಿಗೆ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬವನ್ನು ದೂಷಿಸಲಾಗದು. ಪ್ರತಿಯೊಂದು ರಾಜಕೀಯ ವ್ಯವಸ್ಥೆಗೂ ಅದಕ್ಕೆ ತಕ್ಕುದಾದ ರಾಜಕೀಯ ಸನ್ನಿವೇಶ ಇರಬೇಕು. ನಾವು ಬ್ರಿಟಿಷ್ ಸಂಸದೀಯ ಪ್ರಜಾಪ್ರಭುತ್ವ ಮಾದರಿ ಅಳವಡಿಸಿಕೊಂಡಿದ್ದೇವೆ. ಆದರೆ ಅದಕ್ಕೆ ಬೇಕಾದ ರಾಜಕೀಯ ಸನ್ನಿವೇಶ ವಿಕಾಸವಾಗಲು ಸುದೀರ್ಘ ಅವಧಿ ಹಿಡಿಯುತ್ತದೆ. ಹೀಗಾಗಿ ನಮ್ಮಲ್ಲಿ ವ್ಯವಸ್ಥೆ- ಸನ್ನಿವೇಶದ ನಡುವೆ ಕಂದರವಿದೆ ಎನ್ನುವ ಅವರ ಖಚಿತ ನಿಲುವು ಕೃತಿಯಲ್ಲಿ ಧ್ವನಿಸಿದೆ.ಕಾನೂನಿಗೆ ಗೌರವವೇ ಇಲ್ಲದ ಪರಿಸ್ಥಿತಿಯೇ ತುರ್ತು ಪರಿಸ್ಥಿತಿಗೆ ಕಾರಣವೇ? ತುರ್ತು ಸ್ಥಿತಿ ಇಂತಹ ಸನ್ನಿವೇಶಗಳ ತಾರ್ಕಿಕ ಅಂತ್ಯವೇ?- ಎಂಬ ಜಿಜ್ಞಾಸೆಗಳನ್ನು ಅವರ ಕೃತಿಯಲ್ಲಿ ಚರ್ಚಿಸಿದ್ದಾರೆ. ತುರ್ತು ಸ್ಥಿತಿಗೆ ಇಂದಿರಾ ಅವರು ಕಾರಣರಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅದು ಒಟ್ಟಾರೆ ಸಂದರ್ಭದ ಫಲಶ್ರುತಿಯೂ ಆಗಿತ್ತು ಎಂಬುದು ಅವರ ತರ್ಕವಾಗಿತ್ತು.

1974ರ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ರಾಜೀನಾಮೆ ನೀಡುವಂತೆ ಸಂಸದರಿಗೆ ಕೊಟ್ಟ ಕರೆಯಾಗಲೀ ಅಥವಾ ಮೊರಾರ್ಜಿ ದೇಸಾಯಿ ಅವರ ಆಮರಣಾಂತ ಉಪವಾಸವಾಗಲೀ ಅವರಿಗೆ ಎಳ್ಳಷ್ಟೂ ಸರಿ ಕಂಡಿರಲಿಲ್ಲ; ಇವನ್ನು ಬ್ಲ್ಯಾಕ್‌ಮೇಲ್ ಎಂದೇ ಅವರು ಪರಿಗಣಿಸಿದ್ದರು.ತುರ್ತು ಪರಿಸ್ಥಿತಿ ಒಂದಷ್ಟು ದಿನಗಳ ಮಟ್ಟಿಗಾದರೂ ರಾಷ್ಟ್ರದಲ್ಲಿ ಒಂದು ರೀತಿಯ ಸುವ್ಯವಸ್ಥೆ ತಂದಿತು ಎಂದು ಒಂದು ಹಂತದಲ್ಲಿ ಸಮರ್ಥನೆ ಮಾಡಿಕೊಂಡೂ ಇದ್ದಾರೆ. ಇಂದಿರಾ ಅವರು ಹೇರಿದ ತುರ್ತು ಸ್ಥಿತಿ ಯಾವುದೇ ಕ್ರಾಂತಿಗಾಗಿ ಹೂಡಿದ ಕ್ಷಿಪ್ರಕ್ರಾಂತಿಯ ಸಂಚು ಆಗಿರಲಿಲ್ಲ. ಪ್ರಜಾಪ್ರಭುತ್ವ ಹಳಿ ತಪ್ಪುತ್ತಿದೆ ಎಂಬುದಷ್ಟೇ ಇಂದಿರಾ ಭಾವನೆಯಾಗಿತ್ತು. ಅದನ್ನು ಪುನಃ ಸರಿ ಹಾದಿಗೆ ತರುವುದಕ್ಕಾಗಿ ತುರ್ತು ಪರಿಸ್ಥಿತಿಯ ಕಹಿ ಮದ್ದು ನೀಡಲು ಮುಂದಾಗಿದ್ದರು ಎನ್ನುತ್ತಾರೆ ಧರ್.2008ರಲ್ಲಿ ರಾಷ್ಟ್ರದ ಮೂರನೇ ಅತ್ಯುನ್ನತ ಗೌರವವಾದ ಪದ್ಮ ಭೂಷಣ ಪುರಸ್ಕೃತರಾಗಿ, `ಧರ್ ಸಾಹೇಬ್~ ಎಂದೇ ಜನಪ್ರಿಯರಾಗಿದ್ದ ಅವರದ್ದು ಸಾಂಸಾರಿಕವಾಗಿಯೂ ತೃಪ್ತ ಜೀವನ. ಪತ್ನಿ ಶೀಲಾ ಶಾಸ್ತ್ರೀ ಸಂಗೀತ ಗಾಯಕಿ ಹಾಗೂ ಲೇಖಕಿ. ದಂಪತಿಯ ಸ್ನೇಹಿತರ ಬಳಗವೂ ದೊಡ್ಡದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry