ಶುಕ್ರವಾರ, ನವೆಂಬರ್ 22, 2019
27 °C

ಇಂದಿರಾ-ಥ್ಯಾಚರ್ ಸಿಹಿ ನಂಟು

Published:
Updated:

ನವದೆಹಲಿ (ಐಎಎನ್‌ಎಸ್, ಪಿಟಿಐ):  ಮಾರ್ಗರೇಟ್ ಥ್ಯಾಚರ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಬಹುವಾಗಿ ಮೆಚ್ಚಿದ್ದರು. ವಿಶೇಷ ಎಂದರೆ, ಈ ಇಬ್ಬರೂ ನಾಯಕಿಯರ ಮನೋಧರ್ಮ ಹಾಗೂ ವ್ತಕ್ತಿತ್ವದಲ್ಲಿ ಸಾಕಷ್ಟೂ ಸಾಮ್ಯತೆ ಇತ್ತು.16 ವರ್ಷಗಳ ಕಾಲ ದೇಶ ಆಳಿದ ಇಂದಿರಾ ಗಾಂಧಿ ಅವರನ್ನು ಥ್ಯಾಚರ್ ಅವರು ಬ್ರಿಟನ್ ಪ್ರತಿಪಕ್ಷದ ನಾಯಕಿಯಾಗಿ ಹಾಗೂ ಪ್ರಧಾನಿಯಾಗಿ ಚೆನ್ನಾಗಿ ಬಲ್ಲವರಾಗಿದ್ದರು.`ಆರಂಭದ ದಿನಗಳಲ್ಲಿ ನಮ್ಮ ನಡುವೆ ಉತ್ತಮ ಬಾಂಧವ್ಯ ಇತ್ತು. ಉನ್ನತ ಹುದ್ದೆಯಲ್ಲಿದ್ದ ನಮಗೆ ಏಕಾಂಗಿ ಭಾವನೆ ಕಾಡಿತ್ತು. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರ ಜೊತೆಗೆ ಮಾತನಾಡಲು ಸಾಧ್ಯವಾಗಿರುವುದು ಸಂತಸ ತಂದಿತ್ತು' ಎಂದು 1995ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಥ್ಯಾಚರ್ ಹೇಳಿದ್ದರು.  ತಮ್ಮ ಹಾಗೂ ಇಂದಿರಾ ಗಾಂಧಿ ಅವರ ರಾಜಕೀಯ ನಿಲುವುಗಳು ಭಿನ್ನವಾಗಿದ್ದವು ಎಂಬುದನ್ನು ಅವರು ಈ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು.ಇದಕ್ಕೂ ಮುನ್ನ, ವಿರೋಧ ಪಕ್ಷದ ನಾಯಕಿಯಾಗಿದ್ದಾಗ 1976ರಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಆಗ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ತುರ್ತು ಪರಿಸ್ಥಿತಿ ಹೇರಿಕೆಯನ್ನು ಥ್ಯಾಚರ್ ವಿರೋಧಿಸಿದ್ದರು. ಇಂದಿರಾ ಗಾಂಧಿ ತಮ್ಮ ನಿರ್ಧಾರವನ್ನು ಸಮರ್ಥಿಸಿ ಹಲವು ಕಾರಣಗಳನ್ನು ನೀಡಿದ್ದರೂ, ಅವುಗಳನ್ನು ಅವರು ತಿರಸ್ಕರಿಸಿದ್ದರು.ಈ ಸಂದರ್ಭದಲ್ಲಿ ಅವರಿಗೆ ಇಂದಿರಾ ಗಾಂಧಿ ತಮ್ಮ ನಿವಾಸಲ್ಲಿ ಆತಿಥ್ಯ ನೀಡಿದ್ದರು. ಮನೆಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಇಂದಿರಾ ಪುತ್ರರಾದ ಸಂಜಯ್ ಹಾಗೂ ರಾಹುಲ್ ಗಾಂಧಿ ಕೂಡ ಇದ್ದರು. ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ಇಂದಿರಾ ಗಾಂಧಿ ಅವರು ಊಟ ಆದ ಮೇಲೆ ಸ್ವತಃ ತಟ್ಟೆಗಳನ್ನು ತೆಗೆದು ಸ್ವಚ್ಛಗೊಳಿದ್ದರು. ಇಂದಿರಾ ಅವರ ಈ ನಡವಳಿಕೆ ಥ್ಯಾಚರ್ ಮನಸ್ಸನ್ನು ತಟ್ಟಿತ್ತು.ಈ ಘಟನೆಯನ್ನು ಅವರು ತಮ್ಮ ಆತ್ಮಚರಿತ್ರೆ `ದ ಪಾತ್ ಟು ಪವರ್'ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿಕ್ರಿಯಿಸಿ (+)