ಇಂದು ಅಂಬಿ ಸಂಭ್ರಮ- ಸ್ನೇಹ ಸಂಗಮ

7

ಇಂದು ಅಂಬಿ ಸಂಭ್ರಮ- ಸ್ನೇಹ ಸಂಗಮ

Published:
Updated:

ಬೆಂಗಳೂರು: ಮಂಗಳವಾರ ಸಂಜೆ 6.30ಕ್ಕೆ ನಗರದ ಅರಮನೆ ಮೈದಾನದಲ್ಲಿ ನಟ ಅಂಬರೀಷ್ ಅವರ ಅರವತ್ತನೇ ಜನ್ಮದಿನಾಚರಣೆ `ಅಂಬಿ ಸಂಭ್ರಮ~ ನಡೆಯಲಿದ್ದು, ಭಾರತೀಯ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ದೇಶ ವಿದೇಶಗಳಲ್ಲಿರುವ ನೂರಾರು ಅಂಬಿ ಸ್ನೇಹಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 23 ದೇಶಗಳ ಐನೂರು ಮಂದಿ ಗಣ್ಯರು ನಗರಕ್ಕೆ ಸೋಮವಾರದಂದೇ ಆಗಮಿಸಿದ್ದಾರೆ. ರಜನಿಕಾಂತ್, ಶತ್ರುಘ್ನ ಸಿನ್ಹಾ, ಮೋಹನ್‌ಬಾಬು, ಕಮಲಹಾಸನ್, ಸರಿತಾ, ಚಿರಂಜೀವಿ, ಜಯಪ್ರದಾ ಸೇರಿದಂತೆ ನೂರಾರು ಚಿತ್ರೋದ್ಯಮಿಗಳು ಅಂಬಿ ಅವರಿಗೆ ಶುಭ ಕೋರಲಿದ್ದಾರೆ. ಅರಮನೆ ಮೈದಾನದ ನಾಲ್ಕು ದ್ವಾರಗಳಲ್ಲಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಸುಮಾರು ಒಂದು ಲಕ್ಷ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಸೋಮವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅಂಬರೀಷ್, `ಇದು ನನ್ನ ಜೀವನದ ಮಹತ್ವದ ಮೈಲುಗಲ್ಲು. ಜನರ ಪ್ರೀತಿ ಎಷ್ಟಿದೆ ಎಂಬುದು ಕಾರ್ಯಕ್ರಮದ ಪೂರ್ವ ತಯಾರಿಯಲ್ಲಿಯೇ ತಿಳಿಯುತ್ತಿದೆ. ನಾಳಿನ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎಂಬುದನ್ನು ನೋಡುವ ಕುತೂಹಲವಿದೆ~ ಎಂದರು.

ಸಂಘಟನೆಯ ಹೊಣೆ ಹೊತ್ತಿರುವ ನಿರ್ದೇಶಕ ಎಸ್.ನಾರಾಯಣ್ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು. `ವೇದಿಕೆಯ ಮೇಲೆ ಭಾಷಣದ ಅಬ್ಬರ, ನಿರೂಪಣೆಯ ಏಕತಾನತೆ ಇರುವುದಿಲ್ಲ. ಅಂಬಿ ಅವರ ಆಶಯದಂತೆಯೇ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ~ ಎಂದು ಅವರು ತಿಳಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅಂಬಿ ಬದುಕಿನ ವಿವಿಧ ಘಟ್ಟಗಳನ್ನು ನಿರೂಪಿಸುವ ವಿಶಿಷ್ಟ ಯತ್ನ ಮಾಡಲಾಗಿದೆ. ಅಂಬರೀಷ್ ಕುಟುಂಬ ಸದಸ್ಯರು ಕೂಡ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿರುವುದು ವಿಶೇಷ. ಇದಲ್ಲದೆ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ವಿ.ರವಿಚಂದ್ರನ್, ಸುದೀಪ್, ದರ್ಶನ್, ಯಶ್, ಆದಿತ್ಯ, ರಮ್ಯ, ರಾಧಿಕಾ ಪಂಡಿತ್, ಹರ್ಷಿಕಾ ಪೂಣಚ್ಚ, ಉಮಾಶ್ರೀ, ಪದ್ಮಾ ವಾಸಂತಿ,   ಗಣೇಶ್, ದುನಿಯಾ ವಿಜಿ, ರಂಗಾಯಣ ರಘು, ರವಿಶಂಕರ್, ಅಶೋಕ್, ರಮೇಶ್‌ಭಟ್ ಮತ್ತಿತರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕೃಷ್ಣ ವಿಹಾರ ಪ್ರವೇಶದ್ವಾರದಿಂದ ಚಿತ್ರರಂಗದ ಗಣ್ಯರು, ತ್ರಿಪುರವಾಸಿನಿ ಪ್ರವೇಶದ್ವಾರದಿಂದ ಅತಿಮುಖ್ಯ ಗಣ್ಯರು, ಹಾಗೂ ಜಯಮಹಲ್ ರಸ್ತೆಯ ಮೂರು ಹಾಗೂ ನಾಲ್ಕನೇ ಪ್ರವೇಶದ್ವಾರಗಳಿಂದ ಕ್ರಮವಾಗಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದಾಗಿದೆ. 140 ಅಡಿ ಅಗಲ, 80 ಅಡಿ ಉದ್ದ ಹಾಗೂ 8 ಅಡಿ ಎತ್ತರದ ಬೃಹತ್ ವೇದಿಕೆಯನ್ನು ಕಾರ್ಯಕ್ರಮಕ್ಕಾಗಿ ನಿರ್ಮಿಸಲಾಗಿದೆ. ಗಣ್ಯರು ಸುಲಭವಾಗಿ ತಲುಪಲು ರ‌್ಯಾಂಪ್ ರೀತಿಯ ಎರಡು ವೇದಿಕೆಗಳನ್ನು ಸೃಷ್ಟಿಸಲಾಗಿದೆ. ಸುಮಾರು 25 ದಿನಗಳಿಂದ 450 ಕಾರ್ಮಿಕರು ವೇದಿಕೆ ಹಾಗೂ ಗ್ರೀನ್‌ರೂಂ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಚಿತ್ರರಂಗದ ಎರಡು ಸಾವಿರ ಗಣ್ಯರು, ಇತರೆ ಕ್ಷೇತ್ರಗಳ ಐದು ಸಾವಿರ ಗಣ್ಯರು, ರಾಜಕಾರಣಿಗಳು, ಚಿತ್ರರಂಗದ ಏಳು ಸಾವಿರ ಸದಸ್ಯರು ಹಾಗೂ 25 ಸಾವಿರ ಅಭಿಮಾನಿಗಳು ಕೂರಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸುಮಾರು ಒಂದು ಲಕ್ಷ ಜನ ನಿಂತು ಕಾರ್ಯಕ್ರಮ ವೀಕ್ಷಿಸಲು ಅವಕಾಶವಿದೆ. ನಾಡಿನಾದ್ಯಂತ ಇರುವ ಅಭಿಮಾನಿಗಳಿಗಾಗಿ ವಿಶೇಷ ಟಿ-ಶರ್ಟ್ ನೀಡಲಾಗಿದೆ. ಅವರಿಗೆ ಗುರುತಿನ ಚೀಟಿ ಅಗತ್ಯವಿಲ್ಲ. ಮೂರನೇ ಪ್ರವೇಶ ದ್ವಾರದಿಂದ ಅವರು ಪ್ರವೇಶಿಸಬಹುದು. ಪಾಸ್‌ಗಳನ್ನು ನಕಲು ಮಾಡದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

`ಗೃಹ ಸಚಿವರು ಸಕಲ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸುಮಾರು ಒಂದು ಸಾವಿರ ಪೊಲೀಸರು ಹಾಗೂ ಐನೂರಕ್ಕೂ ಹೆಚ್ಚು ಖಾಸಗಿ ಭದ್ರತಾ ಸಿಬ್ಬಂದಿ ರಕ್ಷಣಾ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದಾರೆ. ಹಿಂದೆ ಕೆಲ ಕಾರ್ಯಕ್ರಮಗಳಲ್ಲಿ ಉಂಟಾದ ಅನನುಕೂಲಕರ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಾಗಿದೆ~ ಎಂದು ನಾರಾಯಣ್ ತಿಳಿಸಿದರು.

ಸಂಘಟಕ ರಾಕ್‌ಲೈನ್ ವೆಂಕಟೇಶ್, `ಕಾರ್ಯಕ್ರಮದ ಮುಕ್ತಾಯದ ಹಂತದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂಬರೀಷ್ ಅವರನ್ನು ಸನ್ಮಾನಿಸಲಿದೆ. ಪುಟ್ಟಣ್ಣ ಕಣಗಾಲ್ ಅವರ ಪತ್ನಿ, ವಿ.ರವಿಚಂದ್ರನ್ ಅವರ ತಾಯಿ, ನಟಿ ಪ್ರತಿಮಾದೇವಿಯವರಿಗೆ ಅಂಬರೀಷ್ ಈ ಸಂದರ್ಭದಲ್ಲಿ ಸನ್ಮಾನ ಮಾಡಲಿದ್ದಾರೆ~ ಎಂದರು.

ನೃತ್ಯ ನಿರ್ದೇಶಕ ಹರ್ಷ ಸೇರಿದಂತೆ ಚಿತ್ರರಂಗದ ವಿವಿಧ ಗಣ್ಯರು ಸೋಮವಾರ ಕಾರ್ಯಕ್ರಮದ ಪೂರ್ವತಯಾರಿಯಲ್ಲಿ ಭಾಗಿಯಾಗಿದ್ದರು. ಒಟ್ಟು ನಾಲ್ಕು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಹಾಡು, ನೃತ್ಯ, ಪ್ರಹಸನಗಳ ಮೂಲಕ `ಮಂಡ್ಯದ ಗಂಡು~ ಮೂಡಿ ಬರಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry