ಇಂದು ಐಪಿಎಲ್ ಹರಾಜು

7
ಕ್ರಿಕೆಟ್: ಪಾಂಟಿಂಗ್, ಕ್ಲಾರ್ಕ್ ಅವರತ್ತ ಎಲ್ಲರ ಚಿತ್ತ

ಇಂದು ಐಪಿಎಲ್ ಹರಾಜು

Published:
Updated:
ಇಂದು ಐಪಿಎಲ್ ಹರಾಜು

ಚೆನ್ನೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಆರನೇ ಅವತರಣಿಕೆಗೆ ಭಾನುವಾರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್ ಅವರತ್ತ ಫ್ರಾಂಚೈಸ್‌ಗಳ ಚಿತ್ತ ನೆಟ್ಟಿದೆ.ಈ ಬಾರಿ ಪಾಂಟಿಂಗ್ ಹಾಗೂ ಕ್ಲಾರ್ಕ್ ಸೇರಿದಂತೆ ಒಟ್ಟು 101 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಐಪಿಎಲ್‌ನ ಒಂಬತ್ತು ತಂಡಗಳು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಆದರೆ ಈ ವರ್ಷವೂ ಪಾಕಿಸ್ತಾನದ ಆಟಗಾರರಿಗೆ ಪ್ರವೇಶ ನಿರಾಕರಿಸಲಾಗಿದೆ.ಹರಾಜು ಪ್ರಕ್ರಿಯೆ ಇಲ್ಲಿನ ಐಟಿಸಿ ಗ್ರ್ಯಾಂಡ್ ಚೋಳಾ ಹೋಟೆಲ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಶುರುವಾಗಲಿದ್ದು, ಇಂಗ್ಲೆಂಡ್‌ನ ರಿಚರ್ಡ್ ಮೆಡ್ಲೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಈ ಪ್ರಕ್ರಿಯೆ ಸೋನಿ ಸಿಕ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ. ಈ ಬಾರಿಯ ಐಪಿಎಲ್ ಏಪ್ರಿಲ್ ಮೂರರಂದು ಶುರುವಾಗಲಿದೆ. ಉದ್ಘಾಟನಾ ಪಂದ್ಯ ಕೋಲ್ಕತ್ತದಲ್ಲಿ ನಡೆಯಲಿದೆ. 2012ರ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು.ಪ್ರತಿ ತಂಡಗಳು ಒಟ್ಟು 33 ಆಟಗಾರರನ್ನು ಹೊಂದುವ ಅವಕಾಶವಿದೆ. ಇದರಲ್ಲಿ ವಿದೇಶದ 11 ಆಟಗಾರರು ಇರಬಹುದು.

ಹರಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ತೊರೆದಿರುವುದರಿಂದ ಈ ಫ್ರಾಂಚೈಸ್ ಕ್ಲಾರ್ಕ್ ಅವರತ್ತ ಕಣ್ಣು ನೆಟ್ಟಿದೆ. ಕ್ಲಾರ್ಕ್ ಅವರನ್ನು ಹರಾಜಿನಲ್ಲಿ ಖರೀದಿಸಿ ನಾಯಕತ್ವ ಪಟ್ಟ ನೀಡಲು ಯೋಚಿಸುತ್ತಿದೆ.ಆಸ್ಟ್ರೇಲಿಯಾ ತಂಡದ ನಾಯಕ ಕ್ಲಾರ್ಕ್ ಹೋದ ವರ್ಷ ಪುಣೆ ವಾರಿಯರ್ಸ್ ತಂಡದಲ್ಲಿ ಆರು ಪಂದ್ಯ ಆಡಿದ್ದರು. ಆದರೆ ಅವರದ್ದು ಒಂದು ವರ್ಷದ ಒಪ್ಪಂದವಾಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಪಾಂಟಿಂಗ್ ಚೊಚ್ಚಲ ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್  ರೈಡರ್ಸ್ ಪರ ಆಡಿದ್ದರು. ಅವರು ಆಸ್ಟ್ರೇಲಿಯಾದ ದೇಶಿ ಟೂರ್ನಿ ಬಿಗ್ ಬಾಶ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹಾಗಾಗಿ ಅವರನ್ನು ಖರೀದಿಸಲು ಫ್ರಾಂಚೈಸ್‌ಗಳು ಪೈಪೋಟಿಗಿಳಿದಿವೆ.ಪಾಂಟಿಂಗ್ ಅವರನ್ನು ಖರೀದಿಸಲು ಐಪಿಎಲ್ ನೂತನ ತಂಡ ಹೈದರಾಬಾದ್ ಸನ್‌ರೈಸರ್ ಮುಂದಾಗುವ ಸಾಧ್ಯತೆ ಇದೆ. ಜೊತೆಗೆ ರಿಕಿ ಅವರನ್ನು ನಾಯಕರನ್ನಾಗಿ ನೇಮಿಸಲು ಅವರು ಯೋಜನೆ ರೂಪಿಸಿದ್ದಾರೆ.ಶ್ರೀಲಂಕಾದ ಸ್ಪಿನ್ನರ್ ಅಜಂತ ಮೆಂಡಿಸ್ ಹರಾಜಿಗೆ ಒಳಗಾಗಲಿದ್ದಾರೆ. ಅವರನ್ನು ಖರೀದಿಸಲು ಡೆಲ್ಲಿ ಡೇರ್‌ಡೆವಿಲ್ಸ್ ಹೆಚ್ಚು ಆಸಕ್ತಿ ತೋರಿಸುತ್ತಿದೆ. ಏಕೆಂದರೆ ಈ ತಂಡದಲ್ಲಿ ಸಮರ್ಥ ವೇಗಿಗಳಿದ್ದಾರೆ. ಆದರೆ ಉತ್ತಮ ಸ್ಪಿನ್ನರ್ ಇಲ್ಲ. ವೆಸ್ಟ್‌ಇಂಡೀಸ್‌ನ ವೇಗಿ ರವಿ ರಾಂಪಾಲ್ ಕೂಡ ಹರಾಜು ಕಣದಲ್ಲಿದ್ದಾರೆ.ಆದರೆ ಪಾಕ್ ಆಟಗಾರರು ಮತ್ತೆ ನಿರಾಸೆಗೆ ಒಳಗಾಗಿದ್ದಾರೆ. `ಫ್ರಾಂಚೈಸ್‌ಗಳು ತಂಡದ ಮೇಲೆ ಹೆಚ್ಚು ಹಣ ಹೂಡಿವೆ. ಹಾಗಾಗಿ ಪಾಕ್ ಆಟಗಾರರನ್ನು ಸೇರಿಸಿಕೊಂಡು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಅವರು ಇಷ್ಟಪಡಲಾರರು' ಎಂದು ಮೂಲಗಳು ತಿಳಿಸಿವೆ.ರಾಯಲ್ ಚಾಲೆಂಜರ್ಸ್ ತಂಡದ ಸ್ಥಿತಿಗತಿ

ಆರ್‌ಸಿಬಿ ತಂಡದಲ್ಲಿ ಭಾರತದ 18 ಆಟಗಾರರಿದ್ದಾರೆ. ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ವಿದೇಶದ 6 ಆಟಗಾರರು ಇದ್ದು, 5 ಸ್ಥಾನಗಳನ್ನು ತುಂಬಲು ಅವಕಾಶವಿದೆ. ಈ ತಂಡದವರ ಬಳಿ 13 ಕೋಟಿ ರೂಪಾಯಿ ಬಾಕಿ ಇದೆ.ಈ ತಂಡದವರು ಹರಾಜಿಗೆ ಮುನ್ನ ಅಭಿನವ್ ಮುಕುಂದ್, ಸಂದೀಪ್ ವಾರಿಯರ್, ಸನ್ನಿ ಸೊಹಾಲ್, ಪಿ.ಪರಮೇಶ್ವರನ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಉಳಿದಿರುವ ಹಣದಿಂದ ಈ ತಂಡದವರು ಯಾರನ್ನು ಖರೀದಿಸಬಹುದು ಎಂಬ ಕುತೂಹಲವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry