ಇಂದು ಕರಗದ ಸಂಭ್ರಮ

7

ಇಂದು ಕರಗದ ಸಂಭ್ರಮ

Published:
Updated:
ಇಂದು ಕರಗದ ಸಂಭ್ರಮ

ಬೆಂಗಳೂರು: ‘ಕರಗ’ದ ಆಚರಣೆಗೆ ನಗರ ಸಜ್ಜುಗೊಂಡಿದೆ. ಕಳೆದ 10 ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳ ಬಳಿಕ ಸೋಮವಾರ ರಾತ್ರಿ ಅಂತಿಮ ಮೆರವಣಿಗೆಯು ವಿವಿಧ ಬೀದಿಗಳಲ್ಲಿ 12 ಕಿಲೋ ಮೀಟರ್‌ವರೆಗೆ ಸಂಚರಿಸಲಿದೆ.ಶ್ರದ್ಧೆ ಮತ್ತು ಭಕ್ತಿಯಿಂದ ಕೂಡಿದ ಈ ಕರಗದಲ್ಲಿ ದ್ರೌಪದಿಯ ಮೂರ್ತಿಯನ್ನು ಹೊತ್ತುಕೊಳ್ಳುವ ಗೌರವ ಪಡೆದವರು ಸಿ.ಎಂ.ಲೋಕೇಶ್. ಅವರು ಇಲ್ಲಿನ ಧರ್ಮರಾಯಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಮನೆ-ಮನೆಗಳಿಗೆ ತೆರಳಲಿದ್ದಾರೆ.ಒಂಬತ್ತು ಬಾರಿ ಕರಗವನ್ನು ಹೊತ್ತುಕೊಂಡಿದ್ದ, ಪ್ರಸ್ತುತ ದೇವಸ್ಥಾನದ ಮುಖ್ಯ ಅರ್ಚಕರೂ ಆಗಿರುವ ಎಂ.ಅಭಿಮನ್ಯು ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕುಟುಂಬವೊಂದು ಐದು ವರ್ಷಗಳವರೆಗೆ ಅರ್ಚಕ ವೃತ್ತಿಯ ಬಗ್ಗೆ ತರಬೇತಿ ಪಡೆದ ನಂತರವೇ ಆ ಕುಟುಂಬದ ಒಬ್ಬರಿಗೆ ಕರಗ ಹೊರುವ ಜವಾಬ್ದಾರಿ ನೀಡಲಾಗುತ್ತದೆ. ಕುಟುಂಬದ ಪ್ರತಿಯೊಬ್ಬ ಯುವಕನಿಗೆ ಈ ಅವಕಾಶ ಲಭ್ಯವಾಗಲಿದೆ. ಬೋರಪ್ಪ ಅವರ ಕುಟುಂಬದ ಪೂಜಾರಿ ಚಿನ್ನಪ್ಪ 1966-67ರ ಸಾಲಿನಲ್ಲಿ ಕರಗ ಹೊತ್ತಿದ್ದನ್ನು ಕಂಡಿದ್ದೇನೆ’ ಎಂದರು.‘ತಿಗಳರ ಸಮುದಾಯದ ಕೇವಲ ನಾಲ್ಕು ಕುಟುಂಬಗಳು ಮಾತ್ರ ಕರಗ ಹೊರುವ ಅರ್ಹತೆ ಪಡೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನೆಲೆಯಲ್ಲೇ ಕರಗ ಹೊರುವವರನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತ ನೆಲೆಸಿರುವ ಸಮುದಾಯದ ಪ್ರಮುಖರು ಸಭೆ ಸೇರಿ ಆ ವರ್ಷ ಕರಗ ಹೊರುವ ಕುಟುಂಬವನ್ನು ಆಯ್ಕೆ ಮಾಡುತ್ತಾರೆ’ ಎಂದರು.‘ಈ ಸಭೆಯ ನಂತರ ಎಲ್ಲ ಪ್ರಮುಖರು ನಿರ್ದಿಷ್ಟ ದಿನಾಂಕದಂದು ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಭೆ ಸೇರುತ್ತಾರೆ. ಅಲ್ಲಿಯೇ ಕುಟುಂಬ ಮತ್ತು ವ್ಯಕ್ತಿಯನ್ನು ಆಯ್ಕೆ ಮಾಡಿ ಆತನಿಗೆ ಅರ್ಚಕ ವೃತ್ತಿಯ ಬಗ್ಗೆ ಹೇಳಿಕೊಡಲಾಗುತ್ತದೆ. ಕರಗ ಹೊರುವವರು ಪುತ್ರ ಸಂತಾನ ಹೊಂದಿರಬೇಕು ಎನ್ನುವ ನಿಯಮವಿದೆ’ ಎಂದು ಅವರು ನುಡಿದರು.ನಗರ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯಕ್ಕೆ ಕರಗ ಅತ್ಯಂತ ದೊಡ್ಡ ಉತ್ಸವ. ತಮಿಳುನಾಡಿನ ಕ್ಷತ್ರಿಯ ಪಂಗಡಕ್ಕೆ ಸೇರಿದವರೆಂದು ಹೇಳಲಾದ ಇವರು ಅನಾದಿಕಾಲದಿಂದಲೂ ಕರ್ನಾಟಕದ ಭಾಗವೇ ಆಗಿದ್ದಾರೆ. ಮೈಸೂರು ಒಡೆಯರಿಗೂ ಸೇವೆ ಸಲ್ಲಿಸಿದ್ದಾರೆ.‘ನಮ್ಮ ಹಿರಿಯರು ಬಹುಶಃ ಸೈನಿಕರಾಗಿದ್ದರು. ಅವರಿಗೆ ಬೆಂಗಳೂರು ಸುತ್ತಮುತ್ತ ಉಳುಮೆ ಮಾಡಲು ಒಡೆಯರು ಜಮೀನನ್ನು ನೀಡಿದ್ದರು. ನಾವು ತಮಿಳು ಭಾಷಿಕರಾಗಿದ್ದರೂ ಸಹ ನಮ್ಮ ಹೃದಯ ಮತ್ತು ಆತ್ಮ ಕರ್ನಾಟಕಕ್ಕೆ ಸೇರಿದ್ದು’ ಎಂದರು ಅಭಿಮನ್ಯು ಅಭಿಮಾನದಿಂದ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry