ಇಂದು ಕೀನ್ಯಾ ಜೊತೆ ಪೈಪೋಟಿ; ಸಿಂಹಳೀಯರನ್ನು ಕಾಡುತ್ತಿರುವ ಕಹಿ ನೆನಪು,.........

7

ಇಂದು ಕೀನ್ಯಾ ಜೊತೆ ಪೈಪೋಟಿ; ಸಿಂಹಳೀಯರನ್ನು ಕಾಡುತ್ತಿರುವ ಕಹಿ ನೆನಪು,.........

Published:
Updated:

ಕೊಲಂಬೊ: ಪಾಕಿಸ್ತಾನದ ಕೈಯಲ್ಲಿ ಅನುಭವಿಸಿರುವ ಸೋಲಿನ ಆಘಾತದಿಂದ ಹೊರಬರುವ ಪ್ರಯತ್ನದಲ್ಲಿರುವ ಶ್ರೀಲಂಕಾ ತಂಡ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಕೀನ್ಯಾ ತಂಡದ ಸವಾಲನ್ನು ಎದುರಿಸಲಿದೆ.ಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದೆನಿಸಿರುವ ಕುಮಾರ ಸಂಗಕ್ಕಾರ ಬಳಗ ಶನಿವಾರ ನಡೆದ ಪಂದ್ಯದಲ್ಲಿ ಪಾಕ್ ಕೈಯಲ್ಲಿ 11 ರನ್‌ಗಳ ನಿರಾಸೆ ಅನುಭವಿಸಿತ್ತು. ಕೀನ್ಯಾ ವಿರುದ್ಧ ಭರ್ಜರಿ ಗೆಲುವು ಪಡೆದು ಆತ್ಮವಿಶ್ವಾಸವನ್ನು ಮರಳಿ ಪಡೆಯುವ ಅವಕಾಶ ಲಂಕಾಕ್ಕೆ ಲಭಿಸಿದೆ.ಹಳೆಯ ಸೋಲಿಗೆ ಮುಯ್ಯಿ ತೀರಿಸುವ ತವಕದೊಂದಿಗೆ ಲಂಕಾ ತಂಡ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವ ‘ಎ’ ಗುಂಪಿನ ಪಂದ್ಯಕ್ಕಾಗಿ ಕಣಕ್ಕಿಳಿಯಲಿದೆ. 2003ರ ವಿಶ್ವಕಪ್ ವೇಳೆ ಕೀನ್ಯಾ ತಂಡ ಲಂಕಾಕ್ಕೆ ಶಾಕ್ ನೀಡಿತ್ತು. ಇದೀಗ ಆ ಸೋಲಿಗೆ ಸೇಡುವ ತೀರಿಸುವ ಛಲದಲ್ಲಿ ಲಂಕಾ ತಂಡ ಇದೆ.ಮತ್ತೊಂದೆಡೆ ಕೀನ್ಯಾ ತಂಡ ತಾನಾಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಮಾತ್ರವಲ್ಲ ಈ ಎರಡೂ ಸೋಲುಗಳು ದೊಡ್ಡ ಅಂತರದಲ್ಲಿ ಬಂದೆರಗಿವೆ.ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಕೈಯಲ್ಲಿ 10 ವಿಕೆಟ್‌ಗಳ ಮುಖಭಂಗ ಎದುರಾಗಿತ್ತು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ಪಾಕಿಸ್ತಾನ ಎದುರು 205ರ ರನ್‌ಗಳ ಸೋಲು ಬಂದಪ್ಪಳಿಸಿತ್ತು.

ಜಿಮ್ಮಿ ಕಮಾಂಡೆ ನೇತೃತ್ವದ ತಂಡ ಆತ್ಮವಿಶ್ವಾಸದೊಂದಿಗೆ ಟೂರ್ನಿಗೆ ಆಗಮಿಸಿತ್ತು. ಮೊದಲ ಎರಡು ಪಂದ್ಯಗಳಲ್ಲೇ ಆ ಆತ್ಮವಿಶ್ವಾಸ ಕರಗಿಹೋಗಿದೆ. ಇನ್ನು ಏನಿದ್ದರೂ ತನ್ನ ಘನತೆ ಕಾಪಾಡಿಕೊಳ್ಳಲು ಹೋರಾಟ ನಡೆಸಲಿದೆ. ಆದರೂ ಲಂಕಾ ತಂಡ ಎದುರಾಳಿಗಳನ್ನು ಹಗುರವಾಗಿ ಕಾಣಲು ಸಿದ್ಧವಿಲ್ಲ. ಲಂಕಾ ಕೋಚ್ ಟ್ರೆವರ್ ಬೇಲಿಸ್ ಅವರು ಪೂರ್ಣ ಸಾಮರ್ಥ್ಯದೊಂದಿಗೆ ಆಡುವಂತೆ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.ಲಸಿತ್ ಮಾಲಿಂಗ ಆಯ್ಕೆಗೆ ಲಭ್ಯರಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಾಯದ ಕಾರಣ ಅವರು ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಇದೀಗ ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆದುಕೊಂಡಿದ್ದಾರೆ.ಮಾಲಿಂಗ ಸೋಮವಾರ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ಪಾಲ್ಗೊಂಡರು. ಎಂದಿನಂತೆ ದೀರ್ಘ ರನ್‌ಅಪ್ ಬಳಸಿ ಬೌಲಿಂಗ್ ನಡೆಸಿದರು. ಜೊತೆಗೆ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ತಾಲೀಮಿನಲ್ಲೂ ಪಾಲ್ಗೊಂಡರು.ಕೀನ್ಯಾ ತಂಡ ಈ ಮಹತ್ವದ ಪಂದ್ಯಕ್ಕೆ ಮುನ್ನ ಸಮಸ್ಯೆಯಲ್ಲಿ ಸಿಲುಕಿದೆ. ತಂಡದ ಕೋಚ್ ಹಾಗೂ ಆಟಗಾರರ ನಡುವೆ ಭಿನ್ನಾಭಿಪ್ರಾಯ ಎದ್ದಿದೆ ಎಂಬ ವರದಿ ಹೊರಬಿದ್ದಿದೆ. ವೆಸ್ಟ್ ಇಂಡೀಸ್‌ನವರಾದ ಕೋಚ್ ಎಲ್ಡಿನ್ ಬ್ಯಾಪ್ಟಿಸ್ಟ್ ಮತ್ತು ಆಟಗಾರರ ನಡುವಿನ ಭಿನ್ನಾಭಿಪ್ರಾಯದಿಂದ ತಂಡ ಕಳೆದ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದೆ ಎಂದು ಕೀನ್ಯಾ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಸಮೀರ್ ಇನಾಂದಾರ್ ಆರೋಪಿಸಿದ್ದಾರೆ. ಆದರೆ ತಂಡದಲ್ಲಿ ಒಡಕು ಉಂಟಾಗಿದೆ ಎಂಬ ವರದಿಯನ್ನು ನಾಯಕ ಜಿಮ್ಮಿ ಕಮಾಂಡೆ ಅಲ್ಲಗಳೆದಿದ್ದಾರೆ.

 ಶ್ರೀಲಂಕಾ

ಕುಮಾರ ಸಂಗಕ್ಕಾರ (ನಾಯಕ), ಮಾಹೇಲ ಜಯವರ್ಧನೆ, ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗ, ತಿಲಾನ್ ಸಮರವೀರ, ಚಾಮರ ಸಿಲ್ವಾ, ಚಾಮರ ಕಪುಗೆಡೆರಾ, ಆ್ಯಂಗೆಲೊ ಮ್ಯಾಥ್ಯೂಸ್, ತಿಸಾರಾ ಪೆರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡಿಸ್ ಹಾಗೂ ರಂಗನ ಹೆರಾತ್.

 ಕೀನ್ಯಾ

ಜಿಮ್ಮಿ ಕಮಾಂಡೆ (ನಾಯಕ), ಸೆರೆನ್ ವಾಟರ್ಸ್‌, ಅಲೆಕ್ಸ್ ಒಬಾಂಡ, ಡೇವಿಡ್ ಒಬುಯಾ, ಕಾಲಿನ್ಸ್ ಒಬುಯಾ, ಸ್ಟೀವ್ ಟಿಕೋಲೊ, ತನ್ಮಯ್ ಮಿಶ್ರಾ, ರಾಕೆಪ್ ಪಟೇಲ್, ಮೌರಿಸ್ ಔಮಾ, ಥಾಮಸ್ ಒಡೊಯೊ, ನೆಹೆಮಿಯಾ ಒದಿಯಾಂಬೊ, ಎಲಿಜಾ ಒಟೀನೊ, ಪೀಟರ್ ಒಂಗೊಂಡೊ, ಶೆಮ್ ನೋಚೆ, ಜೇಮ್ಸ್ ನೋಚೆ.ಅಂಪೈರ್: ಟೋನಿ ಹಿಲ್ ಮತ್ತು ಶಾವೀರ್ ತಾರಾಪುರ್ಮೂರನೇ ಅಂಪೈರ್:
ಇಯಾನ್ ಗೌಲ್ಡ್; ಮ್ಯಾಚ್ ರೆಫರಿ: ಕ್ರಿಸ್ ಬ್ರಾಡ್ಪಂದ್ಯದ ಆರಂಭ:
ಮಧ್ಯಾಹ್ನ 2.30ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry