ಇಂದು ಕುರುಬರ ಜಾಗೃತಿ ಸಮಾವೇಶ

7

ಇಂದು ಕುರುಬರ ಜಾಗೃತಿ ಸಮಾವೇಶ

Published:
Updated:
ಇಂದು ಕುರುಬರ ಜಾಗೃತಿ ಸಮಾವೇಶ

ದಾವಣಗೆರೆ:  ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ಮೇ 6ರಂದು ಆಯೋಜಿಸಿರುವ `ಹಾಲುಮತ ಮಹಾಸಭಾ ಶತಮಾನೋತ್ಸವ 2012~- ಕುರುಬರ ಜಾಗೃತಿ ಸಮಾವೇಶಕ್ಕೆ ದಾವಣಗೆರೆ ಸಜ್ಜಾಗಿದೆ.ಇಲ್ಲಿನ ಹರಿಹರ ರಸ್ತೆ ಜಿಎಂಐಟಿ ಪಕ್ಕದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ನಗರದಾದ್ಯಂತ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಮಾಜದ ನಾಯಕರ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ.1910ರಲ್ಲಿ ಈಗಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹಾಲುಮತ ಮಹಾಸಭಾದ ಪ್ರಥಮ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನದ ಶತಮಾನೋತ್ಸವ ಸವಿನೆನಪಿನಲ್ಲಿ, ಕುರುಬ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.`ಹಕ್ಕಬುಕ್ಕರ ವೇದಿಕೆ~ಯಲ್ಲಿ ಬೆಳಿಗ್ಗೆ 9ಕ್ಕೆ ಹೊಸದುರ್ಗದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಾಜಿ ಶಾಸಕ ಕೆ. ಮಲ್ಲಪ್ಪ ಧ್ವಜಾರೋಹಣ ನೆರವೇರಿಸುವರು. ಮಾಜಿ ಸಚಿವ ಡಾ.ವೈ. ನಾಗಪ್ಪ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಗೋ ಹನುಮಂತಪ್ಪ ಹಾಗೂ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.ಬೆಳಿಗ್ಗೆ 9.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜವಳಿ ಸಚಿವ ವರ್ತೂರು ಪ್ರಕಾಶ್ ಉದ್ಘಾಟಿಸುವರು. ಸಮಾವೇಶದ ಸ್ಮರಣಾರ್ಥ, ಗುಲ್ಬರ್ಗದಲ್ಲಿ ಕನಕ ಭವನ ಸ್ಥಾಪನೆಗೆ ಬಂಡೆಪ್ಪ ಕಾಶೆಂಪುರ್, ಹಾವೇರಿ ಉಚಿತ ವಿದ್ಯಾರ್ಥಿ ವಸತಿ ಶಾಲೆ ನಿರ್ಮಾಣಕ್ಕೆ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಹಾವೇರಿ ಕನಕ ಭವನಕ್ಕೆ ಮಾಜಿ ಸಚಿವ ಬಸವರಾಜ ಶಿವಣ್ಣನವರ ಶಂಕುಸ್ಥಾಪನೆ ನೆರವೇರಿಸುವರು.ಬೆಳಿಗ್ಗೆ 11ಕ್ಕೆ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಉದ್ಘಾಟಿಸುವರು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು. ಕೆ.ಆರ್. ನಗರ ಕನಕ ಗುರುಪೀಠ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ಸಿಂಧನೂರ ಶಾಖಾಮಠದ ಸಿದ್ದರಾಮಾನಂದ ಸ್ವಾಮೀಜಿ ನೇತೃತ್ವ ವಹಿಸುವರು.

 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪುಸ್ತಕ ಬಿಡುಗಡೆಗೊಳಿಸುವರು. ಬಿಬಿಎಂಪಿ ನೂತನ ಮೇಯರ್ ಡಿ. ವೆಂಕಟೇಶಮೂರ್ತಿ ಅವರನ್ನು ಮೈಸೂರು-ಕೊಡಗು ಸಂಸದ ಎಚ್. ವಿಶ್ವನಾಥ್ ಸನ್ಮಾನಿಸುವರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಸ್ವಾಮೀಜಿಗಳಿಗೆ ಗೌರವ ಸಮರ್ಪಿಸುವರು.ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಗಾಯತ್ರಿ ಶಾಂತೇಗೌಡ, ಕೆಪಿಎಸ್‌ಸಿ ಸದಸ್ಯ ಡಾ.ಎಂ. ನಾಗರಾಜ್, ಮಾಜಿ ಸಚಿವರಾದ ಎಚ್.ವೈ. ಮೇಟಿ, ಎಚ್.ಎಂ. ರೇವಣ್ಣ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ  ಒಂದು ಲಕ್ಷ ಮಂದಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry