ಇಂದು ಕುವೆಂಪು ವಿವಿ 22ನೇ ಘಟಿಕೋತ್ಸವ

7

ಇಂದು ಕುವೆಂಪು ವಿವಿ 22ನೇ ಘಟಿಕೋತ್ಸವ

Published:
Updated:

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ಫೆ. 8ರಂದು  14,099 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ 7,969 ವಿದ್ಯಾರ್ಥಿನಿಯರು, 6,130 ವಿದ್ಯಾರ್ಥಿಗಳು ಇದ್ದಾರೆ.ದೂರಶಿಕ್ಷಣ ನಿರ್ದೇಶನಾಲಯ ದಿಂದ 15,878 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, ಇದರಲ್ಲಿ 12,193 ವಿದ್ಯಾರ್ಥಿಗಳು ಹಾಗೂ 3,685 ವಿದ್ಯಾರ್ಥಿನಿಯರಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಒಟ್ಟು 59 ವಿದ್ಯಾರ್ಥಿಗಳು ಪಿ.ಎಚ್‌ಡಿ ಪಡೆಯಲು ಅರ್ಹರಾಗಿದ್ದು, 50 ಪುರುಷರು ಹಾಗೂ 9 ಮಹಿಳೆಯರಿದ್ದಾರೆ. ಎಂ.ಫಿಲ್ ಪದವಿಯನ್ನು ಒಟ್ಟು 36 ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಇದರಲ್ಲಿ 22 ಪುರುಷರು, 14 ಮಹಿಳೆಯರಿದ್ದಾರೆ ಎಂದು ವಿವರಿಸಿದರು.ಗೌರವ ಡಾಕ್ಟರೇಟ್: ಘಟಿಕೋತ್ಸವದಲ್ಲಿ ಏಳು ಜನ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು. ಇದರಲ್ಲಿ ಶಿಕ್ಷಣತಜ್ಞೆ ಅಜ್ರ, ಪ್ರಗತಿಪರ ಕೃಷಿಕ ದೇವಂಗಿ ಆರ್. ಪ್ರಪುಲ್ಲಚಂದ್ರ, ರಂಗಭೂಮಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೆ. ಜಗನ್ನಾಥಶಾಸ್ತ್ರಿ, ಸಹಕಾರಿ ಧುರೀಣ ಆರ್.ಎಂ. ಮಂಜುನಾಥಗೌಡ ಅವರಿಗೆ ಡಿ.ಲಿಟ್ ಹಾಗೂ ಆರ್ಯುವೇದ ತಜ್ಞ ಡಾ.ಪಿ.ಆರ್. ಕೃಷ್ಣಕುಮಾರ್, ಯೋಗತಜ್ಞೆ ಡಾ.ರಘುರಾಮ್ ನಾಗರತ್ನ ಅವರಿಗೆ ಡಿ.ಎಸ್ಸಿ ಪದವಿ ಪ್ರದಾನ ಮಾಡಲಾಗುವುದು ಎಂದರು.ಹಾಗೆಯೇ, ಡಾ.ಕೆ.ಎನ್. ಪ್ರಸನ್ನಕುಮಾರ್ ಡಿ.ಲಿಟ್ ಪದವಿ, ಡಾ.ಬಸವರಾಜ್ ಐ ಪಾವಟಿ ಡಿ.ಎಸ್ಸಿ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಜಿ. ಮಾಧವನ್ ನಾಯರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಅಧ್ಯಕ್ಷತೆ ವಹಿಸುವರು. 8ರಂದು ಬೆಳಿಗ್ಗೆ 11ಕ್ಕೆ ಘಟಿಕೋತ್ಸವ ಸಮಾರಂಭ ಆರಂಭವಾಗಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕುಲಸಚಿವ (ಆಡಳಿತ) ಪ್ರೊ.ಟಿ.ಆರ್. ಮಂಜುನಾಥ್, ಕುಲಸಚಿವ (ಪರೀಕ್ಷಾಂಗ) ಪ್ರೊ.ಎಸ್.ಎ. ಜಾವೀದ್, ಹಣಕಾಸು ಅಧಿಕಾರಿ ಹಿರೇಮಣಿ ನಾಯಕ ಮತ್ತಿತರರು ಉಪಸ್ಥಿತರಿದ್ದರು.

69 ವಿದ್ಯಾರ್ಥಿಗಳಿಗೆ 117 ಸ್ವರ್ಣ ಪದಕ

ಶಿವಮೊಗ್ಗ: ಘಟಿಕೋತ್ಸವದಲ್ಲಿ 117 ಸ್ವರ್ಣ ಪದಕಗಳಿದ್ದು, ಒಟ್ಟು 69 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. ಅದರಲ್ಲಿ ವಿದ್ಯಾರ್ಥಿನಿಯರು ಅತಿ ಹೆಚ್ಚು 43 ಹಾಗೂ ವಿದ್ಯಾರ್ಥಿಗಳು 26 ಜನ ಇದ್ದಾರೆ.ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಮಲ್ಲಿಕಾಭಟ್ ಅಕ್ಷರಶಃ ಈಗ ಚಿನ್ನದ ಹುಡುಗಿ.ಕುವೆಂಪು ವಿವಿ ಘಟಿಕೋತ್ಸವದಲ್ಲಿ ಅತಿ ಹೆಚ್ಚು 6 ಸ್ವರ್ಣ ಪದಕಗಳನ್ನು ಪಡೆಯಲಿರುವ ಮಲ್ಲಿಕಾಭಟ್ ಬಿ.ಇ. ಪದವಿ ವಿದ್ಯಾರ್ಥಿನಿ.ಹಾಗೆಯೇ, ದಾವಣಗೆರೆಯ ಲಲಿತಾ ಕಲಾ ಮಹಾವಿದ್ಯಾಲಯದ ಬಿವಿಎ ಪದವಿ ವಿದ್ಯಾರ್ಥಿ ಪಿ. ಪ್ರವೀಣ್ 4 ಸ್ವರ್ಣ ಪದಕ ಹಾಗೂ 1ನಗದು ಬಹುಮಾನ ಪಡೆಯುವರು. ಹಾಗೆಯೇ, 1ಪುರುಷ ಹಾಗೂ 2 ಮಹಿಳೆಯರು ಸೇರಿ ಒಟ್ಟು ಮೂರು ವಿದ್ಯಾರ್ಥಿಗಳು ತಲಾ 4 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಎಂ.ಎ. ಕನ್ನಡ ವಿದ್ಯಾರ್ಥಿ ವೈ.ಎನ್. ನವೀನ್‌ಕುಮಾರ್, ಶಂಕರಘಟ್ಟದ ಬಯೋಟೆಕ್ನಾಲಜಿ ವಿದ್ಯಾರ್ಥಿನಿ ಸಿ. ಆಶಾಜ್ಯೋತಿ, ದಾವಣಗೆರೆಯ ಎಸ್‌ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅನುಷಾ ಪದಕಗಳನ್ನು ತಲಾ ಹಂಚಿಕೊಳ್ಳುವವರು.ಶಂಕರಘಟ್ಟದ ಕನ್ನಡ ಅಧ್ಯಯನ ವಿಭಾಗದ ಎಂಎ ವಿದ್ಯಾರ್ಥಿನಿ ಡಿ. ಸೌಮ್ಯಾ 3 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆಯಲಿದ್ದಾರೆ. ಹಾಗೆಯೇ, 2 ಪುರುಷರು ಹಾಗೂ 4 ಮಹಿಳೆಯರು ತಲಾ 3 ಸ್ವರ್ಣ ಪದಕಗಳನ್ನು ಪಡೆಯುವರು. ಸಮಾಜಶಾಸ್ತ್ರ ವಿದ್ಯಾರ್ಥಿ ಎಸ್. ಮಂಜುನಾಥ, ಎಸ್.ಸಿ. ನಾಗರಾಜ, ಮೇಘ ಪಾಟೀಲ್, ಎಸ್.ವಿ. ಸುಮಾ, ಆರ್. ದಿವ್ಯಾರಾಣಿ ಹಾಗೂ ಬಿ. ಸಹನಾ ಪದಕ ಪಡೆಯಲಿದ್ದಾರೆ. ಇವರೆಲ್ಲರೂ ಶಂಕರಘಟ್ಟದ ಜ್ಞಾನಸಹ್ಯಾದ್ರಿಯ ಕ್ಯಾಂಪಸ್ ವಿದ್ಯಾರ್ಥಿಗಳು.ಎರಡು ಸ್ವರ್ಣ ಪದಕ ಮತ್ತು ಎರಡು ನಗದು ಬಹುಮಾನವನ್ನು ಶಂಕರಘಟ್ಟದ ಗಣಿತಶಾಸ್ತ್ರದ ವಿದ್ಯಾರ್ಥಿನಿ ಎಂ.ಕೆ. ರೂಪಾ ಪಡೆಯುವರು. ಎರಡು ಸ್ವರ್ಣ ಪದಕ ಮತ್ತು ಒಂದು ನಗದು ಬಹುಮಾನವನ್ನು ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಹಂಚಿಕೊಂಡಿದ್ದಾರೆ. ಕನ್ನಡ ವಿಭಾಗದ ಎನ್. ಮಂಜಪ್ಪ, ಎಸ್. ತಿಪ್ಪೇಸ್ವಾಮಿ ಹಾಗೂ ಇತಿಹಾಸ ವಿಭಾಗದ ಬಿ. ರಮೇಶ್ ಸ್ವೀಕರಿಸಲಿದ್ದಾರೆ. ಈ ಮೂವರು ಶಂಕರಘಟ್ಟದ ವಿದ್ಯಾರ್ಥಿಗಳು.ಹಾಗೆಯೇ ಸಾಗರದ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಎನ್.ಜಿ. ರಾಜೇಶ್ವರಿ, ಚಿಕ್ಕಮಗಳೂರಿನ ಎಂ.ಎಲ್.ಎಂ.ಎನ್. ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ವಿದ್ಯಾರ್ಥಿನಿ ಪವಿತ್ರಾ ಎರಡು ಸ್ವರ್ಣ ಪದಕ, ಒಂದು ನಗದು ಬಹುಮಾನ ಸ್ವೀಕರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry