ಇಂದು ಕೇಂದ್ರ ಬಜೆಟ್: ಗರಿಗೆದರಿದ ನಿರೀಕ್ಷೆ

7

ಇಂದು ಕೇಂದ್ರ ಬಜೆಟ್: ಗರಿಗೆದರಿದ ನಿರೀಕ್ಷೆ

Published:
Updated:

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಹಣದುಬ್ಬರದಿಂದ ಬಸವಳಿದಿರುವ ಜನತೆಯನ್ನು ಖುಷಿಪಡಿಸುವ ಉದ್ದೇಶದಿಂದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು  2011-12ನೇ ಸಾಲಿನ ಮುಂಗಡ ಪತ್ರದಲ್ಲಿ ವೇತನದಾರರಿಗೆ ಆದಾಯ ಕರದಲ್ಲಿ ರಿಯಾಯ್ತಿ ತೋರಿಸುವ ಸಾಧ್ಯತೆಗಳಿವೆ.ಈಗಿರುವ ಆದಾಯ ಕರ ಮಿತಿಯನ್ನು ವಾರ್ಷಿಕ 1.60 ಲಕ್ಷದಿಂದ 1.80 ಲಕ್ಷಕ್ಕೆ ಏರಿಸಬಹುದು ಎಂದು ನಿರೀಕ್ಷಿಸಲಾಗಿದೆ. 2012ರ ಏಪ್ರಿಲ್ ವೇಳೆಗೆ ನೇರ ತೆರಿಗೆ ಮಿತಿಯನ್ನು ಎರಡು ಲಕ್ಷ ರೂಪಾಯಿಗಳಿಗೆ ಏರಿಸಲಾಗುವುದು ಎಂದು ಹಣಕಾಸು ಸಚಿವಾಲಯ ಈಗಾಗಲೇ ಭರವಸೆ ನೀಡಿರುವುದರಿಂದ ಈ ಬಜೆಟ್‌ನಲ್ಲಿ ವೇತನದಾರರು ಆದಾಯ ಕರ ಮಿತಿ 1.80 ಲಕ್ಷಕ್ಕೆ ಏರಬಹುದು ಎಂಬ ಆಶಾಭಾವನೆ ಹೊಂದಿದ್ದಾರೆ.ಮೂಲಸೌಕರ್ಯ ಬಾಂಡ್‌ಗಳಲ್ಲಿಯ ಹೂಡಿಕೆದಾರರಿಗೆ ಈಗ 20ಸಾವಿರ ರೂಪಾಯಿಗಳ ಹೂಡಿಕೆಯವರೆಗೆ ಸಂಪೂರ್ಣ ಕರ ವಿನಾಯ್ತಿ ಇದ್ದು, ಈ ಬಜೆಟ್‌ನಲ್ಲಿ ಈ ಮಿತಿಯನ್ನು ಏರಿಸಿ ಮೂಲಸೌಕರ್ಯ ರಂಗದ ಬಂಡವಾಳ ಕೊರತೆಯನ್ನು ದೂರ ಮಾಡಲು ಮುಖರ್ಜಿ ಪ್ರಯತ್ನಿಸಬಹುದು ಎಂದು ನಿರೀಕ್ಷಿಸಲಾಗಿದೆ.ಸಂಸತ್ತಿನಲ್ಲಿ ಮಂಡಿಸಲಾಗಿರುವ 2010-11ನೇ ಆರ್ಥಿಕ ಸಮೀಕ್ಷೆಯಲ್ಲಿ  ವಿತ್ತೀಯ ಕೊರತೆ  ಶೇಕಡಾ 5.5ರಿಂದ 4.8ಕ್ಕೆ ಇಳಿಯಬಹುದು ಎಂದು ಹೇಳಲಾಗಿದೆ.ಅಸ್ಸಾಂ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ವಿತ್ತೀಯ ಕೊರತೆಯನ್ನು ತಗ್ಗಿಸಲು ಮುಖರ್ಜಿ ಅವರು ಹೆಚ್ಚಿನ ತೆರಿಗೆ ಸಂಗ್ರಹದಂತಹ ಕಠಿಣ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದೇ ಸಂದರ್ಭದಲ್ಲಿ ಮುಖರ್ಜಿ ಅವರು ತಮ್ಮ ಮೂರನೇ ಬಜೆಟ್‌ನಲ್ಲಿ ರೈತನ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುವ ಸಾಧ್ಯತೆಗಳು ಇವೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರಕುವ ನಿರೀಕ್ಷೆ ಇದೆ.ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿ ಜನರ ಮೇಲಿನ ಹೊರೆಯನ್ನು ಸ್ವಲ್ಪ ಕಡಿಮೆ ಮಾಡುವ ಉದ್ದೇಶ ಹಣಕಾಸು ಸಚಿವರದು.ತೆರಿಗೆ ಸರಳೀಕರಣ ಮತ್ತು ತೆರಿಗೆ ಸಂಗ್ರಹ ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಹಣಕಾಸು ಸಚಿವರು ಬಲವಾಗಿ ನಂಬಿರುವುದರಿಂದ ಈ ಬಾರಿ ಬಜೆಟ್‌ನಲ್ಲಿ ಇದಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆಗಳು ಇವೆ.

ರೈತರಿಗೆ ಶೇ. 4ರ ಬಡ್ಡಿದರ ಸಾಲ?

ನವದೆಹಲಿ (ಪಿಟಿಐ): ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರಿಗೆ ಇನ್ನು ಮುಂದೆ ಶೇಕಡಾ 4ರ ಬಡ್ಡಿ ದರದಲ್ಲಿ ಸಾಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ. ಈ ಬಾರಿಯ ಬಜೆಟ್‌ನಲ್ಲಿ ಈ ಕುರಿತು ಸರ್ಕಾರ ಮತ್ತಷ್ಟು  ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.ಏರುತ್ತಿರುವ  ಹಣದುಬ್ಬರ, ವಿಶೇಷವಾಗಿ ಆಹಾರ ಧಾನ್ಯಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಮೂಲ ಸೌಕರ್ಯ ಹೆಚ್ಚಳಕ್ಕೆ ಒತ್ತು ನೀಡುವುದು ಪ್ರಣವ್ ಮುಖರ್ಜಿ ಅವರ ಗುರಿಯಾಗಿದೆ ಎನ್ನಲಾಗಿದೆ.

ಈ ದಿಸೆಯಲ್ಲಿ ಕೃಷಿ ಕ್ಷೇತ್ರದ ಬೇಕು ಬೇಡಗಳಿಗೆ ಅವರು ಬಜೆಟ್‌ನಲ್ಲಿ ಹೆಚ್ಚಿನ ಗಮನ ನೀಡುವ ಸಾಧ್ಯತೆ ಇದೆ.

ಪ್ರಸ್ತುತ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಶೇಕಡಾ 7ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರು ಶೇಕಡಾ 2ರಷ್ಟು ಪ್ರೋತ್ಸಾಹ ಧನ ಪಡೆಯುತ್ತಿದ್ದಾರೆ.ದೇಶದ 80ನೇ ಬಜೆಟ್

ನವದೆಹಲಿ (ಪಿಟಿಐ): ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಾಡಲಿರುವ ಬಜೆಟ್ ಭಾಷಣವು ಸ್ವತಂತ್ರ ಭಾರತದ 80ನೇ ಬಜೆಟ್ ಭಾಷಣವಾಗಲಿದೆ.1947ರ ನವೆಂಬರ್ 26ರಂದು ದೇಶದ ಪ್ರಥಮ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಅವರು ಮೊಟ್ಟ ಮೊದಲ ಬಜೆಟ್ ಭಾಷಣ ಮಾಡಿದರು.ಅತಿ ಹೆಚ್ಚು ಅಂದರೆ 10 ಬಾರಿ ಬಜೆಟ್ ಭಾಷಣ ಮಾಡಿದ ಕೀರ್ತಿ ಮೂರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಪಿ. ಚಿದಂಬರಂ, ಯಶವಂತ್ ಸಿನ್ಹಾ, ವೈ. ಬಿ. ಚವಾಣ್ ಮತ್ತು ಸಿ. ಡಿ. ದೇಶಮುಖ್ ಅವರು ತಲಾ 7 ಬಾರಿ ಬಜೆಟ್ ಮಂಡಿಸಿದ್ದಾರೆ.ದೇಶದ ನಾಲ್ಕನೇ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ  ಮತ್ತು  ಪ್ರಧಾನಿ ಮನಮೋಹನ್ ಸಿಂಗ್ ಆರು ಬಾರಿ ಬಜೆಟ್ ಮಂಡಿಸಿದ್ದಾರೆ.ಮುಖರ್ಜಿ ಅವರು ಸೋಮವಾರದ್ದು ಸೇರಿ ನಾಲ್ಕು ವಾರ್ಷಿಕ ಬಜೆಟ್ ಮತ್ತು 2009-10ರ  ಮಧ್ಯಂತರ ಬಜೆಟ್ ಸೇರಿದಂತೆ ಐದು ಬಜೆಟ್ ಮಂಡಿಸಿದ ಕಿರ್ತಿಗೆ ಪಾತ್ರರಾಗಲಿದ್ದಾರೆ.ಆರ್. ವೆಂಕಟರಾಮನ್ ಮತ್ತು ಎಚ್. ಎಂ. ಪಟೇಲ್ ಅವರು ಎರಡು ಬಜೆಟ್; ಜಸ್ವಂತ್ ಸಿಂಗ್, ವಿ.ಪಿ. ಸಿಂಗ್, ಸಿ. ಸುಬ್ರಮಣಿಯನ್, ಜಾನ್ ಮಥಾಯಿ ಮತ್ತು ಆರ್. ಕೆ. ಷಣ್ಮುಖಂ ಚೆಟ್ಟಿ  ಅವರು ತಲಾ ಎರಡು ಬಜೆಟ್ ಮಂಡಿಸಿದ್ದಾರೆ.

ಇದಲ್ಲದೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಚರಣ್ ಸಿಂಗ್, ಎನ್. ಡಿ. ತಿವಾರಿ, ಮಧು ದಂಡವತೆ, ಎಸ್. ಬಿ. ಚವಾಣ್ ಮತ್ತು ಸಚಿಂದ್ರ ಚೌದರಿ ಅವರು ತಲಾ ಒಂದು ಬಜೆಟ್ ಮಂಡಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry