ಇಂದು ಚಿದು ಭವಿಷ್ಯ ನಿರ್ಧಾರ

7

ಇಂದು ಚಿದು ಭವಿಷ್ಯ ನಿರ್ಧಾರ

Published:
Updated:

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಪಾತ್ರದ ತನಿಖೆ ಹಾಗೂ ಎ.ರಾಜಾ ದೂರಸಂಪರ್ಕ ಸಚಿವರಾಗಿದ್ದಾಗ ನೀಡಿದ್ದ 122 ರೇಡಿಯೊ ತರಂಗಾಂತರ ಹಂಚಿಕೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪು ಗುರುವಾರ ಹೊರಬೀಳಲಿದೆ.ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ಪೀಠವು ಈ ಎರಡೂ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಲಿದೆ. 2ಜಿ ಹಗರಣದಲ್ಲಿ ಚಿದಂಬರಂ ಪಾತ್ರದ ತನಿಖೆ ಹಾಗೂ 2011ರ ಅಕ್ಟೋಬರ್ 10 ಮತ್ತು ಮಾರ್ಚ್ 17ರಂದು ನೀಡಿದ್ದ 122 ರೇಡಿಯೊ ತರಂಗಾಂತರ ಹಂಚಿಕೆ ರದ್ದು ಪಡಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇಂದ್ರ (ಸಿಪಿಐಎಲ್-ಸರ್ಕಾರೇತರ ಸಂಸ್ಥೆ) ಮತ್ತು ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಅವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.2ಜಿ ತರಂಗಾಂತರ ದರ ನಿಗದಿಗೆ ಸಂಬಂಧಿಸಿದಂತೆ ಚಿದಂಬರಂ ಹಾಗೂ ರಾಜಾ ಇಬ್ಬರೂ ಜತೆಯಾಗಿ ನಿರ್ಧಾರ ತೆಗೆದುಕೊಂಡಿದ್ದರು ಎನ್ನುವುದಕ್ಕೆ ದಾಖಲೆ ಸಾಕ್ಷ್ಯಗಳಿವೆ ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದರು.ಪ್ರಣವ್ ಮುಖರ್ಜಿ ಅವರು ಸಹಿ ಮಾಡಿದ ಪ್ರಧಾನಿ ಕಚೇರಿ ಟಿಪ್ಪಣಿಯಲ್ಲೂ ಚಿದಂಬರಂ ಪಾತ್ರದ ಉಲ್ಲೇಖವಿದೆ. ಚಿದಂಬರಂ ಅವರು ತರಂಗಾಂತರ ಹಂಚಿಕೆಯಲ್ಲಿ ಹರಾಜು ನೀತಿಗೆ ಶಿಫಾರಸು ಮಾಡಿದ್ದರೆ ಈ ಹಗರಣವನ್ನು ತಡೆಯಬಹುದಿತ್ತು ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.2008ರಲ್ಲಿ ನಡೆದ 2ಜಿ ತರಂಗಾಂತರ ಹಂಚಿಕೆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರ ವಿರುದ್ಧ ತನಿಖೆಯನ್ನು ಕೇಂದ್ರ ಹಾಗೂ ಸಿಬಿಐ ಖಡಾಖಂಡಿತವಾಗಿ ವಿರೋಧಿಸಿದ್ದವು.ತರಂಗಾಂತರ ದರ ನಿಗದಿ ಮಾಡುವಾಗ ಚಿದಂಬರಂ ಅವರು  ಎ. ರಾಜಾ ಅವರೊಂದಿಗೆ ನೇರ ಸಂಪರ್ಕದಲ್ಲಿ ಇರಲಿಲ್ಲ. 2008ರ ಜ. 10ರ ವರೆಗೆ, ಅಂದರೆ  ಹರಾಜು ನೀತಿಯನ್ನು ಅನುಸರಿಸದೆ ರಾಜಾ ಅವರು ದೂರ ಸಂಪರ್ಕ ಕಂಪೆನಿಗಳಿಗೆ ಪತ್ರ ಬರೆದ ಸಂದರ್ಭದಲ್ಲಿ ಚಿದಂಬರಂ ಅವರ ಪ್ರಸ್ತಾಪ ಎಲ್ಲಿಯೂ ಇರಲಿಲ್ಲ ಎಂಬುದು ಸಿಬಿಐ ಹಾಗೂ ಕೇಂದ್ರದ ವಾದವಾಗಿತ್ತು. ಆದರೆ ಈ ವಾದವನ್ನು ಸುಬ್ರಮಣಿಯನ್ ಸ್ವಾಮಿ ಒಪ್ಪಿರಲಿಲ್ಲ. ಸಿಪಿಐಎಲ್ ಇದಕ್ಕೆ ದನಿ ಸೇರಿಸಿತ್ತು.2007ರ  ನವೆಂಬರ್ 30ರ ವರೆಗೆ ಏನೆಲ್ಲ ನಡೆಯಿತು ಎನ್ನುವುದರ ಮಾಹಿತಿ ಚಿದಂಬರಂ ಅವರಿಗೆ ತಿಳಿದಿತ್ತು ಎಂದು ಸ್ವಾಮಿ ಹಾಗೂ ಸಿಪಿಐಎಲ್ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು.ತರಂಗಾಂತರ ಹಂಚಿಕೆ ವಿಷಯದಲ್ಲಿ ರಾಜಾ ಹಾಗೂ ಚಿದಂಬರಂ ನಾಲ್ಕು  ಬಾರಿ ಭೇಟಿಯಾಗಿದ್ದರು ಎನ್ನುವುದಕ್ಕೆ ದಾಖಲೆಗಳಿಗೆ ಎಂದು ಸ್ವಾಮಿ ಹೇಳಿದ್ದರು.ಏನು ಕ್ರಮ?

2 ಜಿ ಹಗರಣಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದೀರಿ ಎಂದು ಬುಧವಾರ ಬಿಜೆಪಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೇಳಿದೆ.ಒಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ಅನುಮಾನದ ಕರಿನೆರಳು ಪ್ರಧಾನಿ ಅವರ ಮೇಲೆ ಬೀಳುತ್ತದೆ ಎಂದು ಬಿಜೆಪಿ ನಾಯಕ ಮುರಳಿ ಮನೋಹರ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.ರಾಜಾ ಅವರಂತೆಯೇ ಚಿದಂಬರಂ ಅವರನ್ನೂ ಯಾಕೆ ವಿಚಾರಣೆಗೊಳಪಡಿಸಬಾರದು? ಚಿದಂಬರಂ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ಅವರು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry