ಇಂದು ಜಯಾ ವಿಚಾರಣೆ

7

ಇಂದು ಜಯಾ ವಿಚಾರಣೆ

Published:
Updated:

ಬೆಂಗಳೂರು:  ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಆರೋಪದ ಕುರಿತಾದ ಅರ್ಜಿಯ ವಿಚಾರಣೆಯು ನಗರದ ಪರಪ್ಪನ ಅಗ್ರಹಾರದ ಬಳಿ ರಚನೆಗೊಂಡ ವಿಶೇಷ ಕೋರ್ಟ್‌ನಲ್ಲಿ ಗುರುವಾರದಿಂದ ಆರಂಭಗೊಳ್ಳಲಿದೆ.ಜಯಲಲಿತಾ ಅವರು ನಿಯಮ ಉಲ್ಲಂಘಿಸಿ ಲಂಡನ್‌ನಲ್ಲಿ ಎರಡು ಹೋಟೆಲ್ ಖರೀದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಅವರು  ದಾಖಲಿರುವ ದೂರಿನ ಕುರಿತಾದ ವಿಚಾರಣೆ ಇದಾಗಿದೆ.ಈ ವಿಚಾರಣೆಗೆ ಸಂಬಂಧಿಸಿದಂತೆ ಜಯಲಲಿತಾ ಅವರ ಸಾಕ್ಷ್ಯಗಳನ್ನು ಪಡೆಯಬೇಕಿರುವ ಹಿನ್ನೆಲೆಯಲ್ಲಿ, ಕೇಂದ್ರ ಕಾರಾಗೃಹದ ಸಮೀಪ ಇರುವ `ಗಾಂಧಿ ಭವನ~ದಲ್ಲಿ ತಾತ್ಕಾಲಿಕವಾಗಿ ಕೋರ್ಟ್ ನಿರ್ಮಾಣಗೊಂಡಿದೆ.`ಈ ಕಟ್ಟಡದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ನಮಗೆ ಕರ್ನಾಟಕದಲ್ಲಿ ಸೂಕ್ತ ಭದ್ರತೆ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ಅನ್ನು ಬೇರೆಡೆ ಸ್ಥಳಾಂತರ ಮಾಡಿ~ ಎಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.ಇದೇ ಮನವಿಯನ್ನಿಟ್ಟು ಅವರು ನಗರದ ವಿಶೇಷ ಕೋರ್ಟ್‌ನಲ್ಲಿ ಕೂಡ ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ವಿಶೇಷ ಕೋರ್ಟ್ ಕೂಡ ಅವರ ಮನವಿಯನ್ನು ತಿರಸ್ಕರಿಸಿರುವ ಕಾರಣ, ಇದೇ ಜಾಗದಲ್ಲಿ ವಿಚಾರಣೆ ನಡೆಯಲಿದೆ.ಅರ್ಜಿಯ ಹಿನ್ನೆಲೆ: ಜಯಲಲಿತಾ ಅವರು, 2001ರ ಅವಧಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ತಾವು ಗಳಿಸಿರುವ ಅಕ್ರಮ ಆಸ್ತಿಯಲ್ಲಿ 57 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹೋಟೆಲ್‌ಗಳ ಖರೀದಿ ಮಾಡಿರುವುದಾಗಿ ಅನ್ಬಳಗನ್ ಆರೋಪ. ಈ ಪ್ರಕರಣದ ಹೊರತಾಗಿ ಜಯಾ ಅವರು 1991ರಿಂದ 1996ರ ಅವಧಿಯಲ್ಲಿ 97 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿರುವುದಕ್ಕೆ  ಸಂಬಂಧಿಸಿದಂತೆ ಇನ್ನೊಂದು ಮೊಕದ್ದಮೆ ಕೂಡ ದಾಖಲಾಗಿದೆ.ಅವರದ್ದೇ ಸರ್ಕಾರ ಅಧಿಕಾರದಲ್ಲಿ ಇದ್ದ ಹಿನ್ನೆಲೆಯಲ್ಲಿ, ತಮಿಳುನಾಡಿನಲ್ಲಿ ನ್ಯಾಯಯುತ ವಿಚಾರಣೆ ನಡೆಸಲಾಗದು ಎಂದು ಕೋರಿ ಕೆಲವರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಎರಡೂ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ನಗರದ ಸಿವಿಲ್ ಕೋರ್ಟ್‌ನಲ್ಲಿ ವಿಶೇಷ ಕೋರ್ಟ್ ಕಾರ್ಯ ನಿರ್ವಹಿಸುತ್ತಿದೆ.ಬಿಗಿ ಬಂದೋಬಸ್ತ್: ಜಯಲಲಿತಾ ಅವರು ಬರುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನ್ಯಾಯಾಲಯದ ಆವರಣದ ಐನೂರು ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಕೋರ್ಟ್ ಸುತ್ತಮುತ್ತ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಜನರು ಸೇರುವ ಸಂಭವ ಇರುವುದರಿಂದ ಜನರ ಚಲನವಲನಗಳ ಮೇಲೆ ಕಣ್ಣಿಡಲು ಈ ವ್ಯವಸ್ಥೆ ಮಾಡಲಾಗಿದೆ. ನಗರ ಪೊಲೀಸ್ ಘಟಕದ 500ಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.ಜಂಟಿ ಪೊಲೀಸ್ ಕಮಿಷನರ್ ದರ್ಜೆಯ ಅಧಿಕಾರಿ ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಖಾಸಗಿ ವಿಮಾನದಲ್ಲಿ ಜಯಲಲಿತಾ ಅವರು ಬೆಳಿಗ್ಗೆ ಹತ್ತು ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಅವರಿಗೆ `ಜೆಡ್ ಪ್ಲಸ್~ ಭದ್ರತೆ ಇರುವುದರಿಂದ ಎನ್‌ಎಸ್‌ಜಿ ಕಮಾಂಡೊಗಳು ಬಂದಿಳಿಯಲಿದ್ದಾರೆ.

 

ವಿಮಾನ ನಿಲ್ದಾಣದಿಂದ ನ್ಯಾಯಾಲಯಕ್ಕೆ ಪ್ರಯಾಣಿಸುವ ವೇಳೆ ಹೆಚ್ಚಿನ ಬೆಂಗಾವಲು ಪಡೆಗಳು ಅವರಿಗೆ ಭದ್ರತೆ ಒದಗಿಸಲಿವೆ.ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಗುಪ್ತಚರ ದಳದ ಅಧಿಕಾರಿಗಳು ಬುಧವಾರ ನಗರಕ್ಕೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry