ಬುಧವಾರ, ನವೆಂಬರ್ 20, 2019
21 °C
2ಜಿ ತರಂಗಾಂತರ ಹಗರಣ

ಇಂದು ಜೆಪಿಸಿ ಸಭೆ- ಬಿರುಗಾಳಿ ನಿರೀಕ್ಷೆ

Published:
Updated:

ನವದೆಹಲಿ: `ಎರಡನೇ ತಲೆಮಾರಿನ ತರಂಗಾಂತರ ಹಗರಣ' ಕುರಿತು ವಿಚಾರಣೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸದನ ಸಮಿತಿ ಕರಡು ವರದಿ ಬಗ್ಗೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲು ಗುರುವಾರ ಸೇರಲಿರುವ ಜೆಪಿಸಿ ಸಭೆಯಲ್ಲಿ ಭಾರಿ ವಾಗ್ವಾದವೇ ನಡೆಯುವ ಸಾಧ್ಯತೆಯಿದೆ.ಪ್ರಧಾನಿ ಸಿಂಗ್ ಮತ್ತು ಹಣಕಾಸು ಸಚಿವ ಚಿದಂಬರಂ ಅವರಿಗೆ `ಕ್ಲೀನ್ ಚಿಟ್' ನೀಡಿರುವ ಸಮಿತಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ.ವಿರೋಧ ಪಕ್ಷಗಳು ಕರಡು ವರದಿ ಮೇಲೆ ಮತದಾನಕ್ಕೆ ಆಗ್ರಹಿಸಲಿದ್ದು, ಜಂಟಿ ಸದನ ಸಮಿತಿ ಅಧ್ಯಕ್ಷ ಚಾಕೋ ಇದಕ್ಕೆ ಒಪ್ಪುವ ಸಾಧ್ಯತೆಯಿದೆ. 30ಸದಸ್ಯ ಬಲದ ಸಮಿತಿಯಲ್ಲಿ ಬಿಜೆಪಿ ಸದಸ್ಯ ಯಶವಂತಸಿನ್ಹ ಡಿಎಂಕೆ, ಬಿಜೆಡಿ ಮತ್ತು ಎಡಪಕ್ಷಗಳ ಬೆಂಬಲ ಪಡೆಯುವ ಕಸರತ್ತು ನಡೆಸುತ್ತಿದ್ದಾರೆ. ಈ ವರದಿ ತಿಸ್ಕರಿಸಲು ತಂತ್ರ ರೂಪಿಸುತ್ತಿದ್ದಾರೆ.ಆದರೆ, ಯುಪಿಎ ಜೆಪಿಸಿ ವರದಿಗೆ ಬೆಂಬಲ ಪಡೆಯುವ ಪ್ರಯತ್ನ ನಡೆಸುತ್ತಿದೆ. `ಗುರುವಾರದ ಸಭೆಯಲ್ಲಿ ಸಣ್ಣ ಅಚ್ಚರಿಯೊಂದು ನಡೆಯಲಿದೆ' ಎನ್ನುವ ಸುಳಿವನ್ನು ಕಾಂಗ್ರೆಸ್ ಉನ್ನತ ಮೂಲಗಳು ನೀಡಿವೆ. ಯಶವಂತ ಸಿನ್ಹ ಜೆಪಿಸಿ ಸಭೆಯಲ್ಲಿ `ಬಿರುಗಾಳಿ' ಬೀಸಲಿದೆ ಎಂದಿದ್ದಾರೆ.ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಜಂಟಿ ಸದನ ಸಮಿತಿ ಮುಂದೆ ಹಾಜರಾಗುವಂತೆ ಯಶವಂತಸಿನ್ಹ ಮತ್ತೆ ಒತ್ತಾಯಿಸಿದ್ದಾರೆ. ನೀವು ಹಾಜರಾಗದಿದ್ದರೆ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಸಮಿತಿ ವರದಿ ಕುರಿತು ಯಾವುದೇ ಸದಸ್ಯರಿಗೆ ಭಿನ್ನಾಭಿಪ್ರಾಯವಿದ್ದರೆ ದಾಖಲಿಸಬಹುದು. ವರದಿಯನ್ನು ಸಂಸತ್ತಿನಲ್ಲಿ ಮಂಡಿಸುವ ವೇಳೆ ಈ ಭಿನ್ನಮತದ ಟಿಪ್ಪಣಿ ಸೇರ್ಪಡೆ ಮಾಡಲಾಗುವುದು ಎಂದು ಚಾಕೋ ಹೇಳಿದ್ದಾರೆ.`ವರದಿ ಮೇಲೆ ಹಿಂದೆಂದೂ ಮತದಾನ ನಡೆದಿಲ್ಲ. ಅಂಥ ಸಂಪ್ರದಾಯ ಸೃಷ್ಟಿಸುವುದು ಬೇಡ ಎನ್ನುವ ಅಂಶವನ್ನು ವಿರೋಧ ಪಕ್ಷಗಳ ಸದಸ್ಯರಿಗೆ ಮನವರಿಕೆ ಮಾಡಿಕೊಡಲಾಗುವುದು. ಅಕಸ್ಮಾತ್ ಮತದಾನಕ್ಕೆ ನಿಯಮದಲ್ಲಿ ಅವಕಾಶವಿದ್ದರೆ ಹಾಗೂ ವಿರೋಧ ಪಕ್ಷಗಳು ಅದಕ್ಕೆ ಒತ್ತಾಯಿಸಿದಲ್ಲಿ ಒಪ್ಪಲಾಗುವುದು' ಎಂದು ಸದನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.ಜೆಪಿಸಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಸಮಾನ ಸಂಖ್ಯೆಯಲ್ಲಿದ್ದು, ಒಟ್ಟು ಐವರು ಸದಸ್ಯರನ್ನು ಹೊಂದಿರುವ ಎಸ್‌ಪಿ, ಬಿಎಸ್‌ಪಿ, ಟಿಎಂಸಿ ಮತ್ತು ಎಐಎಡಿಎಂಕೆ ನಡವಳಿಕೆ ಕುತೂಹಲ ಹುಟ್ಟಿಸಿದೆ. ಸಮಿತಿ ಅಧ್ಯಕ್ಷರೂ ಸೇರಿದಂತೆ ಕಾಂಗ್ರೆಸ್ 11 ಸದಸ್ಯರು ಹಾಗೂ ಇದರ ಮಿತ್ರಪಕ್ಷ ಎನ್‌ಸಿಪಿ ಒಬ್ಬರು ಸದಸ್ಯರನ್ನು ಹೊಂದಿದೆ.ಪ್ರಮುಖ ವಿರೋಧ ಪಕ್ಷ ಬಿಜೆಪಿ ಆರು, ಮಿತ್ರ ಪಕ್ಷ ಜೆಡಿಯು, ಡಿಎಂಕೆ ಹಾಗೂ ಬಿಎಸ್‌ಪಿ ತಲಾ ಇಬ್ಬರು, ಎಸ್‌ಪಿ, ಬಿಜೆಡಿ, ಟಿಎಂಸಿ, ಎಐಎಡಿಎಂಕೆ, ಸಿಪಿಐ ಮತ್ತು ಸಿಪಿಎಂ ತಲಾ ಒಬ್ಬರು ಸದಸ್ಯರು ಸಮಿತಿಯಲ್ಲಿದ್ದಾರೆ.ಮಾರ್ಚ್ 10ರಂದು ರಚಿಸಲಾಗಿರುವ ಜೆಪಿಸಿ ಮೇ 10ರೊಳಗೆ ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಿದೆ.

`ಜೆಪಿಸಿ ಮುಂದೆ ಮಾಜಿ ಸಚಿವ ಎ. ರಾಜಾ ಹಾಜರಾಗಲು ಅವಕಾಶ ನೀಡದೆ ಅವರ ಮೇಲೆ ಗೂಬೆ ಕೂರಿಸಲಾಗಿದೆ' ಎಂದು ಸಿಟ್ಟಿಗೆದ್ದಿರುವ ಡಿಎಂಕೆ ವರದಿ ವಿರೋಧಿಸುತ್ತಿದೆ.ಮಾಜಿ ಟೆಲಿಕಾಂ ಸಚಿವ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಪ್ರಧಾನಿ ಜೆಪಿಸಿ ಮುಂದೆ ಹಾಜರಾಗಬೇಕೆಂದು ಸಿನ್ಹ ಒತ್ತಾಯಿಸಿದ್ದಾರೆ. 2ಜಿ ಸಂಬಂಧ ಕೈಗೊಂಡ ಪ್ರತಿ ತೀರ್ಮಾನವನ್ನು ಪ್ರಧಾನಿ ಗಮನಕ್ಕೆ ತರಲಾಗಿತ್ತು ಎಂದು ರಾಜಾ ಹೇಳಿದ್ದಾರೆ. ಆದರೆ, ನೀವು ವಹಿಸಿರುವ ಮೌನ ಹಗರಣದಲ್ಲಿ ನಿಮ್ಮ ಪಾತ್ರವನ್ನು ಖಚಿತ ಪಡಿಸುತ್ತದೆ. ಈ ಹಿನ್ನೆಲೆಯಲ್ಲಿ ಮೌನ ಮುರಿಯಬೇಕು. ಜೆಪಿಸಿ ಮುಂದೆ ಹಾಜರಾಗಬೇಕು ಎಂದು ಸಿಂಗ್ ಅವರನ್ನು ಆಗ್ರಹಿಸಿದ್ದಾರೆ.ಇದಕ್ಕೂ ಮೊದಲು ನಾನು ನಿಮಗೆ ಬರೆದಿರುವ ಪತ್ರಕ್ಕೆ ಏಪ್ರಿಲ್ ಎರಡರಂದು ಉತ್ತರ ನೀಡಿದ್ದೀರಿ. ಅದರಲ್ಲಿ ಮುಚ್ಚಿಡುವಂತಹದ್ದೇನೂ ಇಲ್ಲ ಎಂದಿದ್ದೀರಿ. ಹಾಗಾದರೆ, ರಾಜಾ ಮಾಡಿರುವ ಆರೋಪ ಕುರಿತು ಏಕೆ ಮೌನ ವಹಿಸಿದ್ದೀರಿ ಎಂದು ಸಿನ್ಹ ಸಿಂಗ್ ಅವರನ್ನು ಕೇಳಿದ್ದಾರೆ. ಜೆಪಿಸಿ ಮುಂದೆ ಹಾಜರಾಗಿ ನಿಮ್ಮ ಮೇಲೆ ಬಂದಿರುವ ಆರೋಪ ಕುರಿತು ಹೇಳಿಕೆ ನೀಡಿ ಎಂದು ಸಿನ್ಹ ಪ್ರಧಾನಿಗೆ ಸಲಹೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)