ಇಂದು ಡಿ.ಕೊಂಗಾಡಿಯಪ್ಪ ಸ್ಮರಣೋತ್ಸವ

7

ಇಂದು ಡಿ.ಕೊಂಗಾಡಿಯಪ್ಪ ಸ್ಮರಣೋತ್ಸವ

Published:
Updated:

ದೊಡ್ಡಬಳ್ಳಾಪುರ: ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ(1861-1951) ಅವರ 152ನೇ ಜನ್ಮದಿನಾಚರಣೆ ಫೆ.22ರಂದು ನಡೆಯಲಿದೆ. ಜನ್ಮದಿನಾಚರಣೆ ಅಂಗವಾಗಿ ನಗರ ಸಭೆ ವತಿಯಿಂದ ನಗರದಲ್ಲಿ ನಿರ್ಮಿಸಲಾಗುತ್ತಿರುವ ಪಾರ್ಕ್‌ಗಳ ಕಾಮಗಾರಿಗೆ ಶಾಸಕ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಜೆ.ನರಸಿಂಹಸ್ವಾಮಿ ಚಾಲನೆ ನೀಡಿಲಿದ್ದಾರೆ.

 

ಶ್ರೀ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಆಡಳಿತ ಮಂಡಲಿ, ಬೋಧಕರು, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.1861 ಫೆ.22 ರಂದು ಜನಿಸಿದ ಡಿ.ಕೊಂಗಾಡಿಯಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ಸೇವಾ ಮನೋಭಾವದಿಂದ  ಸರ್ವಜನ ಮಾನ್ಯರಾದ ವ್ಯಕ್ತಿಯಾಗಿದ್ದರು. ದೊಡ್ಡಬಳ್ಳಾಪುರಕ್ಕೆ  ಅಗತ್ಯವಾಗಿ ಬೇಕಾದ  ಶಾಲೆ, ಕುಡಿಯುವ ನೀರು, ವಿದ್ಯುತ್ ಮುಂತಾದವರುಗಳನ್ನು ಮೈಸೂರು ಮಹಾರಾಜರಿಂದ ಮಂಜೂರಾತಿ ಪಡೆಯುವಲ್ಲಿ ಕೊಂಗಾಡಿಯಪ್ಪನವರ ಸತತ ಪರಿಶ್ರಮವಿದೆ.ದೊಡ್ಡಬಳ್ಳಾಪುರ ಪುರಸಭೆಗೆ ಪ್ರಥಮ ಅಧ್ಯಕ್ಷರಾಗಿದ್ದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ `ಲೋಕಸೇವಾ ನಿರತ~ ಎಂಬ ಬಿರುದಿಗೆ ಪುರಸ್ಕೃತರಾದರು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಕೊಂಗಾಡಿಯಪ್ಪ ಅವರು ಸಮಾಜದ ಎಲ್ಲಾ ವರ್ಗದ ಮಕ್ಕಳನ್ನು ವಿದ್ಯಾಭ್ಯಾಸ ಮಾಡಲು ಪ್ರೋತ್ಸಾಹಿಸುತ್ತಿದ್ದರು.  ಲೋಯರ್ ಸೆಕಂಡರಿ ಪರೀಕ್ಷೆಗಾಗಿ  ದೊಡ್ಡಬಳ್ಳಾಪುರ ಪರೀಕ್ಷಾ ಕೇಂದ್ರಕ್ಕೆ  ದೂರದ ಊರುಗಳಿಂದ ಬರುತ್ತಿದ್ದ 300 ರಿಂದ 400 ವಿದ್ಯಾರ್ಥಿಗಳಿಗೆ  6 ರಿಂದ 8 ದಿನ  ಅವರಿಗೆ ಉಚಿತ ವಸತಿ ಊಟದ ಸೌಕರ್ಯ ಏರ್ಪಡಿಸುತ್ತಿದ್ದರು. ದೊಡ್ಡಬಳ್ಳಾಪುರದ ಅವರ ಮನೆ ವಿದ್ಯಾರ್ಥಿನಿಲಯದಂತೆ. ಬಡ ವಿದ್ಯಾರ್ಥಿಗಳು ಕೊಂಗಾಡಿಯಪ್ಪ ಅವರ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಬೇರೆ ಊರಿನ ವಿದ್ಯಾರ್ಥಿಗಳು ಸಹ ಈ ಸಹಾಯ ಪಡೆಯುತ್ತಿದ್ದರು.ಕಡೂರು, ತರೀಕೆರೆ, ಗೌರಿಬಿದನೂರು, ನೆಲಮಂಗಲ, ಚಿಕ್ಕನಾಯಕನಹಳ್ಳಿ ಮುಂತಾದ ಊರುಗಳಿಂದ ಬಂದು  ಕೊಂಗಾಡಿಯಪ್ಪನವರ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.  ಬೆಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದ ದಿ. ಎಚ್.ನರಸಿಂಹಯ್ಯನವರು, ಕೊಂಗಾಡಿಯಪ್ಪನವರಿಂದ ಸಹಾಯ ಪಡೆದವರಲ್ಲಿ ಒಬ್ಬರಾಗಿದ್ದಾರೆ. ಕೊಂಗಾಡಿಯಪ್ಪ ಅವರು ಮೈಸೂರು ದಿವಾನರಲ್ಲಿಗೆ ಅನೇಕ ಬಾರಿ ಭೇಟಿ ಕೊಟ್ಟು ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಛಕ್ತಿ, ಕೊಳವೆ ಬಾವಿ,  ಪ್ರೌಢಶಾಲೆ,  ಆಸ್ಪತ್ರೆ,  ಪಶುವೈದ್ಯಶಾಲೆ, ಕೈಮಗ್ಗ ಮುಂತಾದ ಗೃಹ ಕೈಗಾರಿಕಾ ತರಬೇತಿ ಶಾಲೆಯನ್ನು ಮಂಜೂರು ಮಾಡಿಸಿದರು. ಊರಿನ ಯಾವ ಸಮಸ್ಯೆಯನ್ನಾಗಲೀ ಬಗೆ ಹರಿಸಲು ದುಡಿಯುತ್ತಿದ್ದರು.ವಯಸ್ಕರ ಶಿಕ್ಷಣ ಶಾಲೆಗಳನ್ನು ಮಂಜೂರು ಮಾಡಿಸಿದ್ದರು. 1918 ರಲ್ಲಿ ಕ್ಷಾಮ ಆವರಿಸಿದಾಗ ದವಸ, ಧಾನ್ಯಗಳ ಸಂಗ್ರಹಣೆ ಮಾಡಿ ಬಡವರಿಗೆ ಅಗ್ಗದ ಬೆಲೆಯಲ್ಲಿ ವಿತರಿಸಲು ವ್ಯವಸ್ಥೆ ಮಾಡಿದರು. ಮಹಿಳಾ ಸಮಾಜದ ಕಟ್ಟಡ ಕಟ್ಟಿಸಲು ಸಾರ್ವಜನಿಕರಿಂದ ಧನ  ಸಹಾಯ ಮಾಡಿದರು. ಬೆಂಗಳೂರಿನ ದೇವಾಂಗ ಬ್ಯಾಂಕ್,ದೇವಾಂಗ ಸಂಘಗಳನ್ನು ಸ್ಥಾಪಿಸಲು ಕೊಂಗಾಡಿಯಪ್ಪನವರು ಸಹಕಾರ ನೀಡಿದ್ದರು. ಕೊಂಗಾಡಿಯಪ್ಪನವರು  ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ  ತಾಲ್ಲೂಕಿನ ಸುಪ್ರಸಿದ್ದ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಕ್ಕೆ  ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಸಾಲು ಹೊಂಗೆ  ಮರಗಳ ಸಾಲು ಬೆಳೆಸಿದರು.  ಘಾಟಿ ದೇವಸ್ಥಾನದ ಧರ್ಮದರ್ಶಿಗಳಾಗಿ ಅನೇಕ ವರ್ಷ ಸೇವೆ ಸಲ್ಲಿಸಿದ್ದರು.  ಮೈಸೂರು ಸಂಸ್ಥಾನಕ್ಕೆ ಮಾದರಿಯಾದ ಸ್ಕೌಟ್ ಗ್ರೂಪ್ ಒಂದನ್ನು ಸ್ಥಾಪಿಸಿದರು.  ಕೊಂಗಾಡಿಯಪ್ಪನವರ ಈ ಜನೋಪಯೋಗಿ ಸಾರ್ಥಕ ಸೇವೆ, ಲೋಕಸೇವೆಗಳನ್ನು ಪರಿಗಣಿಸಿದ ಮೈಸೂರು ಮಹಾರಾಜರು  1918ರಲ್ಲಿ ಸಾರ್ವಜನಿಕ  ಸೇವಾ ಪದಕ ನೀಡಿದರೆ,  1931 ರಲ್ಲಿ  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್  ಲೋಕಸೇವಾನಿರತ  ಬಿರುದು ನೀಡಿ ಗೌರವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry