ಇಂದು ತೆಂಡೂಲ್ಕರ್ ಜನ್ಮದಿನ

7

ಇಂದು ತೆಂಡೂಲ್ಕರ್ ಜನ್ಮದಿನ

Published:
Updated:
ಇಂದು ತೆಂಡೂಲ್ಕರ್ ಜನ್ಮದಿನ

ಹೈದರಾಬಾದ್ (ಪಿಟಿಐ):  ಮನಸೂರೆಗೊಳ್ಳುವಂಥ ಆಟವಾಡುತ್ತಾ ಸಾಗಿರುವ ಸಚಿನ್ ತೆಂಡೂಲ್ಕರ್ ಜೀವನವೇ ಯಶಸ್ಸಿನ ಓಟ. ರನ್...ರನ್...! ಶತಕ ಸಾಧನೆಯ ಕ್ಷಣಗಳು 99. ನೂರಾಗಲು ಇನ್ನೊಂದೇ ಬಾಕಿ. ಆ ದಾಖಲೆಯನ್ನೂ ಸಾಧ್ಯವಾಗಿಸುವ ವಿಶ್ವಾಸ ಹೊಂದಿರುವ ‘ಲಿಟಲ್ ಚಾಂಪಿಯನ್’ಗೆ ಭಾನುವಾರ 38ನೇ ಜನ್ಮದಿನದ ಸಂಭ್ರಮ.ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಮೆಚ್ಚಿಕೊಂಡಿರುವ ಅಚ್ಚುಮೆಚ್ಚಿನ       ಬ್ಯಾಟ್ಸ್‌ಮನ್ ಅಭಿಮಾನಿ ಬಳಗ ವಿಶ್ವದ ಮೂಲೆ ಮೂಲೆಯಲ್ಲಿ ಹರಡಿದೆ. ಹಲವಾರು ದಾಖಲೆಗಳನ್ನು ಬರೆದು, ಕ್ರಿಕೆಟ್ ಪಂಡಿತರು ಸಾರ್ವಕಾಲಿಕ ಶ್ರೇಷ್ಠ ಎಂದು ಒಪ್ಪಿಕೊಳ್ಳುವಂತೆ ಮಾಡಿರುವ ತೆಂಡೂಲ್ಕರ್ ವಯಸ್ಸಿನ ಭಾರಕ್ಕೆ ಬಾಗುವುದಿಲ್ಲವೆಂದು ತಮ್ಮ ಸಾಧನೆಯ ಮೂಲಕವೇ ಸಾಬೀತುಪಡಿಸಿದ್ದಾರೆ.ತಾವು ತಂಡದಲ್ಲಿ ಇರುವ ಕಾಲದಲ್ಲಿಯೇ ಭಾರತವು ಮತ್ತೊಮ್ಮೆ ವಿಶ್ವಕಪ್ ಚಾಂಪಿಯನ್ ಆಗಬೇಕೆನ್ನುವ ಅವರ ಮಹತ್ವಾಕಾಂಕ್ಷೆಯ ಕನಸು ಕೂಡ ಈಗ ಈಡೇರಿದೆ. ಆದ್ದರಿಂದ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕಳೆ ಬಂದಿದೆ. ಮತ್ತೊಂದು ವಿಶ್ವಕಪ್‌ಗೆ ಕಾಯಬೇಕು ಎನ್ನುವ ಆತಂಕ ಕಳೆದು, ಇನ್ನೊಂದಿಷ್ಟು ವರ್ಷ ಆಡಿದರೆ ಅಪಾರ ಸಂತೃಪ್ತಿಯ ಕ್ರಿಕೆಟ್ ಜೀವನ ತಮ್ಮದೆನ್ನುವ ಭಾವನೆ ‘ಮಾಸ್ಟರ್ ಬ್ಲಾಸ್ಟರ್’ ಮನದಲ್ಲಿ ನೆಲೆ ನಿಂತಿದೆ.177 ಟೆಸ್ಟ್ ಹಾಗೂ 453 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವಿಯು ಪ್ರತಿಯೊಂದು ಬಾರಿಯೂ ಜನ್ಮದಿನವನ್ನು ಖಾಸಗಿಯಾಗಿಯೇ ಆಚರಿಸಿಕೊಂಡು ಬಂದಿದ್ದಾರೆ. ಮಾಧ್ಯಮದವರ ಒತ್ತಡದಿಂದ ಕೆಲವೊಮ್ಮೆ ಬಹಿರಂಗವಾಗಿ ಬಂದು ಕೇಕ್ ಕಟ್ ಮಾಡಿದ್ದಾರೆ. ಆದರೆ ಈ ಬಾರಿಯಂತೂ ಅವರು ಕೇವಲ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಈ ಸಂತಸದ ಕ್ಷಣವನ್ನು ಕಳೆಯಬೇಕೆಂದು ಯೋಚಿ ಸಿದ್ದರು. ಈಗ ಆ ಯೋಜನೆಯನ್ನೂ ಕೈಬಿಡುವ ಸಾಧ್ಯತೆ ಇದೆ. ತಾವು ಅಪಾರವಾಗಿ ಆರಾಧಿಸುವ ಸತ್ಯ ಸಾಯಿಬಾಬಾ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸಂಭ್ರಮ ಬೇಡವೆನ್ನುವ ಯೋಚನೆ ತೆಂಡೂಲ್ಕರ್ ಮನದಲ್ಲಿ ಮೊಳಕೆಯೊಡೆದಿದೆ.ಅವರ ಯೋಚನೇ ಏನೇ ಇರಲಿ; ಭಾನುವಾರ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಇಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಪಂದ್ಯ ನಡೆಯುವುದರಿಂದ ಸಚಿನ್ ಅಭಿಮಾನಿಗಳಿಗೆ ಶುಭ ಕೋರುವ ಅವಕಾಶವಂತೂ ಸಿಗಲಿದೆ. ವಿಶೇಷವೆಂದರೆ ತೆಂಡೂಲ್ಕರ್ ಅವರು ಆಟದ ಅಂಗಳದಲ್ಲಿ ಕಾಣಿಸಿಕೊಂಡಾಗಲೇ ‘ಹ್ಯಾಪಿ ಬರ್ತ್ ಡೇ...’ ಎಂದು ಹಾಡಬೇಕೆನ್ನುವ ಉದ್ದೇಶದಿಂದ ಬಾಲಿವುಡ್ ತಾರೆಯರು ಭಾರಿ ಸಂಖ್ಯೆಯಲ್ಲಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ. ಐಪಿಎಲ್ ಆಯೋಜಕರು ಕೂಡ ಸಚಿನ್ ಹುಟ್ಟುಹಬ್ಬದಂದು ಹಬ್ಬದ ವಾತಾವರಣವೇ ಇರುವಂತೆ ಮಾಡಲು ಮುಂದಾಗಿದ್ದಾರೆ.ತೆಂಡೂಲ್ಕರ್ ಮಾತ್ರ ಇಂಡಿಯನ್ಸ್ ತಂಡದ ನಾಯಕತ್ವವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿ, ಜನ್ಮದಿನದಂತು ಗೆಲುವಿನ ಸಂಭ್ರಮ ಪಡೆಯುವ ಕಡೆಗೆ ಗಮನ ನೀಡಿದ್ದಾರೆ. ಆದ್ದರಿಂದ ತಮ್ಮ ಕುಟುಂಬದ ಸದಸ್ಯರ ಜೊತೆಗೆ ಸಂತಸದ ದಿನವನ್ನು ಪೂರ್ಣವಾಗಿ ಕಳೆಯುವಂಥ ಅವಕಾಶವೂ ಅವರಿಗೆ ಇಲ್ಲವಾಗಿದೆ. ಪುಣೆ ಮಾರ್ಗವಾಗಿ ಪ್ರಯಾಣ ಮಾಡಿ, ಸಚಿನ್ ಅವರು ಐಪಿಎಲ್ ಪಂದ್ಯದ ಮುನ್ನಾದಿನವಾದ ಶನಿವಾರ ಹೈದರಾಬಾದ್ ತಲುಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry