ಶುಕ್ರವಾರ, ಜುಲೈ 30, 2021
28 °C
ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಸೆಮಿಫೈನಲ್: ಉರುಗ್ವೆ ತಂಡಕ್ಕೆ ಬ್ರೆಜಿಲ್ ಸವಾಲು

ಇಂದು ಬಲಿಷ್ಠ ತಂಡಗಳ ಕಾದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಲೊ ಹೊರಿಜಾಂಟೆ, ಬ್ರೆಜಿಲ್ (ಎಎಫ್‌ಪಿ): ಟೂರ್ನಿಯ ಆರಂಭದಿಂದಲೂ ಗೆಲುವಿನ ಓಟ ಮುಂದುವರಿಸಿರುವ ಬ್ರೆಜಿಲ್ ತಂಡ ಕಾನ್ಫೆಡರೇಷನ್ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಉರುಗ್ವೆ ಎದುರು ಸೆಣಸಲಿದ್ದು ಬಲಿಷ್ಠ ತಂಡಗಳ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ.`ಎ' ಗುಂಪಿನಿಂದ ನಾಲ್ಕರ ಘಟ್ಟ ಪ್ರವೇಶಿಸಿರುವ ಬ್ರೆಜಿಲ್ ತಂಡ ಲೀಗ್ ಹಂತದಲ್ಲಿ ಜಪಾನ್, ಮೆಕ್ಸಿಕೊ ಹಾಗೂ ಇಟಲಿ ಎದುರು ಆಡಿದ ಪಂದ್ಯಗಳಲ್ಲಿ ಗೆಲುವು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.`ಬಿ' ಗುಂಪಿನಿಂದ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿರುವ ಉರುಗ್ವೆ ತಂಡ ನೈಜೀರಿಯಾ, ತಾಹಿತಿ ಎದುರು ಗೆಲುವು ಸಾಧಿಸಿದ್ದು, ಸ್ಪೇನ್ ಎದುರಿನ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಈ ತಂಡ ಆರು ಪಾಯಿಂಟ್‌ಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು. ಸ್ಪೇನ್ ಅಗ್ರಸ್ಥಾನದಲ್ಲಿದೆ. ಗುರುವಾರ ನಡೆಯಲಿರುವ ಇನ್ನೊಂದು ನಾಲ್ಕರ ಘಟ್ಟದ ಹೋರಾಟದಲ್ಲಿ ಸ್ಪೇನ್ ಮತ್ತು ಇಟಲಿ ಪೈಪೋಟಿ ನಡೆಸಲಿವೆ.ರಿಯೊ ಡಿ ಜನೈರೊದಲ್ಲಿ ನಡೆದ 1950ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿ ಟ್ರೋಫಿ ಎತ್ತಿ ಹಿಡಿದಿದ್ದ ಉರುಗ್ವೆ ಎದುರಾಳಿಗೆ ಸುಲಭದ ತುತ್ತಲ್ಲ. ಈ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ. 2011ರಲ್ಲಿ ಅರ್ಜೆಂಟೀನಾದಲ್ಲಿ ನಡೆದ ಕೋಪಾ ಅಮೆರಿಕ ಅಂತರರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲೂ ಉರುಗ್ವೆ ಚಾಂಪಿಯನ್ ಆಗಿತ್ತು. ಆದರೆ, ಬ್ರೆಜಿಲ್ ಕ್ವಾರ್ಟರ್ ಫೈನಲ್‌ನಲ್ಲಿಯೇ ಮುಗ್ಗರಿಸಿತ್ತು.`ತವರಿನ ಕ್ರೀಡಾಂಗಣವೆಂದು ಹೆಚ್ಚು ಬೀಗುವುದು ಬೇಡ. ಉರುಗ್ವೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. 1950ರ ವಿಶ್ವಕಪ್‌ನ ಟೂರ್ನಿಯ ಕಹಿ ನೆನಪು ಮರೆಯದಿರಿ' ಎಂದು ಬ್ರೆಜಿಲ್ ತಂಡದ ಗೋಲ್ ಕೀಪರ್ ಜೂಲಿಯೊ ಸೀಸರ್ ತಮ್ಮ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.`ಆಕ್ರಮಣಕಾರಿ ಆಟಗಾರರನ್ನು ಒಳಗೊಂಡಿರುವ ಉರುಗ್ವೆ ಈ ಸಲದ ಕಾನ್ಫೆಡರೇಷನ್ ಟೂರ್ನಿಯಲ್ಲಿ ತಾಹಿತಿ ಎದುರು 8-0 ಗೋಲುಗಳಿಂದ ಗೆಲುವು ಸಾಧಿಸಿತ್ತು. ಆದ್ದರಿಂದ ಸೆಮಿಫೈನಲ್ ಪಂದ್ಯದಲ್ಲಿ ಯಾವ ತಂಡವನ್ನೂ ಗೆಲುವು ಪಡೆಯುವ ನೆಚ್ಚಿನ ತಂಡ ಎಂದು ಹೇಳಲು ಆಗದು' ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.