ಇಂದು ಭ್ರಾತೃತ್ವದ ರಕ್ಷಾ ಬಂಧನ

7

ಇಂದು ಭ್ರಾತೃತ್ವದ ರಕ್ಷಾ ಬಂಧನ

Published:
Updated:
ಇಂದು ಭ್ರಾತೃತ್ವದ ರಕ್ಷಾ ಬಂಧನ

ಶ್ರಾವಣ ಶುಕ್ಲ ಪೂರ್ಣಿಮಾ (13 ಆಗಸ್ಟ್ 2011)ಶ್ರಾವಣ ಶುದ್ದ ಹುಣ್ಣಿಮೆಯಂದು ಆಚರಿಸುವ ರಕ್ಷಾ ಬಂಧನ  ರಾಖಿ  ಹಬ್ಬವೆಂದು ಪ್ರಸಿದ್ದಿ.  ಈ ರಕ್ಷಾ ಬಂಧನದ ಪೌರಾಣಿಕ ಹಿನ್ನೆಲೆಯೇನೆಂದರೆ, ಹಿಂದೆ ದೇವತೆಗಳಿಗೂ ಹಾಗು ದಾನವರಿಗೂ ಯುದ್ಧ ನಡೆದಾಗ ದೇವತೆಗಳು ಯುದ್ಧದಲ್ಲಿ ಸೋಲುತ್ತಾರೆ. ಆ ಸಮಯದಲ್ಲಿ ಇಂದ್ರನ ಪತ್ನಿಯಾದ ಶಚಿ ದೇವಿಯು, ರಕ್ಷಾ ಬಂಧನ ವ್ರತವನ್ನು ಮಾಡಿ ಇಂದ್ರನ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾಳೆ. ಇದರಿಂದಾಗಿ ದೇವೇಂದ್ರನು ದಾನವರನ್ನು ಯುದ್ಧದಲ್ಲಿ ಜಯಿಸುತ್ತಾನೆ ಎಂದು ನಮ್ಮ ಪುರಾಣಗಳಲ್ಲಿ ಹೇಳಿದೆ. ಈ ಹಬ್ಬದ ದಿನ ಕುಟುಂಬದ ಸದಸ್ಯರು ಬೆಳಗ್ಗೆ ಬೇಗನೆ ಎದ್ದು ಅಭ್ಯಂಜನ ಸ್ನಾನವನ್ನು ಮುಗಿಸಿ, ದೇವರ ಮನೆಯ ಮುಂದಿನ ಪೂಜಾ ಮಂಟಪಕ್ಕೆ ತಳಿರು ತೋರಣ, ಬಣ್ಣದ ರಂಗೋಲಿ ಮುಂತಾದವುಗಳಿಂದ ಚೆನ್ನಾಗಿ ಅಲಂಕರಿಸಬೇಕು. ಅದರಲ್ಲಿ ಪುರೋಹಿತರ ನಿರ್ದೇಶನದಂತೆ ಕಲಶ ಸ್ಥಾಪನೆ ಮಾಡಬೇಕು. ಈ ಕಲಶದ ಮೇಲೆ ಅರಿಶಿನ ಹಚ್ಚಿರುವ ತೆಂಗಿನಕಾಯಿಯನ್ನು, ಮಾವಿನ ಎಲೆಯ ಜೊತೆ ಇಡಬೇಕು. ಹಾಗು ಕಲಶದ ಬಲಗಡೆ ಒಂದು ಸಣ್ಣ ಹಳದಿ ದಾರ ಅಥವ ಸಣ್ಣ ಹೊಸ ಹಳದಿ ಬಟ್ಟೆಯನ್ನು ಇಡಬೇಕು. ಈ ಕಲಶಕ್ಕೆ ಮತ್ತು ರಕ್ಷಾ ದಾರಗಳಿಗೆ (ಹಳದಿ ದಾರ)  ಷೋಡಶೋಪಚಾರ ಪೂಜೆಗಳನ್ನು ಮಾಡಬೇಕು. ನಂತರ ಮಂತ್ರ ಪೂರ್ವಕವಾಗಿ ರಕ್ಷಾ ದಾರವನ್ನು ಮನೆಯ ಯಜಮಾನನು ತನ್ನ ಬಲ ಮುಂಗೈಗೆ ಕಟ್ಟಿಕೊಳ್ಳಬೇಕು. ಇದೇ ರೀತಿ ಮನೆಯ ಇತರ ಸದಸ್ಯರಿಗೂ ರಕ್ಷಾ ದಾರವನ್ನು ಕಟ್ಟಬೇಕು.ಈ ರೀತಿ ರಕ್ಷಾ ದಾರ ಕಟ್ಟುವ ಉದ್ದೇಶವೇನೆಂದರೆ ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ, ಅಶುಭಗಳಿಂದ, ಸರ್ವರೋಗರುಜಿನಗಳಿಂದ ವರ್ಷ ಪೂರ್ತಿ ನಮ್ಮನ್ನು ಕಾಪಾಡಲಿ ಎಂದು ಭಗವಂತನನ್ನು ಪ್ರಾರ್ಥಿಸಿ ರಕ್ಷಾ ದಾರವನ್ನು ಕಟ್ಟಿ ಕೊಳ್ಳುವುದಾಗಿದೆ. ಈಗಿನ ಸಾಮಾಜಿಕ ಹಿನ್ನೆಲೆಯಲ್ಲಿ  ರಕ್ಷಾ ಬಂಧನವೆಂದರೆ ಭ್ರಾತ್ವತ್ವದ ಸಂಕೇತವಾಗಿದೆ. ಸಹೋದರಿಯರು ಅಣ್ಣ ತಮ್ಮಂದಿರಿಗೆ ರಾಖಿಯನ್ನು ಕಟ್ಟಿ ತಮ್ಮ ಬಾಂಧವ್ಯದ ಮಧುರ ಸ್ಮೃತಿಯನ್ನು ಉಂಟುಮಾಡುತ್ತಾರೆ.

ಅಲ್ಲದೇ ಯಾವುದೇ ಮಹಿಳೆಯು ಇನ್ನೊಬ್ಬ ಗಂಡಸಿಗೆ ರಾಖಿಯನ್ನು ಕಟ್ಟಿದರೆ, ಆತ ಸಹೋದರ ಭಾವದಿಂದ ಆಕೆಯನ್ನು ಕಾಣಬೇಕೆಂಬುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry