ಇಂದು ಮದನಿ ಸಂಭಾಷಣೆ ಮಾಹಿತಿ ಸಲ್ಲಿಕೆ: ಸರ್ಕಾರ

7

ಇಂದು ಮದನಿ ಸಂಭಾಷಣೆ ಮಾಹಿತಿ ಸಲ್ಲಿಕೆ: ಸರ್ಕಾರ

Published:
Updated:

ಬೆಂಗಳೂರು: 2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಕೇರಳದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖಂಡ ಅಬ್ದುಲ್ ನಾಸರ್ ಮದನಿ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ಸ್ಫೋಟದ ಸಂಚಿನಲ್ಲಿ ಆತ ಭಾಗಿಯಾದ ಸಂಬಂಧ ದೂರವಾಣಿ ಕರೆಗಳ ಸಂಭಾಷಣೆ ವಿವರವನ್ನು ಶುಕ್ರವಾರ ಹಾಜರುಪಡಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿದೆ.ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರನ್ನೊಳಗೊಂಡ ಏಕಸದಸ್ಯ ಪೀಠ ಗುರುವಾರ ಮದನಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ‘ಸ್ಫೋಟ ನಡೆಯುವ ಮುನ್ನ ಮತ್ತು ಬಳಿಕ  ಮದನಿ ಪ್ರಕರಣದ ಇತರೆ ಆರೋಪಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದ. ಆತ ಸ್ಫೋಟದ ಸಂಚಿನ ರೂವಾರಿ ಎಂಬುದು ಅದರಿಂದ ಸ್ಪಷ್ಟವಾಗಿದೆ’ ಎಂದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ, ಆರೋಪಿಯ ದೂರವಾಣಿ ಸಂಭಾಷಣೆ ವಿವರಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು.‘ಬೆಂಗಳೂರಿನ ಎಂಟು ಕಡೆಗಳಲ್ಲಿ 2008ರ ಜುಲೈ 25ರಂದು ಸ್ಫೋಟ ಸಂಭವಿಸಿತ್ತು. ಗುಜರಾತ್‌ನ ಸೂರತ್ ಮತ್ತು ಅಹ್ಮದಾಬಾದ್‌ಗಳಲ್ಲೂ ಇದೇ ರೀತಿಯ ಸ್ಫೋಟ ಸಂಭವಿಸಿತ್ತು. ಎಲ್ಲ ಕಡೆಗಳಲ್ಲೂ ನೈಟ್ರೇಟ್‌ನಿಂದ ತಯಾರಿಸಲಾದ ಬಾಂಬ್ ಬಳಸಲಾಗಿತ್ತು. ಇದರ ಹಿಂದೆ ಮದನಿಯ ಕೈವಾಡ ಇರುವುದು ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ವಿವರಿಸಿದರು.‘ಸ್ಫೋಟದಲ್ಲಿ ಭಾಗಿಯಾದ ಇತರೆ ಆರೋಪಿಗಳು ನಿರಂತರವಾಗಿ ಮದನಿ ಜತೆ ಸಂಪರ್ಕದಲ್ಲಿದ್ದರು. ಬಹುತೇಕರು ಕೇರಳದವರಾಗಿದ್ದು, ಪಿಡಿಪಿ ಸದಸ್ಯರೂ ಆಗಿದ್ದರು. ಸ್ಫೋಟ ನಡೆಸುವ ಮುನ್ನ ಮತ್ತು ಬಳಿಕ ಆತನ ಜೊತೆ ದೂರವಾಣಿ ಸಂಪರ್ಕದಲ್ಲಿದ್ದರು. ಆತನೇ ಸ್ಫೋಟದ ಸಂಚಿನ ರೂವಾರಿ ಎಂಬುದು ದೂರವಾಣಿ ಕರೆಗಳ ವಿವರ ಪರಿಶೀಲಿಸಿದಾಗ ಖಚಿತವಾಗಿದೆ’ ಎಂದರು. ‘ಕೆಲವರು ನೇರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ.ಇನ್ನು ಕೆಲವರು ಉಳಿದವರನ್ನು ಅಪರಾಧ ಕೃತ್ಯಕ್ಕೆ ಪ್ರಚೋದಿಸುತ್ತಾರೆ. ಅಪರಾಧದ ಸಂಚು ರೂಪಿಸಿ, ಕಾರ್ಯಗತಗೊಳಿಸುತ್ತಾರೆ. ಅಂತಹವರ ಸಾಲಿಗೆ ಮದನಿ ಸೇರುತ್ತಾನೆ. ಆತನಿಗೆ ಜಾಮೀನು ನೀಡಬಾರದು’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿ ಪರ ವಾದ ಮಂಡಿಸಿದ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ‘ಇತರೆ ಆರೋಪಿಗಳು ಪೊಲೀಸ್ ಬಂಧನದಲ್ಲಿ ಇರುವಾಗ ನೀಡಿದ ಹೇಳಿಕೆಯ ಆಧಾರದಲ್ಲಿ ಮದನಿಯನ್ನು ಆರೋಪಿ ಎಂದು ಬಿಂಬಿಸಲಾಗಿದೆ.ಇದು ಸರಿಯಲ್ಲ. ಆರೋಪಿಯೊಬ್ಬ ಪೊಲೀಸ್ ವಶದಲ್ಲಿದ್ದಾಗ ನೀಡಿದ ಹೇಳಿಕೆಯನ್ನೇ ಸಾಕ್ಷ್ಯ ಎಂದು ಪರಿಗಣಿಸಲಾಗದು’ ಎಂದರು. ಆರೋಪಿಯ ದೂರವಾಣಿ ಸಂಭಾಷಣೆ ವಿವರಗಳನ್ನು ಹಾಜರುಪಡಿಸುವುದಾಗಿ ಸರ್ಕಾರ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry