ಇಂದು ಯಡಿಯೂರಪ್ಪ ಬೆಂಬಲಿಗರ ಸಭೆ: ಶಕ್ತಿ ಪ್ರದರ್ಶನಕ್ಕೆ ಸಜ್ಜು

7

ಇಂದು ಯಡಿಯೂರಪ್ಪ ಬೆಂಬಲಿಗರ ಸಭೆ: ಶಕ್ತಿ ಪ್ರದರ್ಶನಕ್ಕೆ ಸಜ್ಜು

Published:
Updated:

ಬೆಂಗಳೂರು: ಬಿಜೆಪಿಯಲ್ಲಿ ಒಳಜಗಳ ತಾರಕಕ್ಕೇರಿದೆ. ಮತ್ತೆ ಮುಖ್ಯಮಂತ್ರಿಯಾಗಲು ತುದಿಗಾಲ ಮೇಲೆ ನಿಂತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬೆಂಬಲಿಗ ಸಚಿವರು, ಶಾಸಕರು ಮತ್ತು ಸಂಸದರ ಸಭೆಯನ್ನು ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ಕರೆದಿದ್ದು, ಬಲ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ.

ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ತಕ್ಷಣ ಬದಲಿಸಬೇಕು. ಅವರ ಜಾಗಕ್ಕೆ ತಮ್ಮನ್ನೇ ನೇಮಿಸಬೇಕು ಎಂದು ಪಟ್ಟುಹಿಡಿದಿರುವ ಯಡಿಯೂರಪ್ಪ ಅವರು ಇದಕ್ಕೆ ಪೂರಕವಾಗಿ ಕೆಲ ಕಾರ್ಯತಂತ್ರಗಳನ್ನೂ ಹೆಣೆದಿದ್ದಾರೆ. ಆದರೆ, ಇವರ ಒತ್ತಡ ತಂತ್ರಕ್ಕೆ ಪಕ್ಷದ ಹೈಕಮಾಂಡ್ ಮಣಿಯದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

`ಯಡಿಯೂರಪ್ಪ ಅವರು ಹೇಳಿದ ಹಾಗೆ ಮುಖ್ಯಮಂತ್ರಿಯನ್ನು ಬದಲಿಸಲು ಸಾಧ್ಯ ಇಲ್ಲ~ ಎಂದು ವರಿಷ್ಠರು ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಹೆಚ್ಚಿನ ಸಂಖ್ಯೆಯ ಶಾಸಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಹೈಕಮಾಂಡ್ ಮುಂದೆ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಿದ್ದಾರೆ. ಗುರುವಾರ ಬೆಳಿಗ್ಗೆ 11.30ರಿಂದ ಮಧ್ಯಾಹ್ನದವರೆಗೂ ಸಭೆ ನಡೆಯಲಿದ್ದು, ಅಲ್ಲಿ ಯಡಿಯೂರಪ್ಪ ಅವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಬೇಕೆಂದು ಅವರ ಬೆಂಬಲಿಗರು ಒತ್ತಾಯಿಸಲಿದ್ದಾರೆ.

ಪ್ರಮುಖ ಶಾಸಕರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಯಡಿಯೂರಪ್ಪ ಅವರ ಬಯಕೆ. ಈ ಸಲುವಾಗಿ ಎರಡು ದಿನಗಳಿಂದ ಶಾಸಕರಿಗೆ ತಾವೇ ಫೋನ್ ಮಾಡಿ ಸಭೆಗೆ ಆಹ್ವಾನಿಸುತ್ತಿದ್ದಾರೆ. ಮಂಗಳವಾರ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಬೆಂಗಳೂರು ನಗರ ಶಾಸಕರು ಹಾಗೂ ಸಚಿವ ಜಗದೀಶ ಶೆಟ್ಟರ್ ಅವರನ್ನು ಪ್ರತ್ಯೇಕವಾಗಿ ತಮ್ಮ ಮನೆಗೆ ಕರೆಸಿಕೊಂಡು, ಗುರುವಾರದ ಸಭೆಗೆ ಆಹ್ವಾನ ನೀಡಿದರು. ಯಡಿಯೂರಪ್ಪ ಅವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಶೆಟ್ಟರ್ ಈ ಸಭೆ ನಂತರ ಬದಲಾಗಿದ್ದಾರೆ. ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ಭಾಗವಹಿಸುವುದಾಗಿಯೂ  ಹೇಳಿದ್ದಾರೆ. ಇದು ಬಿಜೆಪಿ ವಲಯದಲ್ಲೇ ಅಚ್ಚರಿ ಮೂಡಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡ ಸಭೆಗೆ ಹೋಗುವುದಾಗಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. `ಭೋಜನಕ್ಕೆ ಆಹ್ವಾನಿಸುವುದು, ಸಭೆ ನಡೆಸಿ ಚರ್ಚಿಸುವುದು ತಪ್ಪಲ್ಲ. ನನಗೂ ಆಹ್ವಾನ ನೀಡಿದ್ದಾರೆ. ನಾನೂ ಸಭೆಗೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲ ವಿಷಯ ಚರ್ಚಿಸುತ್ತೇವೆ~ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

`ಸಭೆಗೆ ಹೋದಮಾತ್ರಕ್ಕೆ ಯಡಿಯೂರಪ್ಪ ಪರ ಅಂತ ಯಾರೂ ಭಾವಿಸಬೇಕಾಗಿಲ್ಲ~ ಎಂದು ಕೆಲವು ಶಾಸಕರು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

`ಈಶ್ವರಪ್ಪ ಅವರೇ ಯಡಿಯೂರಪ್ಪ ಕರೆದ ಸಭೆಗೆ ಹೋಗುವುದಾದರೆ ನಮ್ಮದೇನು~ ಎಂದು ಬಹುಪಾಲು ಎಲ್ಲ ಶಾಸಕರೂ ಈ ಸಭೆಗೆ ಹೋಗುವ ಸಾಧ್ಯತೆ ಇದೆ. ಸಭೆಗೆ ಹೋಗದಂತೆ ತಡೆಯುವ  ಪ್ರಯತ್ನವೂ ಪಕ್ಷದಲ್ಲಿ ನಡೆದಿಲ್ಲ. `ಯಡಿಯೂರಪ್ಪ ಕೂಡ ನಮ್ಮ ನಾಯಕರು.  ಅವರು ಕರೆದ ಸಭೆಗೆ ಹೋಗದಂತೆ ತಡೆಯುವುದು ಹೇಗೆ? ಆದರೆ, ನಾಯಕತ್ವದ ವಿಚಾರ ಮಾತ್ರ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಆಗುತ್ತದೆ. ನಾವು ಸಭೆಗೆ ಹೋದ ತಕ್ಷಣ ಸದಾನಂದಗೌಡರು ಬದಲಾಗುತ್ತಾರೆನ್ನುವ ಭ್ರಮೆ  ನಮ್ಮಲ್ಲಿ ಇಲ್ಲ~ ಎಂದು ಸಚಿವರೊಬ್ಬರು ಹೇಳಿದರು.

ಮಾಹಿತಿ ಇಲ್ಲ: ಈ ಸಭೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸದಾನಂದಗೌಡರು `ಕೃಷ್ಣಾ~ದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. `ಸಭೆ ಕರೆದವರನ್ನೇ ಆ ಬಗ್ಗೆ ಕೇಳಿ~ ಎಂದು ಪ್ರತಿಕ್ರಿಯಿಸಿದರು.

ಗಡ್ಕರಿ ಭೇಟಿ: ಶಾಸಕರು ಮತ್ತು ಸಂಸದರ ಸಲುವಾಗಿ ಚಿಂತನ- ಮಂಥನ ಸಭೆ ಆಯೋಜಿಸಿದ್ದು, ಇದರಲ್ಲಿ ಭಾಗವಹಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಗುರುವಾರ ರಾತ್ರಿ 9.30ಕ್ಕೆ ನಗರಕ್ಕೆ ಬರಲಿದ್ದಾರೆ. ಅವರು ನಗರದ ಹೋಟೆಲೊಂದರಲ್ಲಿ ತಂಗಲಿದ್ದು, ಯಡಿಯೂರಪ್ಪ ಬೆಂಬಲಿಗ ಶಾಸಕರು ಅಲ್ಲಿಗೇ ಹೋಗಿ ಗಡ್ಕರಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಯಡಿಯೂರಪ್ಪ ಅವರೂ ಗಡ್ಕರಿಯನ್ನು ಭೇಟಿ ಮಾಡಿ ರಾಜಕೀಯ ಪರಿಸ್ಥಿತಿ ಬಗ್ಗೆ ವಿವರಣೆ ಪಡೆಯಲಿದ್ದಾರೆ ಎಂದು ಗೊತ್ತಾಗಿದೆ.

`ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಬೇಕಾದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗೆಲ್ಲಿಸುವುದು ನನ್ನ ಜವಾಬ್ದಾರಿ. ಇದು ಎನ್‌ಡಿಎ ಸರ್ಕಾರ ರಚನೆಗೂ ಪೂರಕವಾಗಲಿದೆ. ಇದು  ಸಾಧ್ಯವಾಗಬೇಕಾದರೆ ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ. ನನ್ನ ಬಳಿ ಸದ್ಯಕ್ಕೆ 89 ಮಂದಿ ಶಾಸಕರಿದ್ದಾರೆ ಎನ್ನುವ ಬೇಡಿಕೆಯನ್ನು ಗಡ್ಕರಿ ಅವರ ಮುಂದೆ ಮಂಡಿಸಲಿದ್ದಾರೆ~ ಎಂದು ಗೊತ್ತಾಗಿದೆ. ತಮ್ಮಿಂದ ಮುಖ್ಯಮಂತ್ರಿ ಆದ ಸದಾನಂದ ಗೌಡರು ಈಗ ಅದೃಷ್ಟದಿಂದ ಆಗಿದ್ದಾಗಿ ಹೇಳುತ್ತಾರೆ. `ಏಕಪಕ್ಷೀಯವಾದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಚಿವ ಎಸ್. ಸುರೇಶ್‌ಕುಮಾರ್, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಹೇಳಿದ್ದೇ ಇವರಿಗೆ ವೇದವಾಕ್ಯ. ಸದಾನಂದಗೌಡರು ಬದಲಾಗಿದ್ದಾರೆ. ಅವರ ನಡವಳಿಕೆ ನಮಗೆ ಹಿಡಿಸುತ್ತಿಲ್ಲ. ಹೀಗಾಗಿ ಅವರನ್ನು ಬದಲಾಯಿಸಿ~ ಎಂದು ಯಡಿಯೂರಪ್ಪ ಆಗ್ರಹಿಸಲಿದ್ದಾರೆ ಎನ್ನಲಾಗಿದೆ.

ಶೆಟ್ಟರ್‌ಗೆ ಆಮಿಷ

ಇತ್ತೀಚಿನವರೆಗೂ ಯಡಿಯೂರಪ್ಪ ಅವರ ವಿರೋಧಿ ಪಾಳೆಯದಲ್ಲಿದ್ದ ಸಚಿವ ಜಗದೀಶ ಶೆಟ್ಟರ್ ತಮ್ಮ ನಿಷ್ಠೆ ಬದಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಬಗೆಯ ಊಹಾಪೋಹಗಳು ಕೇಳಿಬರುತ್ತಿವೆ.

`ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಯಿತು~ ಎಂದು ಶೆಟ್ಟರ್ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

`ಪಕ್ಷದ ಹೈಕಮಾಂಡ್ ನನ್ನನ್ನು ಮುಖ್ಯಮಂತ್ರಿ ಮಾಡಲು ಒಪ್ಪದಿದ್ದರೆ, ನಿಮ್ಮನ್ನೇ ಮಾಡಲು ಬೆಂಬಲ ಸೂಚಿಸುತ್ತೇನೆ ಎಂದು ಯಡಿಯೂರಪ್ಪ ಅವರು ಶೆಟ್ಟರ್‌ಗೆ ವಚನ ನೀಡಿದ್ದಾರೆ~ ಎನ್ನಲಾಗಿದೆ. ಗೃಹ ಸಚಿವ ಆರ್.ಅಶೋಕ ಅವರಿಗೆ ಉಪಮುಖ್ಯಮಂತ್ರಿ ಮಾಡುವ ಆಸೆ ತೋರಿಸಿದ್ದಾರೆ. ಹೀಗೆ ಮಾಡುವುದರಿಂದ ಅವರ ಕಡೆಯ ಎಲ್ಲ ಶಾಸಕರನ್ನು ಒಲಿಸಿಕೊಳ್ಳುವ ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿಬರುತ್ತಿವೆ.

ಈ ನಡುವೆ ಸದಾನಂದಗೌಡರ ಕಾರ್ಯವೈಖರಿ ಬಗ್ಗೆ ಶೆಟ್ಟರ್ ಅವರೂ ಅಸಮಾಧಾನಗೊಂಡಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕೊರಗು ಅವರಲ್ಲಿದೆ. ಈ ಕುರಿತು ಆಪ್ತರಲ್ಲಿ ಅವರು ಅಸಮಾಧಾನ ಹೊರಗೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಡಿಯೂರಪ್ಪ ಪರ ನಿಂತಿದ್ದಾರೆ ಎಂದು ಗೊತ್ತಾಗಿದೆ. ಸುಮಾರು ಮೂರು ತಿಂಗಳಿಂದಲೂ ಯಡಿಯೂರಪ್ಪ ಅವರು ಜಗದೀಶ ಶೆಟ್ಟರ್ ಅವರನ್ನು ಈ ಕುರಿತಾಗಿ ಮನವೊಲಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry