ಇಂದು ರಾಜ್ಯ ಸರ್ಕಾರದ ನಿರ್ಧಾರ

7

ಇಂದು ರಾಜ್ಯ ಸರ್ಕಾರದ ನಿರ್ಧಾರ

Published:
Updated:
ಇಂದು ರಾಜ್ಯ ಸರ್ಕಾರದ ನಿರ್ಧಾರ

ಸುವರ್ಣ ವಿಧಾನಸೌಧ (ಬೆಳಗಾವಿ): ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಪಾಲನೆಗೆ ಸಂಬಂಧಿಸಿದಂತೆ ಗುರುವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಗೆ ತಿಳಿಸಿದರು.

ಸುವರ್ಣ ವಿಧಾನಸೌಧದಲ್ಲಿ ನಡೆದ ಮೊದಲ ಅಧಿವೇಶನದ ಮೊದಲ ದಿನವೇ ಕಾವೇರಿ ನದಿ ನೀರು ಹಂಚಿಕೆ ವಿವಾದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಭಾನುವಾರದವರೆಗೂ ನಿತ್ಯ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವ ಕುರಿತು ಪ್ರಸ್ತಾಪಿಸಿದ ಪ್ರತಿಪಕ್ಷಗಳ ಸದಸ್ಯರು, `ನೀರು ಬಿಡುಗಡೆ ಮಾಡುವುದಿಲ್ಲ' ಎಂಬ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.ಈ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ನಡೆಯಿತು. `ತಮಿಳುನಾಡಿಗೆ ನೀರು ಬಿಡುವುದಿಲ್ಲ' ಎಂಬ ಖಚಿತ ನಿರ್ಧಾರ ಘೋಷಿಸುವಂತೆ ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದರು. ಆಗ ಹೇಳಿದ್ದ ಮುಖ್ಯಮಂತ್ರಿ, `ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿ ಇನ್ನೂ ಕೈಸೇರಿಲ್ಲ. ಗುರುವಾರ ಬೆಳಿಗ್ಗೆ ತಜ್ಞರ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಸರ್ಕಾರದ ನಿರ್ಧಾರವನ್ನು ಸದನದಲ್ಲೇ ಪ್ರಕಟಿಸಲಾಗುವುದು' ಎಂದರು.

ಈ ವಿಷಯದ ಬಗ್ಗೆ ಪ್ರತಿಪಕ್ಷಗಳ ನಾಯಕರ ಜೊತೆ ಸಭೆ ನಡೆಸಿ ಚರ್ಚಿಸಲಾಗುವುದು. ಕಾನೂನು ತಜ್ಞರ ಜೊತೆಗೂ ಚರ್ಚಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ಮುನ್ನಡೆಯಲಿದೆ. ಸರ್ಕಾರ ಆತುರದಿಂದ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ರಾಜ್ಯದ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ. ರಾಜ್ಯದ ಹಿತಾಸಕ್ತಿ ಕಾಯುವಂತಹ ನಿರ್ಧಾರವನ್ನೇ ಸರ್ಕಾರ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.ಕಾವೇರಿ ನದಿ ಪ್ರಾಧಿಕಾರ, ಕಾವೇರಿ ಉಸ್ತುವಾರಿ ಸಮಿತಿ, ಸುಪ್ರೀಂಕೋರ್ಟ್ ಎಲ್ಲ ಕಡೆಗಳಲ್ಲೂ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿದೆ. ತಮಿಳುನಾಡು ಮುಖ್ಯಮಂತ್ರಿಯವರ ಜೊತೆ ನಡೆಸಿದ ಸಭೆಯಲ್ಲೂ ರಾಜ್ಯದ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಲಾಗಿತ್ತು.ರಾಜ್ಯದ ಅಣೆಕಟ್ಟೆಗಳಿಂದ ಇನ್ನು ನೀರು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿತ್ತು ಎಂದು ವಿವರಿಸಿದರು. ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲರು ವಾಸ್ತವಿಕ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿಲ್ಲ ಎಂಬ ಸಂಶಯ ಕೆಲವು ಶಾಸಕರಲ್ಲಿದೆ. ಅಂತಹ ಅನುಮಾನ ಯಾರಿಗೂ ಬೇಡ. ದೇಶದ ಶ್ರೇಷ್ಠ ವಕೀಲರಲ್ಲಿ ಒಬ್ಬರಾದ ಫಾಲಿ ಎಸ್.ನಾರಿಮನ್ ಅವರು ಸಮರ್ಥವಾಗಿಯೇ ವಾದ ಮಂಡಿಸಿದ್ದಾರೆ. ಈ ವಿಷಯದಲ್ಲಿ ಎಳ್ಳಷ್ಟೂ ನಿರ್ಲಕ್ಷ್ಯ ಆಗಿಲ್ಲ ಎಂದು ಹೇಳಿದರು.ನೀರು ಬಿಟ್ಟರೆ ಸಂಘರ್ಷ: ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ಈಗ ಸುಪ್ರೀಂಕೋರ್ಟ್ ನೀಡಿರುವ ಆದೇಶ ರಾಜ್ಯದ ಪಾಲಿಗೆ ಆಘಾತಕಾರಿ ಮತ್ತು ಅಪಾಯಕಾರಿಯಾದುದು. ಯಾರೂ ಇಂತಹ ಆದೇಶವನ್ನು ನಿರೀಕ್ಷಿಸಿರಲಿಲ್ಲ. ಈ ಆದೇಶವನ್ನು ಪಾಲಿಸಲು ಮುಂದಾಗಿ ಸರ್ಕಾರ ನೀರು ಬಿಡುಗಡೆಗೆ ಮುಂದಾದರೆ ರಾಜ್ಯದ ಜನರು ಸಂಘರ್ಷದ ಹಾದಿ ತುಳಿಯುವ ಅಪಾಯ     ವಿದೆ' ಎಂದು ಎಚ್ಚರಿಸಿದರು.

ಕಾವೇರಿ ಕಣಿವೆಯ ಎಲ್ಲ ಜಲಾಶಯಗಳಲ್ಲೂ ಸೇರಿದಂತೆ ಒಟ್ಟು 34 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದೆ.ಈ ನೀರು ಮುಂಗಾರು ಬೆಳೆಗೂ ಸಾಲದು. ಕುಡಿಯುವ ನೀರು ಪೂರೈಕೆಗೂ ಸಾಕಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಿದರೆ ಐದು ಟಿಎಂಸಿ ಅಡಿ ನೀರು ಹರಿಯುತ್ತದೆ. ರಾಜ್ಯವೇ ಸಂಕಷ್ಟದಲ್ಲಿ ರುವಾಗ ತಮಿಳುನಾಡಿಗೆ ನೀರು ಹರಿಸಿ ಇಲ್ಲಿನ ರೈತರನ್ನು ಸಾವಿನ ದವಡೆಗೆ ನೂಕುವಂತಹ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು ಎಂದರು. `ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ, ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಮುಂದಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಅಣೆಕಟ್ಟೆಗಳಿಂದ ನೀರು ಬಿಡುಗಡೆ ಸಾಧ್ಯವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಬೇಕು' ಎಂದು ಆಗ್ರಹಿಸಿದರು.ನಿರ್ಣಯಕ್ಕೆ ಒತ್ತಾಯ: `ಕಾವೇರಿ ಕಣಿವೆಯ ಜಲಾಶಯಗಳಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವೇ ಇಲ್ಲ. ನೀರು ಬಿಡುಗಡೆ ಸಾಧ್ಯವಿಲ್ಲ ಎಂಬ ಒಂದು ಸಾಲಿನ ನಿರ್ಣಯವನ್ನು ಸದನದಲ್ಲೇ ಒಕ್ಕೊರಲಿನಿಂದ ಕೈಗೊಳ್ಳಬೇಕು' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಡಾ.ಎಚ್.ಸಿ.ಮಹದೇವಪ್ಪ, ಕೆ.ಬಿ.ಚಂದ್ರಶೇಖರ್, ನೆ.ಲ.ನರೇಂದ್ರಬಾಬು, ಜೆಡಿಎಸ್‌ನ ರಮೇಶ್ ಬಂಡಿಸಿದ್ದೇಗೌಡ, ಸಿ.ಎಸ್.ಪುಟ್ಟೇಗೌಡ, ಶಿವಲಿಂಗೇಗೌಡ, ಸಾ.ರಾ.ಮಹೇಶ್, ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ ಮತ್ತಿತರರು ನೀರು ಬಿಡುಗಡೆ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry