ಇಂದು ವಿಚಾರಣೆ ಆರಂಭ

7

ಇಂದು ವಿಚಾರಣೆ ಆರಂಭ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲರು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆ ಸೋಮವಾರ ಆರಂಭವಾಗಲಿದೆ. ಇನ್ನೂ ನಾಲ್ಕು ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆದಿದೆ. ಜಸ್ಟೀಸ್ ಲಾಯರ್ಸ್ ಫೋರಂನ ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಅವರಿಗೆ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ಶುಕ್ರವಾರ ಅನುಮತಿ ನೀಡಿದ್ದರು.ಇಬ್ಬರೂ ವಕೀಲರು ಶನಿವಾರ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ರ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲದಲ್ಲಿ ಯಡಿಯೂರಪ್ಪ ವಿರುದ್ಧ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣಗಳ ವಿಚಾರಣೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.ಒಟ್ಟು 18 ಪ್ರಕರಣಗಳಲ್ಲಿ ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ ಹೂಡಲು ರಾಜ್ಯಪಾಲರು ವಕೀಲರಿಗೆ ಅನುಮತಿ ನೀಡಿದ್ದಾರೆ.ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಮೊಕದ್ದಮೆ ದಾಖಲಿಸಿದ್ದಾರೆ. ಉಳಿದ 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಸೋಮವಾರ ನಾಲ್ಕು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದಾರೆ. ಅರ್ಜಿದಾರರ ಪರ ವಾದಿಸುತ್ತಿರುವ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಇನ್ನೂ ನಾಲ್ಕು ಅರ್ಜಿಗಳನ್ನು ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988’ರ ಪ್ರಕರಣಗಳಿಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಬಿ.ಹಿಪ್ಪರಗಿ ಮುಖ್ಯಮಂತ್ರಿ ವಿರುದ್ಧದ ಮೊಕದ್ದಮೆಗಳ ವಿಚಾರಣೆ ನಡೆಸುವರು. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಸೃಷ್ಟಿಯಾಗಿದೆ. ಹೈಕೋರ್ಟ್ ಮೊರೆ?: ಇನ್ನೊಂದೆಡೆ ತಮ್ಮ ವಿರುದ್ಧ ವಕೀಲರು ವಿಶೇಷ ನ್ಯಾಯಾಲಯದಲ್ಲಿ ವಕೀಲರು ಹೂಡಿರುವ ಮೊಕದ್ದಮೆಗಳ ವಿಚಾರಣೆಗೂ ತಡೆಯಾಜ್ಞೆ ತರಲು ಮುಖ್ಯಮಂತ್ರಿ ಮುಂದಾಗಿದ್ದಾರೆ. ಸೋಮವಾರವೇ ಯಡಿಯೂರಪ್ಪ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ‘ಆಂತರಿಕ ತನಿಖೆ’: ರಾಜ್ಯದ ಭೂಹಗರಣಗಳ ಬಗ್ಗೆ ಪಕ್ಷದ ಆಂತರಿಕ ಸಮಿತಿಯೊಂದು ತನಿಖೆ ನಡೆಸುತ್ತಿದ್ದು, ಇನ್ನು ಒಂದು ತಿಂಗಳಿನಲ್ಲಿ ಅದು ವರದಿ ನೀಡಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದ್ದಾರೆ.ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಭೂಹಗರಣಗಳ ಬಗ್ಗೆ ಲೋಕಾಯುಕ್ತ ಮತ್ತು ನಿವೃತ್ತ ನ್ಯಾಯಮೂರ್ತಿ ಬಿ.ಪದ್ಮರಾಜ ನೇತೃತ್ವದ ಆಯೋಗ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆಯಾದರೂ, ಪಕ್ಷದ ವತಿಯಿಂದ ಆಂತರಿಕ ಸಮಿತಿಯೊಂದು ಈಗಾಗಲೇ ತನಿಖೆ ಆರಂಭಿಸಿದೆ’ ಎಂದರು. ಆಂತರಿಕ ತನಿಖಾ ಸಮಿತಿಯಲ್ಲಿ ಯಾರಿದ್ದಾರೆ? ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆ ರಾಜ್ಯಪಾಲರೂ ಕೈಜೋಡಿಸಿದ್ದಾರೆ. ಹಾಗಾಗಿ ಸರ್ಕಾರ ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದ ಅವರು, ‘ರಾಜ್ಯ ಸರ್ಕಾರದ ನಾಯಕತ್ವವನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೇಲ್ನೋಟಕ್ಕೆ ಸಾಬೀತಾಗುವ ಯಾವುದೇ ಸಾಕ್ಷಿಗಳಿಲ್ಲದಿದ್ದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry