ಬುಧವಾರ, ಮೇ 12, 2021
19 °C

ಇಂದು ವೀರೂ-ಭಜ್ಜಿ ಬಳಗದ ಮುಖಾಮುಖಿ:ಡೆವಿಲ್ಸ್‌ಗೆ ತಡೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಪಿಎಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಡೇರ್‌ಡೆವಿಲ್ಸ್ ಶುಕ್ರವಾರ ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸವಾಲನ್ನು ಎದುರಿಸಲಿದೆ.ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಲಭಿಸಿದ ರೋಚಕ ಗೆಲುವು ಹರಭಜನ್ ನೇತೃತ್ವದ ಮುಂಬೈ ಇಂಡಿಯನ್ಸ್  ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೂ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಇಂದು ನಡೆಯುವ ಪಂದ್ಯದಲ್ಲಿ ಗೆಲ್ಲುವ `ಫೇವರಿಟ್~ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವುದು ಡೇರ್‌ಡೆವಿಲ್ಸ್. ವೀರೇಂದ್ರ ಸೆಹ್ವಾಗ್ ಬಳಗ ಟೂರ್ನಿಯಲ್ಲಿ ಇದುವರೆಗೆ ನೀಡಿದ ಪ್ರದರ್ಶನವೇ ಅದಕ್ಕೆ ಕಾರಣ.ಡೇರ್‌ಡೆವಿಲ್ಸ್ ಆಡಿದ ಏಳು ಪಂದ್ಯಗಳಲ್ಲಿ 10 ಪಾಯಿಂಟ್ ಕಲೆಹಾಕಿದೆ. ಈ ತಂಡದ ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಯಶಸ್ವಿಯಾಗಿರುವರು. ತಂಡದ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದೆ. ಪುಣೆ ವಾರಿಯರ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸೆಹ್ವಾಗ್ ಆಕರ್ಷಕ ಪ್ರದರ್ಶನ ನೀಡಿದ್ದರು. ಕೆವಿನ್ ಪೀಟರ್ಸನ್ ಕೂಡಾ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿರುವ ಬ್ಯಾಟ್ಸ್‌ಮನ್.ಮಾರ್ನ್ ಮಾರ್ಕೆಲ್ ಅವರನ್ನೊಳಗೊಂಡ ಡೇರ್‌ಡೆವಿಲ್ಸ್ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡುತ್ತಿದೆ. ಇರ್ಫಾನ್ ಪಠಾಣ್ ಮತ್ತು ಉಮೇಶ್ ಯಾದವ್ ಒತ್ತಡದ ಸಂದರ್ಭಗಳಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಯುವ ಸ್ಪಿನ್ನರ್ ಶಹಬಾಜ್ ನದೀಮ್ ಟೂರ್ನಿಯಲ್ಲಿ ಇದುವರೆಗೆ ಅಚ್ಚರಿಯ ಪ್ರದರ್ಶನ ತೋರಿದ್ದಾರೆ.ಡೇರ್‌ಡೆವಿಲ್ಸ್ ಆಡಿದ ಏಳು ಪಂದ್ಯಗಳಲ್ಲಿ ಒಮ್ಮೆಯೂ ಮೊದಲು ಬ್ಯಾಟ್ ಮಾಡಿಲ್ಲ. ಗುರಿಯನ್ನು ಬೆನ್ನಟ್ಟಿ ಐದು ಸಲ ಗೆಲುವು ಸಾಧಿಸಿದರೆ, ಎರಡು ಬಾರಿ ಅದರಲ್ಲಿ ವಿಫಲವಾಗಿದೆ. ಈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇನ್ನೂ ಸರಿಯಾದ ಅಗ್ನಿಪರೀಕ್ಷೆ ಎದುರಿಸಿಲ್ಲ. ರಾಸ್ ಟೇಲರ್‌ಗೆ ದೊಡ್ಡ ಇನಿಂಗ್ಸ್ ಕಟ್ಟಲು ಅವಕಾಶ ಲಭಿಸಿಲ್ಲ.ವಾಂಖೇಡೆ ಕ್ರೀಡಾಂಗಣದಲ್ಲಿ ಈ ಹಿಂದೆ ಇವೆರಡು ತಂಡಗಳು ಪೈಪೋಟಿ ನಡೆಸಿದ್ದಾಗ ಡೇರ್‌ಡೆವಿಲ್ಸ್ ಜಯ ಸಾಧಿಸಿತ್ತು. ಆದರೆ ಅಂದು ಮುಂಬೈ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಇರಲಿಲ್ಲ.ಸಚಿನ್ ಆಗಮನದ ಬಳಿಕ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಬುಧವಾರ ನಡೆದ ಪಂದ್ಯವೇ ಅದಕ್ಕೆ ಸಾಕ್ಷಿ.  ಕಿಂಗ್ಸ್ ಇವೆಲೆನ್ ಎದುರು ಮುಂಬೈ ಇಂಡಿಯನ್ಸ್ ಸೋಲಿನ ಸುಳಿಯಿಂದ ಅದ್ಭುತ ರೀತಿಯಲ್ಲಿ ಪಾರಾಗಿ ಬಂದಿತ್ತು. ಅಂಬಟಿ ರಾಯುಡು ಮತ್ತು ರಾಬಿನ್ ಪೀಟರ್ಸನ್ ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ ಅಗತ್ಯವಿದ್ದ 32 ರನ್ ಪೇರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.ಡೇರ್‌ಡೆವಿಲ್ಸ್ ಎದುರು ಜಯಕ್ಕೆ ಅಸಾಮಾನ್ಯ ಪ್ರದರ್ಶನ ನೀಡುವುದು ಅಗತ್ಯ ಎಂಬುದು ಹರಭಜನ್ ಬಳಗಕ್ಕೆ ತಿಳಿದಿದೆ. ವೇಗದ ಬೌಲರ್ ಲಸಿತ್ ಮಾಲಿಂಗ ಅನುಪಸ್ಥಿತಿ ಈ ತಂಡವನ್ನು ಕಾಡುತ್ತಿದೆ. ತಂಡಕ್ಕೆ ವಿಕೆಟ್ ಅಗತ್ಯವಿದ್ದ ಸಂದರ್ಭದಲ್ಲೆಲ್ಲಾ ಹರಭಜನ್ ಅವರು ಮಾಲಿಂಗ ಕೈಗೆ ಚೆಂಡು ನೀಡುತ್ತಿದ್ದರು. ಲಂಕಾದ ಬೌಲರ್ ನಾಯಕನ ನಿರೀಕ್ಷೆ ಹುಸಿಗೊಳಿಸುತ್ತಿರಲಿಲ್ಲ. ಇದೀಗ ಮಾಲಿಂಗ ಗಾಯದ ಕಾರಣ ಅಲಭ್ಯರಾಗಿರುವುದು ಹಿನ್ನಡೆಗೆ ಕಾರಣವಾಗಿದೆ.ಹರಭಜನ್ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದರೂ, ಬೌಲಿಂಗ್‌ನಲ್ಲಿ ವಿಫಲರಾಗಿದ್ದಾರೆ. ವಿಕೆಟ್‌ನ ಬರ ಎದುರಿಸುತ್ತಿರುವುದು ಮುಂಬೈ ಇಂಡಿಯನ್ಸ್ ಚಿಂತೆಗೆ ಕಾರಣವಾಗಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಹರಭಜನ್ ಐಪಿಎಲ್ ಮೂಲಕ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆಯುವ ಲೆಕ್ಕಾಚಾರ ಹೊಂದಿದ್ದರು. ಆದರೆ ಇದುವರೆಗೆ ಅವರಿಂದ ಪ್ರಭಾವಿ ಬೌಲಿಂಗ್ ಕಂಡುಬಂದಿಲ್ಲ.
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.