ಗುರುವಾರ , ಫೆಬ್ರವರಿ 25, 2021
23 °C
ತೆಲಂಗಾಣ: ಸೀಮಾಂಧ್ರ ನೌಕರರ ಮುಷ್ಕರ ಆರಂಭ: ಸಂಸತ್‌ ಕಲಾಪ ಭಂಗ

ಇಂದು ಸಂಪುಟ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಸಂಪುಟ ನಿರ್ಧಾರ

ನವದೆಹಲಿ/ಹೈದರಾಬಾದ್ (ಪಿಟಿಐ/ಐಎಎನ್‌ಎಸ್‌))) ) ತೆಲಂಗಾಣ ರಚನೆ ಕುರಿತ ಮಸೂದೆ ಬಗ್ಗೆ ಶುಕ್ರವಾರ (ಫೆ.7) ಕೇಂದ್ರ ಸಚಿವ ಸಂಪುಟದ ವಿಶೇಷ  ಸಭೆ ನಡೆಯಲಿದ್ದು, ಮುಂದಿನ ವಾರ ಸಂಸತ್‌­ನಲ್ಲಿ ಮಸೂದೆ ಮಂಡನೆ­ಯಾಗುವ ಸಾಧ್ಯತೆ ಇದೆ.ಈ ಮಧ್ಯೆ, ಸೀಮಾಂಧ್ರ ಭಾಗದ ಸರ್ಕಾರಿ ನೌಕರರು ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿ­ಸಿ­ದ್ದಾರೆ. ಸಂಸತ್ತಿನಲ್ಲಿ ಭಾರಿ ಗದ್ದಲ ನಡೆದ ಕಾರಣ ಎರಡನೇ ದಿನದ ಕಲಾಪಕ್ಕೂ ಭಂಗ ಉಂಟಾಯಿತು.ಉನ್ನತ ಮಟ್ಟದ ಸಚಿವರ ತಂಡ ಸಭೆ: ಸಂಸತ್ತಿನ ಹೊರಗೆ ಮತ್ತು ಒಳಗೆ ಭಾರಿ ಪ್ರತಿರೋಧಕ್ಕೆ ಕಾರಣವಾಗಿರುವ ತೆಲಂ­ಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತ ‘ಆಂಧ್ರಪ್ರದೇಶ ಪುನರ್‌ರಚನೆ ಮಸೂದೆ’ ಬಗ್ಗೆ ಉನ್ನತ ಮಟ್ಟದ ಸಚಿ­ವರ ತಂಡ (ಜಿಒಎಂ) ಗುರುವಾರ ಚರ್ಚೆ ನಡೆಸಿತು.ಹೈದರಾಬಾದ್‌ ನಗರವನ್ನು ಸೀಮಿತ ಅವಧಿವರೆಗೆ ಕೇಂದ್ರಾಡಳಿತ ಪ್ರದೇಶ­ವನ್ನಾಗಿ ಮಾಡಬೇಕು ಮತ್ತು ಖಮ್ಮಂ ಜಿಲ್ಲೆಯ ಭದ್ರಾಚಲಂ ಉಪ ವಿಭಾಗ­ವನ್ನು ವಿಭಜನೆಯ ನಂತರದ ಆಂಧ್ರ­ಪ್ರದೇಶಕ್ಕೆ ಸೇರಿಸಬೇಕು ಎಂಬ ಸೀಮಾಂಧ್ರ (ಕರಾವಳಿ ಮತ್ತು ರಾಯ­ಲ­ಸೀಮೆ) ಭಾಗದ ಕೇಂದ್ರ ಸಚಿವರ ಒತ್ತಾಯ ಕುರಿತಂತೆ ಸಚಿವರ ತಂಡ ಚರ್ಚೆ ನಡೆಸಿದೆ ಎನ್ನಲಾಗಿದೆ.ಒಂದು ತಾಸಿಗೂ ಹೆಚ್ಚು ಕಾಲ ನಡೆದ  ಸಭೆಯ ನಂತರ ಸುದ್ದಿಗಾರ­ರೊಂ­ದಿಗೆ ಮಾತನಾಡಿದ ಈ ತಂಡದ ಮುಖ್ಯಸ್ಥರೂ ಆಗಿರುವ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರು, ಪ್ರಸ್ತುತ ಅಧಿವೇಶನದಲ್ಲೇ ಈ ಮಸೂದೆ ಮಂಡನೆ ಆಗಲಿದೆ ಎಂದರು. ಆದರೆ, ಸಭೆಯ ವಿವರ ನೀಡಲಿಲ್ಲ.ಜಂತರ್‌ ಮಂತರ್‌ ಮುಂದೆ ಆಂಧ್ರ­ಪ್ರದೇಶದ ಮುಖ್ಯಮಂತ್ರಿ ಕಿರಣ್‌ ಕುಮಾರ್‌ ರೆಡ್ಡಿ ಅವರು ಬುಧವಾರ ನಡೆಸಿದ ಧರಣಿಯಲ್ಲಿ ಭಾಗವಹಿಸಿದ್ದ ಸೀಮಾಂಧ್ರ ಭಾಗದ ಸಚಿವರು,  ‘ಮುತ್ತಿನ ನಗರಿ’ ಹೈದರಾಬಾದ್‌ ತೆಲಂ­ಗಾಣದ ಪಾಲಾಗುವುದನ್ನು ತಪ್ಪಿಸಲು ಕಡೆಯ ಪ್ರಯತ್ನವಾಗಿ ಈ ಒತ್ತಾಯ ಮಾಡಿದ್ದಾರೆ.  ಹಾಗೆಯೇ ಪೋಲವರಂ ವಿವಿಧೋ­ದ್ದೇಶ ನೀರಾವರಿ ಯೋಜನೆ­ಗಳನ್ನು ಒಳಗೊಂಡಿರುವ ಭದ್ರಾಚಲಂ ಉಪ­ವಿಭಾ­ಗವನ್ನು ಶತಾಯಗತಾಯ  ಸೀಮಾಂಧ್ರ ಭಾಗಕ್ಕೆ ಪಡೆಯಬೇಕು ಎಂದು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಜೊತೆಗೆ ತೆಲಂಗಾಣ ಮತ್ತು ಉಳಿದ ಆಂಧ್ರಪ್ರದೇಶದ ಭಾಗಕ್ಕೆ ಆರ್ಥಿಕ ಮತ್ತು ಕಂದಾಯ ಸಂಪನ್ಮೂಲಗಳ ಹಂಚಿಕೆ ಕುರಿತಂತೆಯೂ ಅವರು ಕಳ­ವಳ ವ್ಯಕ್ತಪಡಿಸಿದ್ದರು.ರಾಜ್ಯಸಭೆಯಲ್ಲಿ ಮೊದಲು  ಮಂಡಿಸುವ ಸಾಧ್ಯತೆ: ತೆಲಂಗಾಣ ರಚನೆಗೆ ಸಂಪೂರ್ಣ ಬೆಂಬಲ ನೀಡುವು­ದಾಗಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಈಗಾಗಲೇ  ನಿರ್ಧಾರ ಕೈಗೊಂಡಿರುವುದರಿಂದ ಕಾಂಗ್ರೆಸ್‌ ನೇತೃ­ತ್ವದ ಯುಪಿಎ ಸರ್ಕಾರ ಮೊದಲು  ರಾಜ್ಯಸಭೆಯಲ್ಲಿ ಈ ಮಸೂದೆ ಮಂಡಿಸುವ ಇಚ್ಛೆ ಹೊಂದಿದೆ. ಈ ಮೂಲಕ ಲೋಕಸ­ಭೆ­ಯಲ್ಲಿ ಮಸೂದೆಗೆ ದಾರಿ ಸುಗಮ ಮಾಡಿಕೊಳ್ಳಲು ಬಯಸಿದೆ.ಒಂದೊಮ್ಮೆ ಲೋಕಸಭೆಯಲ್ಲಿ (15ನೇ ಲೋಕ ಸಭೆಯ ಕಡೆಯ ಅಧಿವೇಶನ) ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗದಿದ್ದರೆ, ಈ ಮಸೂದೆಯನ್ನು ಮುಂದಿನ ಸರ್ಕಾರಕ್ಕೆ ಬಿಡುವ ಕಾರ್ಯತಂತ್ರವೂ ಸರ್ಕಾರದ ಮುಂದಿದೆ ಎನ್ನಲಾಗಿದೆ.ಅನಿರ್ದಾಷ್ಟವಧಿ ಮುಷ್ಕರ  

(ಹೈದರಾಬಾದ್‌ ವರದಿ):
ಆಂಧ್ರ ವಿಭಜನೆ ಖಂಡಿಸಿ ಸೀಮಾಂಧ್ರ ಭಾಗದ ಸರ್ಕಾರಿ ನೌಕರರು ಗುರುವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿ­ಸಿದ್ದಾರೆ. ಇದರಿಂದ ಸರ್ಕಾರಿ ಕಚೇರಿ­ಗಳು ಬಹುತೇಕವಾಗಿ ಮುಚ್ಚಿದ್ದವು.ಮುಷ್ಕರಕ್ಕೆ ಕರೆ ಕೊಟ್ಟಿರುವ ಆಂಧ್ರ­ಪ್ರದೇಶ ಪತ್ರಾಂಕಿ­­ತೇತರ ಅಧಿಕಾರಿ­ಗಳ ಸಂಘವು (ಎಪಿಎನ್‌­ಜಿ­ಒಎಸ್‌), ನಾಲ್ಕು ಲಕ್ಷಕ್ಕೂ ಹೆಚ್ಚು ನೌಕರರು 13 ಜಿಲ್ಲೆಗ­ಳಲ್ಲಿ ಮುಷ್ಕರ ನಡೆಸುತ್ತಿದ್ದಾರೆ ಎಂದಿದೆ.ದೆಹಲಿ ಚಲೋ’: ಶುಕ್ರವಾರ ಮತ್ತು ಶನಿವಾರ­ಗಳಂದು (ಫೆ.7, 8) ಕೇಂದ್ರ ಸರ್ಕಾರದ ಸಚಿವರು ಮತ್ತು ಸಂಸದರ ಮನೆ ಮುಂದೆ ಧರಣಿ ನಡೆಸ­ಲಾ­ಗುವುದು ಎಂದು ಎಪಿಎನ್‌ಜಿ­ಒಎಸ್ ಅಧ್ಯಕ್ಷ ಅಶೋಕ್‌ ಬಾಬು ತಿಳಿಸಿದರು. ಇದೇ 10, 11 ಮತ್ತು 12ರಂದು ಸೀಮಾಂಧ್ರ ಭಾಗದಲ್ಲಿ ಬಂದ್‌ಗೆ ಕರೆ ನೀಡ­ಲಾಗಿದೆ. ಜೊತೆಗೆ ಫೆ.17,18, 19ರಂದು ‘ದೆಹಲಿ ಚಲೋ’ ಚಳ­ವಳಿ ಕೈಗೊಳ್ಳಲಾಗುವುದು ಎಂದರು.ಕಲಾಪ ಭಂಗ: ತೆಲಂಗಾಣ ಸೇರಿದಂತೆ ವಿವಿಧ ವಿಷಯ­ಗಳ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ ಕೂಡ ಭಾರಿ ಗದ್ದಲ ನಡೆದ ಕಾರಣ ಎರಡು ಸಾರಿ ಕೆಲ ಸಮಯದವರೆಗೆ ಮುಂದಕ್ಕೆ ಹಾಕಿದ್ದ ಎರಡೂ ಸದನಗಳನ್ನು ದಿನ ಮಟ್ಟಿಗೆ ಮುಂದೂಡಲಾಯಿತು.ಲೋಕಸಭೆ ಮತ್ತು ರಾಜ್ಯಸಭೆಗಳು ಸಮಾವೇಶಗೊಳ್ಳುತ್ತಿದ್ದಂತೆ ಭಾರತದ ಮೀನುಗಾರರಿಗೆ ಶ್ರೀಲಂಕಾ ನೀಡುತ್ತಿರುವ ಕಿರುಕುಳದ ಬಗ್ಗೆ ಐಎಐಡಿಎಂಕೆ ಹಾಗೂ ಡಿಎಂಕೆ, 1984ರ ಸಿಖ್‌ ವಿರೋಧಿ ಹತ್ಯಾಕಾಂಡ ಕುರಿತು ಶಿರೋಮಣಿ ಅಕಾಲಿ ದಳ, ಪಥ್ರಿಬಾಲ್ ನಕಲಿ ಎನ್‌ಕೌಂಟರ್‌ ಪ್ರಕರಣ ಸಂಬಂಧ ನ್ಯಾಷನಲ್‌ ಕಾನ್ಫರೆನ್ಸ್ ಸದಸ್ಯರು ಧ್ವನಿ ಎತ್ತಿದರು. ಈ ಮಧ್ಯೆ, ಕಳೆದ ವಾರ ದೆಹಲಿಯಲ್ಲಿ ನಡೆದ ಅರುಣಾಚಲ ಪ್ರದೇಶದ ವಿದ್ಯಾರ್ಥಿ ಹತ್ಯೆ ಪ್ರಕರಣದ ಕುರಿತೂ ಗದ್ದಲ ಉಂಟಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.