ಸೋಮವಾರ, ಜೂನ್ 14, 2021
22 °C

ಇಂದು ಸುಕ್ಷೇತ್ರ ಅಮರೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ/ಬಿ.ಎ. ನಂದಿಕೋಲಮಠ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಸಾಂಪ್ರದಾಯಿಕ ಜಾತ್ರೆಗಳ ಸಂಖ್ಯೆ ಅತಿ ಹೆಚ್ಚು. ಆದರೆ, ಕೃಷಿಕರಿಗಾಗಿ, ಕೃಷಿಪರಿಕರಗಳನ್ನೆ ಅತಿ ಹೆಚ್ಚು ಮಾರಾಟ ಮಾಡುವ ಹಾಗೂ 15 ದಿನಗಳವರೆಗೆ ಅದ್ದೂರಿಯಾಗಿ ಜರುಗುವ ಜಾತ್ರೆಗಳಲ್ಲಿ ಲಿಂಗಸುಗೂರ ತಾಲ್ಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವರ ಜಾತ್ರಾ ಮಹೋತ್ಸವ ಎಂಬುದು ಈ ಭಾಗದ ರೈತಾಪಿ ವರ್ಗದ ಅನಿಸಿಕೆ.ಶತಮಾನಗಳಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಮರೇಶ್ವರ ಲಿಂಗವನ್ನು ರಾಮಾಯಣದ ಕಾಲದ್ದು ಎಂದು ಹೇಳಲಾಗುತ್ತದೆ. ಅನೇಕ ಪವಾಡಗಳನ್ನು ಮೈಗೂಡಿಸಿಕೊಂಡಿರುವ ಲಿಂಗದ ಬಳಿ ಪವಾಡ ಸಾದೃಶ್ಯದಲ್ಲಿ ಬಾಲಕನೋರ್ವ ಮುಳುಗಿ ಲೀನನಾದ. ಅಂತೆಯೆ ಈ ಸ್ಥಳವನ್ನು ಅಮರಗುಂಡ ಎಂದೂ ಈಶ್ವರ ಲಿಂಗವಿರುವುದರಿಂದ ಇದಕ್ಕೆ ಅಮರಗುಂಡ ದೇವರೆಂದು ಪ್ರಚಲಿತದಲ್ಲಿದೆ. ಸದ್ಯದಲ್ಲಿ ಅಮರೇಶ್ವರ ದೇವರು ಎಂದು ಖ್ಯಾತಿಪಡೆದಿದೆ.ಲಿಂಗಸುಗೂರ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ. ಅಂತರದಲ್ಲಿರುವ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆಯ ದಿನವಾದ ಮಾರ್ಚ್ 8 (ಗುರುವಾರ) ಸಂಜೆ ರಥೋತ್ಸವ ಜರುಗಲಿದೆ.ರಥೋತ್ಸವದ ನಂತರದಲ್ಲಿ ನಿರಂತರ 15 ದಿನಗಳ ಕಾಲ ಜಾತ್ರೆ ಜರುಗುವುದು ಇಲ್ಲಿನ ವಿಶೇಷ. ಮನೋರಂಜನೆಗಾಗಿ ನಾಟಕ ಕಂಪೆನಿಗಳು ಬರುತ್ತವೆ. ಮಿಠಾಯಿ ಅಂಗಡಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ.ಎಲ್ಲಾ ಜಾತ್ರೆಗಳಿಗಿಂತ ಈ ಜಾತ್ರೆಯ ವಿಶಿಷ್ಟತೆ ಅಂದರೆ, ರೈತಾಪಿ ವರ್ಗಕ್ಕೆ ಬೇಕಾಗುವ ಕೌಟುಂಬಿಕ ನಿರ್ವಹಣೆ ಸಾಮಗ್ರಿ ಜೊತೆಗೆ ಕೃಷಿ ಪರಿಕರಗಳ ಅಂಗಡಿಗಳೆ ಅತಿ ಹೆಚ್ಚು. ಜಾನುವಾರುಗಳದ್ದೆ ದರ್ಬಾರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎತ್ತುಗಳನ್ನು ನೋಡಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.ಜಾತ್ರಾ ಮಹೋತ್ಸವ ಅಂಗವಾಗಿ ರೇಷ್ಮೆ ವಸ್ತು ಪ್ರದರ್ಶನ, ಖಾದಿಭಂಡಾರ, ಬಸ್ ನಿಲ್ದಾಣ, ಪೊಲೀಸ್ ಠಾಣೆ, ಆಸ್ಪತ್ರೆ ಸೇರಿದಂತೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಸೌಲಭ್ಯಗಳಿಗೆ ದೇವಸ್ಥಾನ ಸಮಿತಿ ತಾಲ್ಲೂಕಿನ ವಿವಿಧ ಇಲಾಖೆಗಳ ಸಹಕಾರದಿಂದ ಶ್ರಮಿಸುತ್ತದೆ.ರಥೋತ್ಸವದ ಮರುದಿನದಿಂದ ಒಂದು ವಾರ ಜಾನುವಾರ ಜಾತ್ರೆ ಜರುಗುವುದು ವಾಡಿಕೆ. ಜಾತ್ರೆಗೆ ಬರುವ ಬಹುತೇಕ ಭಕ್ತರಿಂದ ಕುಟುಂಬ ನಿರ್ವಹಣೆ ಮತ್ತು ಕೃಷಿ ಪರಿಕರಣಗಳ ಖರೀದಿ ಇಲ್ಲಿನ ಒಂದು ಸಂಪ್ರದಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.