ಇಂದು ಸೈಫೀನಾ ನಿಖಾ

7

ಇಂದು ಸೈಫೀನಾ ನಿಖಾ

Published:
Updated:
ಇಂದು ಸೈಫೀನಾ ನಿಖಾ

ಮುಂಬೈ (ಪಿಟಿಐ/ಐಎಎನ್‌ಎಸ್):  ಬಾಲಿವುಡ್‌ನಲ್ಲಿ ಕೆಲವು ವರ್ಷಗಳಿಂದ ಗಾಸಿಪ್‌ಗಳಿಗೆ ಆಹಾರವಾಗಿದ್ದ, ಜತೆಯಾಗಿ ವಾಸಿಸುತ್ತಿರುವ ಖ್ಯಾತ ತಾರೆಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮಂಗಳವಾರ ವಿಧಿವತ್ತಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.  ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಬಹುದಿನಗಳಿಂದ ತಮ್ಮ ಸುತ್ತ ಗಿರಕಿ ಹೊಡೆಯುತ್ತಿದ್ದ ಅಂತೆಕಂತೆಗಳಿಗೆ ವಿವಾಹದ ಮೂಲಕ ತೆರೆ ಎಳೆಯಲಿದೆ. ಪಟೌಡಿ ಮತ್ತು ಕಪೂರ್ ಕುಟುಂಬಗಳ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸೈಫ್ ಮತ್ತು ಕರೀನಾ ರಿಜಿಸ್ಟರ್ಡ್‌ ಮದುವೆಯಾಗಲಿದ್ದಾರೆ. ಹರಿಯಾಣದಲ್ಲಿರುವ ಸೈಫ್ ಪೂರ್ವಿಕರಾದ ಪಟೌಡಿ ನವಾಬರ ಅರಮನೆಯಲ್ಲಿ ಅಕ್ಟೋಬರ್ 17ರಂದು ಮುಸ್ಲಿಂ ಸಂಪ್ರದಾಯದಂತೆ `ನಿಖಾ~ (ಮದುವೆ) ನಡೆಯಲಿದೆ. ಮರುದಿನ ಆರತಕ್ಷತೆ ನಡೆಯಲಿದೆ.ಸೈಫ್, ವಸ್ತ್ರವಿನ್ಯಾಸಕ ರಾಘವೇಂದ್ರ ರಾಠೋಡ್ ವಿನ್ಯಾಸಗೊಳಿಸಿರುವ ಅಚ್ಕನ್ (ನಿಲುವಂಗಿ) ತೊಡಲಿದ್ದಾರೆ. ವಧು ಕರೀನಾ, ರಿತು ಕುಮಾರ್ ಸಿದ್ಧಪಡಿಸಿದ ಸಾಂಪ್ರದಾಯಿಕ `ಶರಾರ~ ಉಡುಗೆ ಧರಿಸಲಿದ್ದಾರೆ.

ಎರಡೂ ಕುಟುಂಬಗಳ ನಿವಾಸದಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಮೆಹಂದಿ ಕಾರ್ಯಕ್ರಮದಲ್ಲಿ ಕರೀನಾ ಗೆಳತಿಯರು ಕುಟುಂಬದ ಸದಸ್ಯರು ಭಾಗವಹಿಸಿದ್ದರು.ಖ್ಯಾತ ಕ್ರಿಕೆಟಿಗ ದಿವಂಗತ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಖ್ಯಾತ ತಾರೆ ಶರ್ಮಿಳಾ ಟ್ಯಾಗೋರ್ ಹಿರಿಯ ಪುತ್ರ ಸೈಫ್‌ಗೆ ಇದು ಎರಡನೇ ಮದುವೆ. ಇದಕ್ಕೂ ಮೊದಲು ಅವರು ತಮಗಿಂತ ವಯಸ್ಸು ಮತ್ತು ವೃತ್ತಿಯಲ್ಲಿ ದೊಡ್ಡವರಾದ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದಿದ್ದರು.ಬಾಲಿವುಡ್‌ನ ಖ್ಯಾತ ಕಪೂರ್ ಕುಟುಂಬಕ್ಕೆ ಸೇರಿದ ಕರೀನಾ, ನಟ ರಾಜ್‌ಕಪೂರ್ ಅವರ ಮೊಮ್ಮಗಳು. 70 ದಶಕದ ನಟಿ ಬಬಿತಾ ಮತ್ತು ರಾಜ್‌ಕಪೂರ ಹಿರಿಯ ಪುತ್ರ ರಣ್‌ಧೀರ್ ಕಪೂರ್ ದಂಪತಿಯ ಎರಡನೇ ಪುತ್ರಿಯೇ ಕರೀನಾ.  ಬಾಲಿವುಡ್ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಜೆ.ಪಿ. ದತ್ತಾ ಅವರ `ರೆಫ್ಯೂಜಿ~ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕರೀನಾ, ಆಪ್ತ ವಲಯದಲ್ಲಿ `ಬೇಬೊ~ ಎಂದೇ ಖ್ಯಾತಿ. ಆರಂಭದಲ್ಲಿ ನಟ ಶಾಹಿದ್ ಕಪೂರ್ ಜತೆಗೂ ಕರೀನಾ ಹೆಸರು ತಳಕು ಹಾಕಿಕೊಂಡಿತ್ತು. ಐದಾರು ವರ್ಷಗಳಿಂದ ಈಚೆಗೆ ಸೈಫ್ ಮತ್ತು ಕರೀನಾ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಜೋಡಿಯ ಮದುವೆ ವಿಷಯ ಮಾಧ್ಯಮಗಳಲ್ಲಿ ಬಹು ಚರ್ಚಿತ ವಿಷಯವಾಗಿತ್ತು.        ಕಂಗೊಳಿಸಿದ ಕರೀನಾ


 ಕರೀನಾರ ಬಾಂದ್ರಾ ಬಂಗ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಔತಣಕೂಟದಲ್ಲಿ ಕುಟುಂಬದ ಬಂಧು, ಮಿತ್ರರು, ಹಿತೈಷಿಗಳು ಸೇರಿದಂತೆ ಬಾಲಿವುಡ್ ತಾರೆಗಳ ದಂಡು ನೆರೆದಿತ್ತು.ಕರೀನಾ ತಾಯಿ ಬಬಿತಾ, ಚಿಕ್ಕಮ್ಮ ನೀತೂ ಸಿಂಗ್, ಸೈಫ್ ಸಹೋದರಿ ಸೋಹಾ ಅಲಿ ಖಾನ್, ಸೋಹಾ ಆಪ್ತಮಿತ್ರ ಕುಣಾಲ್ ಕೆಮು, ಸಂಜಯ್ ಕಪೂರ್, ತುಷಾರ್ ಕಪೂರ್, ವಸ್ತ್ರವಿನ್ಯಾಸಕ ಮನಿಷಾ ಮಲ್ಹೋತ್ರಾ, ಮಲೈಕಾ ಅರೋರಾ ಖಾನ್ ಹಾಗೂ ಕರೀನಾಳ ಆಪ್ತ ಗೆಳತಿ ಅಮೃತಾ ಅರೋರಾ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ಕೇಸರಿ ಬಣ್ಣದ ಉಡುಪು, ಹಸಿರು ಬಣ್ಣದ ಬಳೆಗಳು, ದೊಡ್ಡ ನೆಕ್‌ಲೇಸ್ ಧರಿಸಿ ಕಂಗೊಳಿಸುತ್ತಿದ್ದ ಕರೀನಾ ತಲೆಗೆ ಹೂ ಮುಡಿದಿದ್ದರು. ವಸ್ತ್ರವಿನ್ಯಾಸಕರು ವಿಶೇಷವಾಗಿ ಸಿದ್ಧಪಡಿಸಿದ್ದ ಸರಳವಾದ ಬಿಳಿ ಉಡುಪನ್ನು ಸೈಫ್ ತೊಟ್ಟಿದ್ದರು.ಟೈಗರ್ ಛಾಯೆ

ಸೈಫ್-ಕರೀನಾ ಹರಿಸಲು ಸೈಫ್ ತಂದೆ ಮನ್ಸೂರ್ ಅಲಿಖಾನ್ ಪಟೌಡಿ ಇಲ್ಲದಿರಬಹುದು. ಆದರೆ, ಮಗನ ಮದುವೆ `ಟೈಗರ್~ ಛಾಯೆಯಿಂದ ಹೊರತಾಗಿಲ್ಲ. ಪಟೌಡಿ ಧರಿಸುತ್ತಿದ್ದ `ನವಾಬಿ~ ಶೈಲಿಯ ಧಿರಿಸುಗಳನ್ನು ಗಮನದಲ್ಲಿರಿಸಿಕೊಂಡು ಸೈಫ್‌ಗೆ ಉಡುಪುಗಳನ್ನು ವಿನ್ಯಾಸಗೊಳಿಸಲಾಗಿದೆ.ಸೈಫ್ ಪುತ್ರ ಇಬ್ರಾಹಿಂ ಹಾಗೂ ವಸ್ತ್ರವಿನ್ಯಾಸಕ ರಾಘವೇಂದ್ರ ರಾಠೋಡ್ ಅವರು ವರನ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇದು ಸೈಫ್ ಆಶಯವೂ ಆಗಿತ್ತು. ಸಾಂಪ್ರದಾಯಿಕ ನವಾಬಿ ಶೈಲಿಯ ವಸ್ತ್ರವಿನ್ಯಾಸಕ್ಕಾಗಿ ಅವರು ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್ ಮದುವೆ ಫೋಟೊ ಮತ್ತು ವಿಡಿಯೊ ನೀಡಿದ್ದರು.ಅವರು ತೊಟ್ಟಿದ್ದ ಉಡುಗೆ ಗಮನದಲ್ಲಿರಿಸಿಕೊಂಡು ವಧು-ವರರ ಉಡುಗೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದಕ್ಕಾಗಿ ಸಾಂಪ್ರದಾಯಿಕ ಬನಾರಸಿ ಮತ್ತು ಜೋಧಪುರಿ ಬಟ್ಟೆಗಳನ್ನು ಬಳಸಲಾಗಿದೆ. ಇಬ್ರಾಹಿಂ ಕೂಡ ನಿಲುವಂಗಿಯನ್ನು (ಅಚ್ಕನ್) ತೊಡಲಿದ್ದಾನೆ.  ಅಪ್ಪನ ಮದುವೆಗೆ ಮಕ್ಕಳು?

ಸೈಫ್ ಮತ್ತು ಮೊದಲ ಪತ್ನಿ ಅಮೃತಾ ಸಿಂಗ್ ಅವರ ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ತಮ್ಮ ತಂದೆಯ ಎರಡನೇ ಮದುವೆಗೆ ಹಾಜರಾಗುವರೇ ಎಂಬ ಗುಸು, ಗುಸು ಬಾಲಿವುಡ್‌ನಲ್ಲಿ ಆರಂಭವಾಗಿದೆ. ಮದುವೆಗಾಗಿಯೇ ಇಬ್ಬರಿಗೂ ವಿಶೇಷವಾದ ಉಡುಗೆಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಅವರು ಮದುವೆಗೆ ಬಂದೇ ಬರುತ್ತಾರೆ ಎನ್ನುತ್ತಾರೆ ಕರೀನಾ ತಂದೆ ರಣ್‌ಧೀರ್ ಕಪೂರ್. ಭಾನುವಾರ -ಸೋಮವಾರ ನಡೆದ ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮದಲ್ಲಿ ಶರ್ಮಿಳಾ, ಸೈಫ್ ಮತ್ತು ಕರೀನಾ ನಟಿಸಿದ್ದ ಚಿತ್ರಗಳ ಹಾಡುಗಳಿಗೆ ಅನೇಕ ನಟ, ನಟಿಯರು ಹೆಜ್ಜೆ ಹಾಕಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry