ಇಂಧನ ಕೋಶ: ಭವಿಷ್ಯದ ಬೆಳಕು

7

ಇಂಧನ ಕೋಶ: ಭವಿಷ್ಯದ ಬೆಳಕು

Published:
Updated:

ಪೆಟ್ರೋಲ್ ಬೆಲೆ ಇಳಿಕೆ ಎಂದು ಯಾರಾದರು ಹೇಳಿದರೆ `ಏಪ್ರಿಲ್ ಒಂದೇ?!~ ಎಂದು ಅನುಮಾನದಿಂದ ಕ್ಯಾಲೆಂಡರ್ ನೋಡುವುದಂತೂ ಖಂಡಿತ. ದಿನಗಳು ಉರುಳಿದಂತೆ ನಿಸರ್ಗದ ಒಡಲು ಬರಿದಾಗುತ್ತಿದೆ. ಚಿನ್ನದ ಗಣಿಗಳಂತೆ ತೈಲ ಬಾವಿಗಳೂ ಇನ್ನೂ ಆಳಕ್ಕೆ ಇಳಿಯುತ್ತಿವೆ. ಆದರೆ ವಾಹನ ಮಾರುಕಟ್ಟೆ ಬೃಹದಾಕಾರವಾಗಿ ಬೆಳೆಯುತ್ತಿರುವುದು ಒಂದೆಡೆ ಆಶ್ಚರ್ಯ ಹಾಗೂ ಆತಂಕಕ್ಕೆ ಕಾರಣವಾಗಿದೆ.

 

ಕಾರು, ಬೈಕು ತಯಾರಿಕಾ ಕಂಪೆನಿಗಳು ಮುಂದಿನ ಹತ್ತು ವರ್ಷದ ಯೋಜನೆಗಳನ್ನು ಸಿದ್ಧಪಡಿಸಿವೆ. ಅಲ್ಲಿಯವರೆಗೆ ತೈಲ ಬೆಲೆ ಯಾವ ಮಟ್ಟಕ್ಕೆ ಏರಿ ನಿಲ್ಲುವುದೋ? ಎಂಬ ಆತಂಕ ಎಲ್ಲರಿಗೂ ಇದ್ದೇ ಇದೆ. ಇದಕ್ಕೆ ಹೈಬ್ರಿಡ್ ವಾಹನಗಳೇ ಪರಿಹಾರ ಎಂದುಕೊಂಡು ಅವುಗಳನ್ನು ಕೊಂಡು ನಿರಾಳರಾದರೂ, ಇಂಧನದ ಮೇಲಿನ ಅವಲಂಬನೆ ಕಡಿಮೆಯಾಗದು.ಅಭಿವೃದ್ಧಿಹೊಂದಿದ ರಾಷ್ಟ್ರಗಳಿಗೆ ತೈಲ ಪೂರೈಕೆ ಬಹುದೊಡ್ಡ ತಲೆನೋವಾಗಿದೆ. ಹೀಗಾಗಿಯೇ 2003ರಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಹೈಡ್ರೋಜೆನ್ ಫ್ಯೂಯೆಲ್ ಇನ್ಷಿಯೇಟಿವ್ (ಎಚ್‌ಎಫ್‌ಐ) ಕಾರ್ಯಕ್ರಮವನ್ನು ಘೋಷಿಸಿದರು. ಇದಾದ ಎರಡೇ ವರ್ಷಗಳಲ್ಲಿ ಇಂಧನ ಕಾರ್ಯನೀತಿ ಕಾಯ್ದೆಗೆ ಸಂಸತ್ತಿನ ಅನುಮೋದನೆಯೂ ದೊರಕಿತು. ಈ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜಲಜನಕ ಬಳಸಿ ಇಂಧನ ಕೋಶವನ್ನು ಅಭಿವೃದ್ಧಿಪಡಿಸುವ ಮಹತ್ತರ ಸಾಧನೆಗೆ ಚಾಲನೆ ದೊರೆಯಿತು.ಈ ಮೂಲಕ 2020ರ ವೇಳೆಗೆ ಬಹುತೇಕ ಎಲ್ಲಾ ರಾಷ್ಟ್ರಗಳ ಪ್ರಜೆಗಳಿಗೆ ಕೈಗೆಟಕುವ ಬೆಲೆಗೆ ಫ್ಯೂಯೆಲ್ ಸೆಲ್ ಅಥವಾ ಇಂಧನ ಕೋಶಗಳಿರುವ ವಾಹನ ಲಭ್ಯವಾಗಬೇಕೆನ್ನುವ ಮಹತ್ತರ ಗುರಿಯ ಬೆನ್ನು ಹತ್ತಿ ವಿಜ್ಞಾನಿಗಳು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.ಇತರ ಇಂಧನಗಳಿಗೆ ಹೋಲಿಸಿದಲ್ಲಿ ಇಂಧನ ಕೋಶಗಳ ಬಳಕೆಯಿಂದ ಪರಿಸರಕ್ಕೆ ಆಗುವ ಲಾಭವೇ ಹೆಚ್ಚು. ಏಕೆಂದರೆ ಪೆಟ್ರೋಲಿಯಂ ಉತ್ಪನ್ನ, ಕಲ್ಲಿದ್ದಲು, ಕಟ್ಟಿಗೆ ಇತ್ಯಾದಿ ಇಂಧನಗಳನ್ನು ಸುಟ್ಟಾಗ ಉತ್ಪಾದನೆಯಾಗುವ ಶಕ್ತಿಗಿಂತ ಹೆಚ್ಚಾಗಿ ವಾತಾವರಣಕ್ಕೆ ಬಿಡುಗಡೆಯ ಉಷ್ಣತೆಯ ಪ್ರಮಾಣವೇ ಅಧಿಕ.

 

ಆದರೆ ಇಂಧನ ಕೋಶವೆಂದರೆ ವಿದ್ಯುದ್ರಾಸಾಯನಿಕ ಇಂಧನ ಪರಿವರ್ತನ ಸಾಧಕವಾಗಿದ್ದು, ಇದು ಅತ್ಯಂತ ಸಮರ್ಪಕವಾಗಿ ವಿದ್ಯುತ್ ಉತ್ಪಾದಿಸಲಿದೆ. ಜಲಜನಕ ಹಾಗೂ ಆಮ್ಲಜನಕಗಳ ಸಮ್ಮಿಳನದ ಮೂಲಕ ಶಕ್ತಿಯನ್ನು ಉತ್ಪಾದಿಸುವ ಪ್ರಕ್ರಿಯೆ ಇಂಧನ ಕೋಶಗಳಲ್ಲಿ ನಡೆಯುತ್ತದೆ.

 

ಈ ಪ್ರಕ್ರಿಯೆಯ ಉಪ ಉತ್ಪನ್ನ ನೀರು. ಇದು ಪ್ರಕೃತಿಗೆ ಹಾನಿಕಾರಕವಂತೂ ಅಲ್ಲ. ಹೀಗೆ ಉತ್ಪತ್ತಿಯಾಗುವ ವಿದ್ಯುತ್‌ಅನ್ನು ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಕಾರ್ಖಾನೆ, ವಸತಿ ಸಮುಚ್ಛಯ ಸೇರಿದಂತೆ ಇಂಧನ ಬೇಡುವ ಸಾಧನಗಳಲ್ಲಿ ಉಪಯೋಗಿಸಬಹುದಾಗಿದೆ. ಹೀಗಾಗಿ ಈ ಹೊಸ ತಂತ್ರಜ್ಞಾನ ಕುರಿತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಉತ್ಸುಕವಾಗಿವೆ.ವಿದ್ಯುದ್ರಾಸಾಯನಿಕತೆ ಹೊಸ ತಂತ್ರಜ್ಞಾನವೇನೂ ಅಲ್ಲ. ನಮ್ಮ ಕಾರು, ಬೈಕ್, ಯುಪಿಎಸ್ ಅಥವಾ ಹೊಲಗಳನ್ನು ಪ್ರಾಣಿಗಳ ದಾಳಿಯಿಂದ ರಕ್ಷಿಸುವ ವಿದ್ಯುತ್ ತಂತಿ ಬೇಲಿಯಲ್ಲಿ ಬಳಕೆಯಾಗುವ ಬ್ಯಾಟರಿಯಲ್ಲೂ ಸಹ ವಿದ್ಯುದ್ರಾಸಾಯನಿಕ ಕ್ರಿಯೆ ನಡೆಯುತ್ತದೆ. ಇಲ್ಲೂ ಸಹ ರಾಸಾಯನಿಕಗಳನ್ನು ಹಾಕಿ ಅವುಗಳನ್ನು ಸೀಲ್ ಮಾಡಿ ಇಡಲಾಗುತ್ತದೆ.ಎಂಜಿನ್‌ನಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಬ್ಯಾಟರಿಯಲ್ಲಿ ಶೇಖರಗೊಳ್ಳುತ್ತವೆ. ಹಾಗೂ ಬ್ಯಾಟರಿಯಲ್ಲಿರುವ ರಾಸಾಯನಿಕಗಳೂ ಸಹ ವಿದ್ಯುತ್ ಉತ್ಪಾದಿಸಿ ವಾಹನದ ಅಗತ್ಯ ಪೂರೈಸುತ್ತವೆ. ಹೀಗಾಗಿ ಬ್ಯಾಟರಿಗಳು ರಾಸಾಯನಿಕ ಕ್ರಿಯೆ ನಡೆಯುವವರೆಗೂ ಚಲಿಸಿ ನಂತರ `ಡೆಡ್~ ಆಗುತ್ತವೆ. ಆಗ ಅವುಗಳನ್ನು ರಿಚಾರ್ಜ್ ಮಾಡಬೇಕು ಅಥವಾ ಬಿಸಾಡಬೇಕು.ಆದರೆ ಇಂಧನ ಕೋಶ ತಂತ್ರಜ್ಞಾನದಲ್ಲಿ ನಿರಂತರವಾಗಿ ರಾಸಾಯನಿಕದ ಹರಿವು ಇರುವುದರಿಂದ ಇದು `ಡೆಡ್~ ಆಗುವುದಿಲ್ಲ. ಜತೆಗೆ ವಿದ್ಯುತ್‌ಕೋಶದಿಂದ ವಿದ್ಯುತ್ ಹೊರಹರಿವು ಇದ್ದೇ ಇರುತ್ತದೆ. ಜತೆಗೆ ಉತ್ಪಾದನೆಯಾದ ವಿದ್ಯುತ್ ತನ್ನೊಳಗಲ್ಲದೆ, ಹೊರಗೆ ಪ್ರತ್ಯೇಕ ಘಟಕದಲ್ಲಿ ಶೇಖರವಾಗುತ್ತದೆ. ಜಲಜನಕ ಹಾಗೂ ಆಮ್ಲಜನಕಗಳನ್ನು ಬಳಸಿ ಈಗಾಗಲೇ ಹೋಂಡಾ, ಮರ್ಸಿಡೀಸ್ ಬೆಂಜ್ ಇತ್ಯಾದಿ ಕಾರುಗಳು ಇಂಧನ ಕೋಶಗಳನ್ನು ಬಳಸಿಕೊಳ್ಳುವ ಪರಿಕಲ್ಪನೆ ಇರುವ ಕಾರುಗಳನ್ನು ಸಿದ್ಧಗೊಳಿಸಿವೆ. ಆದರೆ ಇವುಗಳ ಮಾರುಕಟ್ಟೆ ಪ್ರವೇಶ ಇನ್ನೂ ದೂರ.ಇಂಧನ ಕೋಶಕ್ಕೆ ಪೂರೈಸಬೇಕಾದ ರಾಸಾಯನಿಕಗಳಲ್ಲಿ ಒಂದಾದ ಆಮ್ಲಜನಕ ನಮಗೆಲ್ಲರಿಗೂ ಗೊತ್ತಿರುವಂತೆ ವಾತಾವರಣದಲ್ಲಿ ಸುಲಭವಾಗಿ ಲಭ್ಯ. ಆದರೆ ಜಲಜನಕ? ಇದಕ್ಕಾಗಿ ವಿಜ್ಞಾನಿಗಳು ತಾತ್ಕಾಲಿಕವಾಗಿ ನೈಸರ್ಗಿಕ ಅನಿಲವನ್ನು ಬಳಸಿ ಜಲಜನಕ ಉತ್ಪಾದಿಸುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ನವೀಕರಿಸಬಹುದಾದ, ಪರಿಸರ ಸ್ನೇಹಿ ರೂಪದಲ್ಲಿ ಜಲಜನಕ ಉತ್ಪಾದಿಸುವುದು ವಿಜ್ಞಾನಿಗಳ ಮುಂದಿನ ಗುರಿ. ಆದಾಗ್ಯೂ, ಭೂಮಿಯಲ್ಲಿ ನೀರಿನ ಪಾಲು ಹೆಚ್ಚಿರುವುದರಿಂದ ಆ ಮೂಲಕವೂ ಜಲಜನಕ ಉತ್ಪಾದನೆ ಸಾಧ್ಯ.

ಇಂಧನ ಕೋಶದಲ್ಲಿ ಎಷ್ಟು ಬಗೆ?

ಕರ್ನಾಟಕವನ್ನೇ ಉದಾಹರಣೆಯಾಗಿಟ್ಟುಕೊಂಡಲ್ಲಿ ಜಲವಿದ್ಯುತ್, ಕಲ್ಲಿದ್ದಲು, ಪರಮಾಣು ಸ್ಥಾವರಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತಿವೆ. ಅದರಂತೆ, ನಗರಗಳಿಗೂ ಪೂರೈಸುವ ವಿದ್ಯುತ್, ಕಾರು ಚಲಿಸಲು ಪೆಟ್ರೋಲ್, ಲ್ಯಾಪ್‌ಟಾಪ್ ಬಳಕೆಗೆ ಬೇಕಾಗುವ ಬ್ಯಾಟರಿ ಇತ್ಯಾದಿ ಇಂಧನ ಪೂರೈಸುವ ಸಾಧನಗಳನ್ನು ನಾವು ದಿನನಿತ್ಯ ಬಳಸುತ್ತಿದ್ದೇವೆ.ಇವುಗಳನ್ನು ಇಂಧನ ಕೋಶಕ್ಕೆ ಬದಲಿಸಬಹುದಾದ ಸಾಧ್ಯತೆ ಮುಂದಿನ ದಿನಗಳಲ್ಲಿ ಬರಬಹುದು. ನೈಸರ್ಗಿಕ ಇಂಧನಗಳನ್ನು ಬಳಸಿ ಎಂಜಿನ್ ಚಲನೆಯಿಂದ ಚಲಿಸುವ ಯಂತ್ರಗಳಂತೆ ಹಾಗೂ ರಾಸಾಯನಿಕ ಶಕ್ತಿಯು ವಿದ್ಯುತ್ ಶಕ್ತಿಯಾಗಿ ಪರಿವರ್ತನೆಯಾಗಿ ವಾಹನಗಳು ಚಲಿಸುವ ಎರಡೂ ಕಾರ್ಯಗಳನ್ನು ಇಂಧನ ಕೋಶ ಅತ್ಯಂತ ಸಮರ್ಪಕವಾಗಿ ಮಾಡಲಿದೆ.ಇಂಧನ ಕೋಶಗಳು ಡಿಸಿ ವೋಲ್ಟೇಜ್ ನೀಡುವುದರಿಂದ ಇವುಗಳನ್ನು ವಿದ್ಯುತ್ ಮೋಟಾರು, ಬೆಳಕು ಹಾಗೂ ಎಲ್ಲಾ ಬಗೆಯ ವಿದ್ಯುತ್ ಉಪಕರಣಗಳು ಚಲಿಸಲು ಬಳಸಬಹುದಾಗಿದೆ. ಉತ್ಪಾದಕ ತಾಪಮಾನ ಹಾಗೂ ವಿದ್ಯುದ್ವಿಚ್ಛೇಧ್ಯ (ಎಲೆಕ್ಟ್ರೋಲೈಟ್) ಬಳಕೆಯ ಆಧಾರದ ಮೇಲೆ ಇಂಧನ ಕೋಶವನ್ನು ವಿಂಗಡಣೆ ಮಾಡಲಾಗಿದೆ.ಪಾಲಿಮರ್ ಎಕ್ಸ್‌ಚೇಂಜ್ ಮೆಂಬ್ರೇನ್ ಇಂಧನ ಕೋಶ (ಪಿಇಎಂಎಫ್‌ಸಿ): ಈ ರೀತಿಯ ಇಂಧನ ಕೋಶವು ಸಂಚಾರಿ ಸಾಧನಗಳಲ್ಲಿ ಬಳಸಬಹುದಾದ ತಂತ್ರಜ್ಞಾನವಾಗಿದೆ. ಇದು ಅಧಿಕ ಇಂಧನ ಸಾಂದ್ರತೆ ಹಾಗೂ ಕಡಿಮೆ ಶಾಖ (60-80 ಡಿಗ್ರಿ ಸೆಲ್ಸಿಯಸ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಡಿಮೆ ಕಾರ್ಯವಾಹಕ ತಾಪಮಾನ ಹೊಂದಿರುವುದರಿಂದ ಇಂಧನ ಕೋಶದಲ್ಲಿ ಶಾಖ ಉತ್ಪತ್ತಿಯಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೀಗಾಗಿ ಕಡಿಮೆ ಸಮಯದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ.ಸಾಲಿಡ್ ಆಕ್ಸೈಡ್ ಇಂಧನ ಕೋಶ (ಎಸ್‌ಒಎಫ್‌ಸಿ): ಬೃಹತ್ ಕಾರ್ಖಾನೆ ಅಥವಾ ಪಟ್ಟಣಗಳಿಗೆ ವಿದ್ಯುತ್ ನೀಡುವ ಸಾಮರ್ಥ್ಯ ಹೊಂದಿರುವ ಎಸ್‌ಒಎಫ್‌ಸಿ ಅತ್ಯಧಿಕ ಶಾಖ (700ರಿಂದ 1000 ಸೆಲ್ಸಿಯಸ್)ವನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ. ಈ ಪ್ರಮಾಣದ ಶಾಖವನ್ನು ಉತ್ಪತ್ತಿ ಮಾಡುವ ಇಂಧನ ಕೋಶಗಳು ಹಾಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಸಾಲಿಡ್ ಆಕ್ಸೈಡ್ ಇಂಧನ ಕೋಶಗಳ ಬಳಕೆಯಿಂದ ನಿರಂತರವಾಗಿ ಯಾವುದೇ ತಡೆಯಿಲ್ಲದೆ ಕೆಲಸ ನಿರ್ವಹಿಸಲಿದೆ.ಆಲ್ಕಲಿನ್ ಇಂಧನ ಕೋಶ (ಎಎಫ್‌ಸಿ):
ಇಂಧನ ಕೋಶದಲ್ಲಿ ಅತಿ ಹಳೆಯ ದಾದ ವಿನ್ಯಾಸ ಆಲ್ಕಲಿನ್. ಈಗಾಗಲೇ ಇದರ ಪ್ರಯೋಗ ಅಮೆರಿಕದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಬಳಸಲಾಗಿದೆ. ಇದರಂತೆ ಮಾಲ್ಟನ್ ಕಾರ್ಬೋನೇಟ್ ಇಂಧನ ಕೋಶ, ಫಾಸ್ಪೊರಿಕ್ ಆಸಿಡ್ ಇಂಧನ ಕೋಶ, ಡೈರೆಕ್ಟ್ ಮೆಥನಾಲ್ ಇಂಧನ ಕೋಶ ಇತ್ಯಾದಿ ವಿವಿಧ ಬಗೆಯ ಇಂಧನ ಕೋಶಗಳ ಪ್ರಯೋಗಗಳು ಚಾಲ್ತಿಯಲ್ಲಿವೆ.

ಇಂಧನ ಕೋಶದ ಕ್ಷಮತೆ

ಮಾಲಿನ್ಯ ನಿಯಂತ್ರಣ ಇಂಧನ ಕೋಶದ ಪ್ರಮುಖ ಉಪಯೋಗ. ಆದರೆ ಪೆಟ್ರೋಲ್, ಬ್ಯಾಟರಿ ಚಾಲಿತ ಹಾಗೂ ಇಂಧನ ಕೋಶದ ಕಾರುಗಳನ್ನು ಹೋಲಿಸಿದಾಗ ಆಧುನಿಕ ತಂತ್ರಜ್ಞಾನ ಬಳಸಿದ ಇಂಧನ ಕೋಶದಿಂದ ಚಲಿಸುವ ಕಾರುಗಳ ಕಾರ್ಯಕ್ಷಮತೆ ಉತ್ತಮವಾಗಿದೆ. ಈ ಮೇಲಿನ ಮೂರು ಕಾರುಗಳಿಗೆ ಅಗತ್ಯವಿರುವಂತೆ ಚಕ್ರಗಳು, ಟ್ರಾನ್ಸ್‌ಮಿಷನ್ ಹಾಗೂ ವಿದ್ಯುತ್ ಟ್ರಾನ್ಸ್‌ಮಿಷನ್ ಇರಬೇಕಾದ್ದು ಕಡ್ಡಾಯ. ಆದರೆ ಮೆಕ್ಯಾನಿಕಲ್ ಶಕ್ತಿ ಉತ್ಪಾದನೆಯಲ್ಲಿ, ಇಂಧನ ಕೋಶದಿಂದ ಚಲಿಸುವ ಕಾರುಗಳಲ್ಲಿ ಶುದ್ಧ ಜಲಜನಕ ಬಳಕೆಯಾಗುವುದರಿಂದ ಇದರಲ್ಲಿರುವ ಶೇ 80ರಷ್ಟು ವಿದ್ಯುತ್ ಶಕ್ತಿ ಉತ್ಪಾದನೆಯಾಗುತ್ತದೆ.

 

ಹೀಗೆ ಉತ್ಪಾದನೆಯಾದ ವಿದ್ಯುತ್ ಕಾರು ಚಲಿಸಲು ಬೇಕಾದ ಮೆಕ್ಯಾನಿಕಲ್ ಶಕ್ತಿಯಾಗಿ ಪರಿವರ್ತಿಸಬಲ್ಲ ಎಲೆಕ್ಟ್ರಿಕ್ ಮೋಟಾರ್ ಹಾಗೂ ಇನ್‌ವರ್ಟರ್‌ಗಳು ಇಲ್ಲಿ ಬಳಸುವುದರಿಂದ ಕಾರಿನ ವೇಗವೂ ಹೆಚ್ಚಾಗಲಿದೆ. ಈಗಾಗಲೇ ಹೋಂಡಾ ಎಫ್‌ಸಿಎಕ್ಸ್ ಕಾರು ಇದೇ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿಪಡಿಸಿರುವ ಕಲ್ಪನೆಯ ಕಾರು ಶೇ. 60ರಷ್ಟು ಇಂಧನ ಉತ್ಪಾದಿಸುತ್ತಿದೆ.ದಿನದಿಂದ ದಿನಕ್ಕೆ ಇಂಧನ ಪ್ರಮಾಣ ಕಡಿಮೆಯಾಗುತ್ತಿರುವ ಬೆನ್ನಲ್ಲಿ ದುಬಾರಿಯಾದರೂ ಇಂಥ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ಅಗತ್ಯವಾಗಬಹುದು.ಇಂಧನ ಕೋಶದ ದೌರ್ಬಲ್ಯಗಳು

ಇಷ್ಟೆಲ್ಲಾ ಅನುಕೂಲಗಳಿರುವ ಇಂಧನ ಕೋಶದಲ್ಲಿ ಕೆಲ ದೌರ್ಬಲ್ಯಗಳೂ ಇವೆ. ಇದು ದುಬಾರಿ. ಇಂಧನ ಕೋಶದಲ್ಲಿ ಪ್ಲಾಟಿನಮ್, ಬೈಪೋಲಾರ್ ತಟ್ಟೆಗಳಂತಹ ದುಬಾರಿ ಲೋಹಗಳನ್ನು ಬಳಸುವುದರಿಂದ ದುಬಾರಿಯೂ ಹೌದು. ಇನ್ನು, ಕಾರುಗಳು ಚಲಿಸುವ ವಾಹನ. ಸಿಗ್ನಲ್ ದೀಪ, ಮನೆ, ಕಚೇರಿ ಹೀಗೆ ಅಗತ್ಯವಿದ್ದಲ್ಲಿ ನಿಲ್ಲಬೇಕು. ನಂತರ ಮತ್ತೆ ಚಲಿಸಬೇಕು. ಹೀಗೆ ಚಲಿಸಿ ನಿಲ್ಲುವುದರಿಂದ ಹಾಗೂ 100 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಶಾಖ ಉತ್ಪತ್ತಿ ಮಾಡುವುದರಿಂದ ವಿದ್ಯುತ್‌ಕೋಶದ ಪದರಗಳು ಹಾನಿಯಾಗುವ ಸಾಧ್ಯತೆ ಹೆಚ್ಚು.ಇನ್ನು ಒಂದು ಕಾರು ಸರಾಸರಿ ನೂರು ಕಿಲೋ ಮೀಟರ್ ಓಡುತ್ತದೆ ಎಂದಾದರೆ, ಅಷ್ಟು ದೂರ ಕ್ರಮಿಸಲು ಅಗತ್ಯವಿರುವ ಜಲಜನಕ ಶೇಖರಣೆಯ ವ್ಯವಸ್ಥೆ ಮಾಡಬೇಕು. ಇದರಿಂದ ವಾಹನದ ಗಾತ್ರ ಹೆಚ್ಚಾಗಲಿದೆ. ಜತೆಗೆ ತೂಕ, ಅದಕ್ಕೆ ತಕ್ಕಂತೆ ಬೆಲೆ ಹಾಗೂ ಸುರಕ್ಷತೆಯೂ ದುಬಾರಿಯಾಗಿರಲಿದೆ. ಆದರೆ ಇವೆಲ್ಲವೂ ನಿವಾರಿಸಬಹುದಾದ ದೌರ್ಬಲ್ಯಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry