ಬುಧವಾರ, ನವೆಂಬರ್ 20, 2019
20 °C

ಇಂಧನ : ದೊಡ್ಡ ಪ್ರಮಾಣದ ಕಾರ್ಯತಂತ್ರ ಅಗತ್ಯ

Published:
Updated:

ಬೆಂಗಳೂರು: `ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಬೇಕಾದರೆ ಇಂಧನ ಉತ್ಪಾದನೆ ಕೂಡ ಹೆಚ್ಚಬೇಕಿದೆ. ವಿವಿಧ ಮೂಲಗಳಿಂದ ಇಂಧನ ಉತ್ಪಾದಿಸಲು ದೇಶ ದೊಡ್ಡ ಪ್ರಮಾಣದಲ್ಲಿ ಕಾರ್ಯತಂತ್ರ ರೂಪಿಸಬೇಕಿದೆ~ ಎಂದು ವಿಜ್ಞಾನ ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ವಿ.  ಎಸ್. ಅರುಣಾಚಲಂ ಅಭಿಪ್ರಾಯಪಟ್ಟರು.ಭಾರತೀಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಲಕ್ಷಾಂತರ ಜನರಿಗೆ ಇಂಧನ: ಶತಮಾನದ ಸವಾಲುಗಳು~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಗ್ರಾಮೀಣ, ನಗರ ಎಂಬ ಭೇದವಿಲ್ಲದೇ ಸರ್ವರಿಗೂ ಸಮಾನ ರೀತಿಯಲ್ಲಿ ವಿದ್ಯುತ್ ಪೂರೈಕೆಗೆ ಮುಂದಾಗಬೇಕು. ನಿರಂತರ ಪೂರೈಕೆಗೆ ಗಮನ ನೀಡುವುದರ ಜತೆಗೆ ಕಡಿಮೆ ದರದ ಹಾಗೂ ಕಡಿಮೆ ಇಂಗಾಲ ಉಗುಳುವ ಇಂಧನಗಳ ಉತ್ಪಾದನೆಗೆ ಒತ್ತು ನೀಡಬೇಕು~ ಎಂದರು.`ಅತಿ ಹೆಚ್ಚು ಕಲ್ಲಿದ್ದಲು ಬಳಸುತ್ತಿರುವ ವಿಶ್ವದ ಮೂರನೇ ರಾಷ್ಟ್ರ ಭಾರತ. ತೈಲ ಅಥವಾ ಅನಿಲ ಬಳಕೆಗಿಂತಲೂ ದೇಶ ಇನ್ನೂ ಕಲ್ಲಿದ್ದಲನ್ನೇ ಅವಲಂಬಿಸಿದೆ. ಆದರೆ ಒಂದು ಕೆ.ಜಿ. ಕಲ್ಲಿದ್ದಲು ಅಷ್ಟೇ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಉತ್ಪಾದಿಸುತ್ತದೆ ಎಂಬುದು ಆತಂಕಕಾರಿ ವಿಚಾರ. ಮಾಲಿನ್ಯರಹಿತ ಕಲ್ಲಿದ್ದಲು ತಂತ್ರಜ್ಞಾನದ ಕೊರತೆ ದೇಶದ ಇಂಧನ ಕ್ಷೇತ್ರದ ಪ್ರಮುಖ ಸವಾಲಾಗಿದೆ~ ಎಂದು ಅವರು ತಿಳಿಸಿದರು.`ದೇಶದಲ್ಲಿರುವ ಕಲ್ಲಿದ್ದಲು ಇನ್ನು 70 ವರ್ಷಗಳಲ್ಲಿ ಬರಿದಾಗುತ್ತದೆ. ವಿಚಿತ್ರ ಎಂದರೆ ಕಲ್ಲಿದ್ದಲಿಗೆ ಹೋಲಿಸಿದರೆ ಉಳಿದ ಇಂಧನಗಳು ದುಬಾರಿಯಾಗಿವೆ. ಅದರಲ್ಲಿಯೂ ಸೌರಶಕ್ತಿ ಉತ್ಪಾದನೆ ಉಪಕರಣಗಳು ಕೈಗೆಟುಕುವ ದರದಲ್ಲಿ ಇಲ್ಲ. ವಿಸ್ತಾರ ಪ್ರದೇಶ, ಸೂರ್ಯನ ಬೆಳಕನ್ನು ಹೀರುವಲ್ಲಿನ ತಾಂತ್ರಿಕ ತೊಂದರೆಗಳಿಂದಾಗಿ ಅದು ಯಶಸ್ವಿಯಾಗಿಲ್ಲ~ ಎಂದು ಅವರು ಮಾಹಿತಿ ನೀಡಿದರು.`ಗಾಳಿ ಹಾಗೂ ಅಲೆಗಳು ಅನಿಶ್ಚಿತ ಇಂಧನ ಮೂಲಗಳಾಗಿವೆ. ಇವುಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಜೈವಿಕ ಇಂಧನವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ. ಜಲ ವಿದ್ಯುತ್ ಪರಿಸರದ ಏರುಪೇರನ್ನು ಅವಲಂಬಿಸಿದ್ದು, ತ್ಯಾಜ್ಯದ ಸಮಸ್ಯೆಯಿಂದಾಗಿ ಪರಮಾಣು ವಿದ್ಯುತ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.`ಲೀಥಿಯಂ ಅಯಾನ್ ಬ್ಯಾಟರಿಯ ಕಾರ್ಯಕ್ಷಮತೆ ಹೆಚ್ಚಿದೆ. ಆದರೆ, ಲೀಥಿಯಂ ಉತ್ಪಾದನೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಇದು ಕೂಡ ದುಬಾರಿ ಎನಿಸಿದೆ. ಚೀನಾ ಲೀಥಿಯಂ ಮೇಲೆ ಏಕಸ್ವಾಮ್ಯತೆ ಸಾಧಿಸಿದ್ದು ಬೊಲಿವಿಯಾದ ದಟ್ಟ ಕಾಡುಗಳಲ್ಲಿ ಮಾತ್ರ ಲೀಥಿಯಂ ನಿಕ್ಷೇಪಗಳಿವೆ~ ಎಂದು ತಿಳಿಸಿದರು.`ಅತಿ ಹೆಚ್ಚು ಇಂಗಾಲ ಉಗುಳುವ ದೇಶಗಳಲ್ಲಿ ಭಾರತ ಕೂಡ ಒಂದು. ಜಾಗತಿಕ ತಾಪಮಾನಕ್ಕೆ ಕಾರಣವಾಗಿರುವ ಹಸಿರು ಮನೆ ಅನಿಲಗಳ ಉತ್ಪಾದನೆಯಲ್ಲಿ ವಿದ್ಯುತ್ ಹಾಗೂ ಕೃಷಿ ಕ್ಷೇತ್ರ ತನ್ನದೇ ಆದ ಕೊಡುಗೆ ನೀಡುತ್ತಿವೆ. ಕುತೂಹಲದ ಅಂಶವೆಂದರೆ ಭತ್ತದಿಂದ ಉಂಟಾಗುವ ಮಿಥೇನ್ ಅನಿಲ ಹಸಿರು ಮನೆ ಪರಿಣಾಮವನ್ನು ಹೆಚ್ಚಾಗಿ ಸೃಷ್ಟಿಸುತ್ತಿದೆ~ ಎಂದರು.`ಇಂಧನಕ್ಕಾಗಿ ಬೇಡಿಕೆ ಸಲ್ಲಿಸುವ ಜನರೇ ಅದರ ಉಳಿತಾಯಕ್ಕೆ ಮುಂದಾಗುತ್ತಿಲ್ಲ. ಅಲ್ಲದೆ, ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಕೊರತೆ ಹೆಚ್ಚಿದ್ದು ಇಂಧನ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗ ನಡೆಸಲು ತರಬೇತಿ ಹೊಂದಿದ ಮಾನವ ಸಂಪನ್ಮೂಲದ ಅಭಾವ ಉಂಟಾಗಿದೆ~ ಎಂದು ಹೇಳಿದರು.ಮದ್ರಾಸ್ ಐಐಟಿ ನಿವೃತ್ತ ನಿರ್ದೇಶಕ ಪ್ರೊ. ಎಲ್.ಎಸ್.ಶ್ರೀನಾಥ್, ಐಐಎಸ್ಸಿ ಸಂದರ್ಶಕ ಪ್ರಾಧ್ಯಾಪಕ ಡಾ. ವಿ.ಕೆ. ಅತ್ರೆ, ಸಂಘದ ಉಪಾಧ್ಯಕ್ಷ ಎಚ್.ಆರ್.ಪಾರ್ಥಸಾರಥಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)