ಸೋಮವಾರ, ಏಪ್ರಿಲ್ 12, 2021
26 °C

ಇಂಧನ ಭದ್ರತೆಗೆ ಹೆಚ್ಚು ಗಮನ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಇಡೀ ವಿಶ್ವವೇ ಇಂಧನ ಕೊರತೆಯನ್ನು ಅನುಭವಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ದೇಶ ಇಂಧನ ಭದ್ರತೆಯತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆ ಇದೆ’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಸಲಹೆ ನೀಡಿದರು.ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವಿಜ್ಞಾನ ಮತ್ತು ಭದ್ರತೆ’ ವಿಷಯ ಕುರಿತು ಅವರು ಮಾತನಾಡಿದರು. ‘ತೈಲ ಬೆಲೆ ದಿನೇ ದಿನೇ ಏರುತ್ತಿದ್ದು ಆಹಾರ ಭದ್ರತೆಯಷ್ಟೇ ಮಹತ್ವವನ್ನು ಇಂಧನ ಭದ್ರತೆಗೆ ಕೂಡ ನೀಡುವ ಅಗತ್ಯವಿದೆ. ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗುವತ್ತ ಭಾರತೀಯರು ಒತ್ತು ನೀಡಬೇಕಿದೆ’ ಎಂದು ತಿಳಿಸಿದರು.‘ಭೂಮಿ ಶೇ  80ರಷ್ಟು ನೀರಿನಿಂದ ಆವೃತವಾಗಿದೆ. ಇಷ್ಟು ಅಗಾಧ ಪ್ರಮಾಣದ ಸಂಪನ್ಮೂಲವನ್ನು ಇಂಧನ ಉತ್ಪಾದನೆಗೆ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬೇಕಿದೆ’ ಎಂದು ಅವರು ಹೇಳಿದರು.‘ರಕ್ಷಣಾ ವಲಯದ ಭದ್ರತೆ ಜತೆಗೆ ಆಹಾರ ಭದ್ರತೆ, ಇಂಧನ ಭದ್ರತೆ, ತಂತ್ರಜ್ಞಾನ ಭದ್ರತೆಗಳು ಕೂಡ ಒಂದು ದೇಶಕ್ಕೆ ಅತಿಮುಖ್ಯ. ಸಾಮಾಜಿಕ ಹಾಗೂ ರಾಜಕೀಯವಾಗಿ ದೇಶ ಸುಸ್ಥಿರವಾಗುವುದು ಕೂಡ ರಕ್ಷಣಾ ವಲಯದ ಭದ್ರತೆಯಷ್ಟೇ ಮುಖ್ಯ ಸಂಗತಿಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.‘ಒಂದು ದೇಶ ಬಡತನದಿಂದ ಮುಕ್ತವಾಗದೇ ಸಂಪೂರ್ಣ ಇ- ಆಡಳಿತ ಹೊಂದುವುದು ಸಾಧ್ಯವಿಲ್ಲ. ಆಧಾರ್ ಯೋಜನೆಯಿಂದ ಬಡವರ್ಗವನ್ನು ಗುರುತಿಸಲು ಸಹಾಯಕವಾಗಲಿದ್ದು ಅಶಕ್ತರಿಗೆ ಶಿಕ್ಷಣ ದೊರೆಯಬೇಕಿದೆ. ಜನರು ಹೆಚ್ಚು ಹೆಚ್ಚು ವಿದ್ಯಾವಂತರಾದರೆ ಮಾತ್ರ ಇ ಆಡಳಿತವನ್ನು ಸರ್ವವ್ಯಾಪಿಯಾಗಿ ಅನುಷ್ಠಾನಕ್ಕೆ ತರಬಹುದು’ ಎಂದರು.ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಅವರು ಉತ್ತರಿಸಿದರು. ‘ಕೇವಲ ವೆಬ್‌ಸೈಟ್ ಹ್ಯಾಕ್ ಆದ ಮಾತ್ರಕ್ಕೆ ಇಡೀ ಸೈಬರ್ ಭದ್ರತೆಗೆ ಹಾನಿಯಾಗುತ್ತದೆ ಎಂದು ಭಾವಿಸಬೇಕಾಗಿಲ್ಲ. ಆದರೆ ಇಂಥ ಘಟನೆಗಳು ನಡೆಯಬಾರದು. ಆ ಬಗ್ಗೆ ಸರ್ಕಾರ ಗಂಭೀರವಾಗಿದೆ’ ಎಂದು ಅವರು ತಿಳಿಸಿದರು. ಐಐಎಸ್ಸಿ ನಿರ್ದೇಶಕ ಪ್ರೊ. ಪಿ. ಬಲರಾಮ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.