ಇಎಸ್‌ಐ ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಇಲ್ಲ

7
ವೈದ್ಯಕೀಯ ಕಾಲೇಜಿನಲ್ಲಿ ಮೀಸಲಾತಿ: ಅರ್ಜಿ ವಜಾ

ಇಎಸ್‌ಐ ಕಾರ್ಮಿಕರ ಮಕ್ಕಳಿಗೆ ಮೀಸಲಾತಿ ಇಲ್ಲ

Published:
Updated:

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ) ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಇಎಸ್‌ಐ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 5ರಷ್ಟು ಮೀಸಲಾತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ.ಬೆಂಗಳೂರಿನ ತ್ರಿವೇದ್‌ ಎಂ. ಶೆಟ್ಟಿ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎನ್‌. ಕುಮಾರ್‌ ಮತ್ತು ನ್ಯಾಯಮೂರ್ತಿ ಸೂರಿ ಅಪ್ಪಾರಾವ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಇಎಸ್‌ಐ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಕಾರ್ಮಿಕರ ಮಕ್ಕಳಿಗೆ ಮಾತ್ರ ಮೀಸಲಾತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.ಇಎಸ್‌ಐ ಕಾರ್ಮಿಕರ ಮಕ್ಕಳಿಗೂ ಈ ಹಿಂದೆ ಮೀಸಲಾತಿ ನೀಡಲಾಗುತ್ತಿತ್ತು. ಆದರೆ ಆ ನಿಯಮವನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಇದು ಸರಿಯಲ್ಲ ಎಂದು ದೂರಿ ಅರ್ಜಿ ಸಲ್ಲಿಸಲಾಗಿತ್ತು.ಧೂಮಪಾನ: ದೂರು ಯಾರಿಗೆ?

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುವವರನ್ನು ಕಂಡರೆ ಯಾರಿಗೆ ದೂರು ನೀಡಬೇಕು? ಕಾನೂನು ಉಲ್ಲಂಘಿಸಿ ಸಿಗರೇಟಿನ ಜಾಹೀರಾತು ಪ್ರದರ್ಶಿಸಿದರೆ ಸಾರ್ವಜನಿಕರು ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.ರವಿಶಂಕರ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ‘ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದುವುದನ್ನು ಕಂಡರೆ, ಕ್ರಮ ಜರುಗಿಸುವ ಅಧಿಕಾರ ಯಾರಿಗೆ ಇದೆ’ ಎಂಬ ಮಾಹಿತಿಯನ್ನೂ ನೀಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.ಸಿಗರೇಟು ಜಾಹೀರಾತು ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೆ ಧೂಮಪಾನ ಮಾಡುವುದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry