ಇಕೋ ರಾಕ್: ಪರಿಸರ ಸಂದೇಶದ ಬ್ಯಾಂಡ್

7

ಇಕೋ ರಾಕ್: ಪರಿಸರ ಸಂದೇಶದ ಬ್ಯಾಂಡ್

Published:
Updated:
ಇಕೋ ರಾಕ್: ಪರಿಸರ ಸಂದೇಶದ ಬ್ಯಾಂಡ್

ಕ್ಲೀಇನ್ ಮತ್ತು ಅಮೆರಿಕದ ಸೋಲಾರ್ ಪಂಚ್: ಶುಕ್ರವಾರ ಸೋಲಾರ್ ಪಂಚ್ ತಂಡದಿಂದ ‘ಇಕೋ ರಾಕ್’ ಪರಿಸರ ಸ್ನೇಹಿ ರಾಕ್ ಸಂಗೀತ. ನವೀಕರಿಸಬಹುದಾದ ಇಂಧನದಿಂದ ವಿದ್ಯುತ್ ಉತ್ಪಾದಿಸಿ ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ವಿಧಾನಕ್ಕೆ ಗುಡ್‌ಬೈ ಹೇಳುವ ಮಹತ್ವಾಕಾಂಕ್ಷಿ ಸಂದೇಶವನ್ನು ಸಾರುವುದು ‘ಇಕೋ ರಾಕ್’ ಉದ್ದೇಶ.ಜಾಗತಿಕ ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ಜನರಿಗೆ ಸಂಗೀತದ ಮೂಲಕ ಶಿಕ್ಷಣ ನೀಡಲು ಅಮೆರಿಕದ ಐವರು ಕಲಾವಿದರ ಸೋಲಾರ್ ಪಂಚ್ ತಂಡ ಹಲವು ದೇಶಗಳಲ್ಲಿ ಸಂಚರಿಸುತ್ತಿದೆ. ಇವರ ವಾಹನದಲ್ಲಿನ ಧ್ವನಿ ವ್ಯವಸ್ಥೆಯ ಬ್ಯಾಟರಿ ಚಾರ್ಜ್ ಮಾಡಲು ಸೌರಶಕ್ತಿ ಬಳಸಲಾಗುತ್ತದೆ. ನ್ಯೂಯಾರ್ಕ್ ಸೇರಿ ವಿವಿಧೆಡೆ ಯಶಸ್ವಿ ಕಾರ್ಯಕ್ರಮ ನೀಡಿರುವ ತಂಡ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಸರ ಸ್ನೇಹಿ ಗುಂಪುಗಳನ್ನು ಹುರಿದುಂಬಿಸಲು ಮುಂದಾಗಿದೆ.ಸಂಗೀತದ ಮೂಲಕ ಜನರನ್ನು ನಿಕಟವಾಗಿ ಸಂಪರ್ಕಿಸಿ ಪರಿಸರ ರಕ್ಷಣೆ, ಸೌರಶಕ್ತಿಯ ಮಹತ್ವ ತಿಳಿಸುವುದು ತಂಡದ ಉದ್ದೇಶ. ತಾವು ಬಳಸುತ್ತಿರುವುದು ಸೌರಶಕ್ತಿ ಎಂಬುದನ್ನು ವೈಜ್ಞಾನಿಕವಾಗಿಯೇ ಮನವರಿಕೆ ಮಾಡಿಕೊಡುವುದರ ಜತೆಗೆ ಸೌರ ವಿದ್ಯುತ್‌ನ ಅನುಕೂಲಗಳನ್ನು ಮನದಟ್ಟು ಮಾಡಲಿದೆ.ಭಾರತದಲ್ಲಿ ಅಸಾಂಪ್ರದಾಯಿಕ ಇಂಧನ ಬಳಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸಂಘ ಸಂಸ್ಥೆಗಳಲ್ಲಿ ‘ಕ್ಲೀಇನ್’ (ಭಾರತೀಯ ಹವಾಮಾನ ನಾಯಕತ್ವ ಜಾಲ - ಕ್ಲೈಮೇಟ್ ಲೀಡರ್‌ಶಿಪ್ ಇಂಡಿಯಾ ನೆಟ್‌ವರ್ಕ್) ಕೂಡ ಒಂದು. ಇದು ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಸಹಿತ ಹಲವು ವಿಚಾರಗಳಲ್ಲಿ ತಿಳಿವಳಿಕೆ ನೀಡುತ್ತಿದೆ. ಅದರ ಈ ಕಾರ್ಯದಲ್ಲಿ ಅಮೆರಿಕದ ಸೋಲಾರ್ ಪಂಚ್ ಕೈಜೋಡಿಸಿದೆ.ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಬಳಕೆ ಕಡಿಮೆ. ಹೀಗಾಗಿ ಸಣ್ಣ ಪ್ರಮಾಣದಲ್ಲಿ ಬೇಕಾದ ವಿದ್ಯುತ್ತನ್ನು ಯಾರ ಮೇಲೂ ಅವಲಂಬಿಸದೇ ಆಯಾ ಹಳ್ಳಿಗಳಲ್ಲೆೀ ಉತ್ಪಾದಿಸಿ ಬಳಸಬಹುದು. ಸೌರಶಕ್ತಿ ಎಂದೂ ಬರಿದಾಗದ ಅತ್ಯುತ್ತಮ ಇಂಧನ ಮೂಲ. ಸೌರಶಕ್ತಿಯನ್ನು ಸಂಗೀತ ಬ್ಯಾಂಡ್‌ನಲ್ಲೂ ಬಳಸಬಹುದು ಎಂಬ ವಾಸ್ತವವನ್ನು ಜನರಿಗೆ ಮನವರಿಕೆ ಮಾಡುತ್ತಲೇ ರಾಕ್ ಸಂಗೀತದ ಮೂಲಕ ಜನರನ್ನು ರಂಜಿಸಿ, ಅರಿವು ಹೆಚ್ಚಿಸುವ ಕಾರ್ಯಕ್ರಮ ಇದು ಎನ್ನುತ್ತಾರೆ ‘ಕ್ಲೀಇನ್’ನ ಕರ್ನಾಟಕ ಸಂಚಾಲಕಿ ವಿಭಾ ಹೆಗ್ಡೆ.

ಸ್ಥಳ: ಜಾಗ, ಹಾಕಿ ಸ್ಟೇಡಿಯಂ ಮುಂಭಾಗ, ಶಾಂತಿನಗರ. ಸಂಜೆ 6 ರಿಂದ 8. ಪ್ರವೇಶ ಉಚಿತ. ಮಾಹಿತಿಗೆ: 99004 46088.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry