ಮಂಗಳವಾರ, ಮಾರ್ಚ್ 2, 2021
29 °C

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಸಂಭ್ರಮದ ಕಲಾಡ್ಚ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಸಂಭ್ರಮದ ಕಲಾಡ್ಚ ಉತ್ಸವ

ನಾಪೋಕ್ಲು: ಕೊಡಗಿನ ಮಳೆ ದೇವರೆಂದೇ ಪ್ರಖ್ಯಾತಿ ಪಡೆದಿರುವ ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ಮತ್ತು ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯಗಳಲ್ಲಿ ವಾರ್ಷಿಕ ಕಲಾಡ್ಚ ಉತ್ಸವ ವಿಜೃಂಭಣೆಯಿಂದ ಭಾನುವಾರ ಜರುಗಿತು.ಉತ್ಸವದ ಪ್ರಯುಕ್ತ ಎರಡೂ ದೇವಾಲಯಗಳಲ್ಲಿ ಎತ್ತುಹೇರಾಟ, ತುಲಾಭಾರ ಸೇವೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ತುಂಬೇರ ಕುಟುಂಬದವರ ಜೋಡೆತ್ತು ಹೇರಾಟ ನಡೆಯಿತು.ಬಳಿಕ ಭಾನುವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟ ಮತ್ತು ಬಲಿವಾಡುವಿನ ಆಗಮನದಿಂದ ದೇವಾಲಯದಲ್ಲಿ ಉತ್ಸವ ಆರಂಭಗೊಂಡಿತು. ಪರದಂಡ, ಪೇರಿಯಂಡ,ಕೋಡಿಮಣಿಯಂಡ, ಅಲ್ಲಾರಂಡ ಮತ್ತು ಚೌರೀರ ಕುಟುಂಬಸ್ಥರ ಎತ್ತೇರಾಟ ಜರುಗಿತು. ದೇವಾಲಯದಲ್ಲಿ ಏಳು ತುಲಾಭಾರ ಸೇವೆಗಳನ್ನು ನಡೆಸಲಾಯಿತು. ದೇವರ ನೃತ್ಯ ಬಲಿಯ ಬಳಿಕ ವಿಶೇಷ ಪೂಜೆ ನೆರವೇರಿಸಲಾಯಿತು.ಮಧ್ಯಾಹ್ನ ಉತ್ಸವ ಮೂರ್ತಿಯೊಂದಿಗೆ ತಕ್ಕಮುಖ್ಯಸ್ಥರು ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮಕ್ಕೆ ತೆರಳಿದರು. ಸಂಪ್ರದಾಯದಂತೆ ಅಲ್ಲಲ್ಲಿ ಬಲಿವಾಡು, ಎತ್ತೇರಾಟ ನಡೆಸಲಾಯಿತು. ಈ.ಆರ್‌. ಸುಂದರಭಟ್‌ ಮತ್ತು ಕುಶಭಟ್‌ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.ಭಕ್ತ ಜನಸಂಘದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಪಾರುಪತ್ತೆಗಾರ ಪರದಂಡ ತಮ್ಮಪ್ಪ, ಶಾಸಕ ಕೆ.ಜಿ. ಬೋಪಯ್ಯ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಜಕುಶಾಲಪ್ಪ ಉತ್ಸವದಲ್ಲಿ ಪಾಲ್ಗೊಂಡಿದ್ದರು.ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯ:

ಇಲ್ಲೂ ಕಲಾಡ್ಚ ಉತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರಿಂದ 16 ತುಲಾಭಾರ ಸೇವೆಗಳನ್ನು ನಡೆಸಲಾಯಿತು. ವಾರ್ಷಿಕ ಉತ್ಸವದ ಸಂದರ್ಭದಲ್ಲಿ 25ಚೀಲ ಕಾಫಿ, 20ಟಿನ್‌ ಎಣ್ಣೆ,  ಎರಡು ಚೀಲ ಭತ್ತ, 50ಕೆ.ಜಿ. ಕರಿಮೆಣಸನ್ನು ಹರಕೆಯ ರೂಪದಲ್ಲಿ ಸಲ್ಲಿಸಿದರು.ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪೇರೂರು ಪೆರ್ಮೆ ಬಲ್ಲತ್ತನಾಡು ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಸೇರಿ ದೇವರ ಬಲಿ ಮತ್ತಿತರ ಪೂಜಾ ಕೈಂಕರ್ಯ ನೆರವೇರಿಸಿದರು. ಸಂಜೆ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಹಿಂತಿರುಗಿದ ಬಳಿಕ ನೃತ್ಯ ಬಲಿಯೊಂದಿಗೆ ಕಲಾಡ್ಚ ಹಬ್ಬಕ್ಕೆ ತೆರೆಬಿತ್ತು. ಅಧಿಕ ಸಂಖ್ಯೆಯ ಭಕ್ತರು ವಾರ್ಷಿಕ ಕಲಾಡ್ಚ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.