ಇಚ್ಚಾಶಕ್ತಿ ಕೊರತೆ: ಅನುಷ್ಠಾನವಾಗದ ಯೋಜನೆ

7

ಇಚ್ಚಾಶಕ್ತಿ ಕೊರತೆ: ಅನುಷ್ಠಾನವಾಗದ ಯೋಜನೆ

Published:
Updated:

ಪಾವಗಡ: ರಾಜಕಾರಣಿಗಳು, ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ರಾಜ್ಯದಲ್ಲಿ ಶೇಕಡ ಹತ್ತರಷ್ಟು ಸಹ ಅಂಗವಿಕಲರ ಕಾರ್ಯಕ್ರಮ ಅನುಷ್ಠಾನವಾಗುತ್ತಿಲ್ಲ ಎಂದು ಅಂಗವಿಕಲರ ಅಧಿನಿಯಮ ಕರ್ನಾಟಕದ ಆಯುಕ್ತ ಕೆ.ವಿ.ರಾಜಣ್ಣ ತಿಳಿಸಿದರು.ತಾಲ್ಲೂಕು ಅಂಗವಿಕಲರ ವಿವಿಧ ಸಂಘಟನೆಗಳು ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಅಂಗವಿಕಲರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹೋರಾಟವಿಲ್ಲದೆ ಸೌಲಭ್ಯ ಪಡೆಯುವಂತಾಗಬೇಕು. ಆಗ ಮಾತ್ರ ಅಂಗವಿಕಲರಿಗೆ ಸ್ವಲ್ಪವಾದರೂ ಸೌಲಭ್ಯ ತಲುಪುವಂತಾಗತ್ತವೆ ಎಂದರು.ಸ್ವಾಮಿ ವಿವೇಕಾನಂದ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಕೆ.ಸುಧೀಂದ್ರ ಮಾತನಾಡಿ, ತಾಲ್ಲೂಕಿನಲ್ಲಿ 7,200 ಅಂಗವಿಕಲರಿದ್ದು, 4,485 ಅಂಗವಿಕಲರು ಶೇಕಡಾ 95ರಷ್ಟು ಅಂಗವೈಕಲ್ಯತೆ ಹೊಂದಿದ್ದಾರೆ. ಒಕ್ಕೂಟಕ್ಕೆ ನಿವೇಶನ ಹಾಗೂ ಅಂಗವಿಕಲರಿಗೆ ಮಾಶಾಸನ ಮತ್ತು ವಿವಿಧ ಇಲಾಖೆಗಳಿಗೆ ಬರುವ ಶೇಕಡ 3ರಷ್ಟು ನಿಧಿಯನ್ನು ಕ್ರಮಬದ್ಧವಾಗಿ ಬಿಡುಗಡೆ ಮಾಡಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ತಿಳಿಸಿದರು.ಜಿ.ಪಂ ಸದಸ್ಯ ಆರ್.ಸಿ.ಅಂಜಿನಪ್ಪ, ಎಸ್‌ಎಸ್‌ಕೆ ಅಧ್ಯಕ್ಷ ಜಿ.ಎಸ್.ಧರ್ಮಪಾಲ್ ಮಾತನಾಡಿದರು.ಯಾಕ್ಷನ್ ಇಂಡಿಯಾ ಸಂಸ್ಥೆಯ ನಂದಿನಿ ಮಾತನಾಡಿ, ತಾಲ್ಲೂಕಿನ ನಾಗಲಮಡಿಕೆ ಗ್ರಾಮದ ಈಶ್ವರಮ್ಮ ಅವರಿಗೆ ಇಂಗ್ಲೆಂಡ್ ದೇಶದ ಪ್ರತಿಷ್ಠಿತ ಅಂತರರಾಷ್ಟ್ರೀಯ ಡಯಾನ ಪ್ರಶಸ್ತಿ ಬಂದಿರುವುದು ಶ್ಲಾಘನೀಯ. ಇದುವರೆಗೆ ಇಬ್ಬರು ಭಾರತೀಯರಿಗೆ ಮಾತ್ರ ಲಭ್ಯವಾಗಿದ್ದು, ಅದರಲ್ಲಿ ಪಾವಗಡ ತಾಲ್ಲೂಕಿನ ವಿದ್ಯಾರ್ಥಿಯೊಬ್ಬಳಿಗೆ ಬಂದಿದೆ ಎಂಬ ಸುದ್ದಿ ಹೆಮ್ಮೆ ಪಡುವಂತಹುದು. ಅಂಗವಿಕಲೆಗೆ ಕಾಲು ಕೈಯಿ ಎರಡೂ ಇಲ್ಲ. ಬಾಯಿಯಲ್ಲೇ ಬರೆಯುತ್ತಾ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ವೇದಿಕೆಯಲ್ಲಿ ಆಕೆಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.ಪುರಸಭೆ ಅಧ್ಯಕ್ಷ ಗುರ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ನಳಿನಿ ಗೋವಿಂದಪ್ಪ, ನಾಗಮಣಿ ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಂಪಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಶಮಂತಕ, ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮರಾಜು, ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ಶಿವಕುಮಾರಯ್ಯ, ರೈತ ಸಂಘದ ಅಧ್ಯಕ್ಷ ನಾಗಭೂಷಣರೆಡ್ಡಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry