ಇಟಲಿ ನಿರ್ಮಿತ ಯುದ್ಧನೌಕೆ ಸೇರ್ಪಡೆ: ಭೂ ಒತ್ತುವರಿ ತಡೆ ನೀತಿ ಬದಲು

7

ಇಟಲಿ ನಿರ್ಮಿತ ಯುದ್ಧನೌಕೆ ಸೇರ್ಪಡೆ: ಭೂ ಒತ್ತುವರಿ ತಡೆ ನೀತಿ ಬದಲು

Published:
Updated:

ಮುಂಬೈ (ಪಿಟಿಐ): ದೇಶದ ವಿವಿಧ ಕಡೆಗಳಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯ ಒತ್ತುವರಿಯನ್ನು ತಡೆಯುವುದಕ್ಕಾಗಿ ಸರ್ಕಾರದ ನೀತಿಯಲ್ಲಿ ಬದಲಾವಣೆಗಳನ್ನು ತರಲು ಕೇಂದ್ರ ಚಿಂತನೆ ನಡೆಸಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಶುಕ್ರವಾರ ಹೇಳಿದ್ದಾರೆ.

ಇಟಲಿ ನಿರ್ಮಿತ ಯುದ್ಧನೌಕೆ ಐಎನ್‌ಎಸ್ ದೀಪಕ್ ಅನ್ನು ಶುಕ್ರವಾರ ಮುಂಬೈನಲ್ಲಿ ನೌಕಾಪಡೆಗೆ ಸೇರ್ಪಡೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಚಿವರು ಈ ವಿಷಯ  ತಿಳಿಸಿದರು.

‘ರಕ್ಷಣಾ ಇಲಾಖೆಗೆ ಸೇರಿದ ಭೂಮಿಗೆ ನಿರಪೇಕ್ಷಣಾ ಪ್ರಮಾಣಪತ್ರಗಳನ್ನು ನೀಡಿರುವ ಕುರಿತಂತೆ ನಮಗೆ ಬಂದಿರುವ ದೂರುಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದ ಅವರು, ‘ಇನ್ನು ಮುಂದೆ ಈ ಪ್ರಕ್ರಿಯೆಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ತೊಡಗಿಕೊಳ್ಳುವಂತೆ ಮತ್ತು ನಿರಪೇಕ್ಷಣಾ ಪ್ರಮಾಣ ಪತ್ರಗಳನ್ನು ನೀಡದಿರುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಇಲಾಖೆಗೆ ಸೇರಿದ ಭೂಮಿಗಳ ಎಲ್ಲಾ ದಾಖಲೆಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗುವುದು ಎಂದೂ ಆಂಟನಿ ಹೇಳಿದರು. ಸೇನಾ ಸಿಬ್ಬಂದಿ ಕಡಿತ ಇಲ್ಲ: ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತಗೊಳಿಸುವ ಪ್ರಸ್ತಾವನೆ ಸಚಿವಾಲಯದ ಮುಂದಿಲ್ಲ ಎಂದು ಆಂಟನಿ ಸ್ಪಷ್ಟಪಡಿಸಿದ್ದಾರೆ.

ಆದರೆ ಅಲ್ಲಿರುವ ಅರೆ ಸೇನಾ ಪಡೆ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ‘ಈ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ. ಅರೆ ಸೇನಾ ಪಡೆ ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತಗೊಳಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry