ಗುರುವಾರ , ಜೂನ್ 24, 2021
25 °C

ಇಟಲಿ ಪ್ರಜೆಗಳ ಅಪಹರಣ ಪ್ರಕರಣ: ನಕ್ಸಲರಿಂದ ಹೊಸ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ(ಪಿಟಿಐ/ಐಎಎನ್‌ಎಸ್): ಅಪಹರಣಕ್ಕೆ ಒಳಗಾಗಿರುವ ಇಬ್ಬರು ಇಟಲಿ ಪ್ರಜೆಗಳನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾಡಿರುವ ಮನವಿಯನ್ನು ತಿರಸ್ಕರಿಸಿರುವ ನಕ್ಸಲರು, ಸರ್ಕಾರದ ಮುಂದೆ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ.ನಕ್ಸಲರ ಬೇಡಿಕೆಗಳನ್ನು ಒಳಗೊಂಡ ಕರಪತ್ರಗಳು ಸರ್ಕಾರಕ್ಕೆ ತಲುಪಿವೆ. ಆದರೆ ಸಂಧಾನಕ್ಕಾಗಿ ಯಾರನ್ನೂ ನಿಯುಕ್ತಿ ಮಾಡಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರಾಜ್ಯ ವಿಧಾನ ಸಭೆಗೆ ತಿಳಿಸಿದರು.

ಒಡಿಶಾ ರಾಜ್ಯದ ಸಿಪಿಐ (ಮಾವೊವಾದಿ) ಸಂಘಟನಾ ಸಮಿತಿ ಕಾರ್ಯದರ್ಶಿ ಸುನಿಲ್ ಎನ್ನುವವರ ಹೆಸರಿನಲ್ಲಿ ಕರಪತ್ರವನ್ನು ಕಳುಹಿಸಲಾಗಿದೆ.ಅಪಹೃತರ ಬಿಡುಗಡೆಗೆ ಈ ಹಿಂದೆ ನಕ್ಸಲರು ಒಟ್ಟು 13 ಬೇಡಿಕೆಗಳನ್ನು ಮುಂದಿಟ್ಟಿದ್ದರು. ಈಗ ಹೊಸ ಬೇಡಿಕೆಗಳನ್ನು ಇಟ್ಟಿದ್ದಾರೆ. ಆದರೆ ಈ ಬೇಡಿಕೆಗಳು ಯಾವುವು ಎಂದು ತಿಳಿದು ಬಂದಿಲ್ಲ.

ಅಪಹರಣ ಪ್ರಕರಣ ಕುರಿತಂತೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಲಿಖಿತ ಹೇಳಿಕೆ ನೀಡಿದ ಪಟ್ನಾಯಕ್, ಅಪಹೃತರ ಬಿಡುಗಡೆಗೆ ಸಂಬಂಧಿಸಿದಂತೆ ಮಾವೊವಾದಿಗಳ ಕರಪತ್ರ ಸರ್ಕಾರಕ್ಕೆ ತಲುಪಿದೆ ಎಂದು ವಿವರ ನೀಡಿದ್ದಾರೆ. ಮಾವೊವಾದಿಗಳು ತಮ್ಮ ಪರವಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮುಂದಾದರೆ, ಸರ್ಕಾರ ಪರಿಶೀಲನೆ ನಡೆಸುವುದು ಎಂದರು.ಪ್ರತಿಕ್ರಿಯೆ ಇಲ್ಲ: ಐದು ದಿನಗಳ ಹಿಂದೆ ಒಡಿಶಾದ ಕಂದಮಲ್ ಜಿಲ್ಲೆಯಲ್ಲಿ ಇಬ್ಬರು ಇಟಲಿ ಪ್ರಜೆಗಳನ್ನು ಅಪಹರಿಸಿರುವ ನಕ್ಸಲರು, ಅಪಹೃತರ ಬಿಡುಗಡೆ ಸಂಬಂಧಿಸಿ ಸರ್ಕಾರ ಮಾತುಕತೆಗೆ ಮುಂದಾಗಿದ್ದರೂ  ಈವರೆಗೆ ಸ್ಪಂದಿಸಿಲ್ಲ.ಸರ್ಕಾರದ ಆಹ್ವಾನಕ್ಕೆ ಮಾವೊವಾದಿಗಳು ಪ್ರತಿಕ್ರಿಯೆ ನೀಡಿಲ್ಲ ಎನ್ನುವುದನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟಪಡಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಮಾವೊವಾದಿಗಳೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧ ಎಂದು ಗೃಹ ಕಾರ್ಯದರ್ಶಿ ಬೆಹರಾ ತಿಳಿಸಿದ್ದಾರೆ.ಈ ನಡುವೆ ಮಾವೊವಾದಿಗಳ ಅಡಗುದಾಣವಾದ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಪತ್ತೆ ಕಾರ್ಯವನ್ನು ಸ್ಥಗಿತಗೊಳಿಸಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಆದೇಶವನ್ನೂ ಹೊರಡಿಸಲಾಗಿಲ್ಲ. ವಿದೇಶಿ ಪ್ರಜೆಗಳ ಅಪಹರಣ ಪ್ರಕರಣದ ಬಗ್ಗೆ ಸ್ವತಃ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೇ ನಿಗಾ ವಹಿಸಿದ್ದಾರೆ.ಚಾರಣಕ್ಕೆ ತೆರಳಿದ್ದ ಇಟಲಿ ಪ್ರಜೆಗಳಾದ ಬೊಸುಸ್ಕೊ ಪೌಲೊ (54) ಮತ್ತು ಕ್ಲಾಡಿಯಾ ಕೊಲಾಂಜೆಲೊ (61) ಅವರನ್ನು ಕಾರಿನ ಚಾಲಕ ಹಾಗೂ ಅಡುಗೆ ಮಾಡುವವನೊಂದಿಗೆ ಮಾವೊವಾದಿಗಳು ಅಪಹರಿಸಿದ್ದರು. ನಂತರ ಚಾಲಕ ಹಾಗೂ ಅಡುಗೆ ಆಳನ್ನು ಬಿಡುಗಡೆಗೊಳಿಸಿದ್ದರು.ನಕ್ಸಲ್ ಸಮಸ್ಯೆ ಹೆಚ್ಚಿರುವ ಗಂಜಮ್-ಕಂದಮಲ್ ಪ್ರದೇಶದಲ್ಲಿ ಪೊಲೀಸರ ಎಚ್ಚರಿಕೆಯ ನಡುವೆಯೂ ಇಟಲಿ ಪ್ರಜೆಗಳು ಚಾರಣಕ್ಕೆ ತೆರಳಿದ್ದರು. ದಾರಿಂಗಿಬದಿ ಬಳಿ  ದಟ್ಟ ಅರಣ್ಯದಲ್ಲಿ ಈ ಅಪಹರಣ ನಡೆದಿದೆ.

ಬಿಡುಗಡೆ ಆಗಿರುವ ಚಾಲಕ ಕಾರ್ತಿಕ್ ಪರಿದಾ ಮತ್ತು ಅಡುಗೆಯಾಳು ಸಂತೋಷ್ ಅವರಿಂದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.ಭರವಸೆ: ನಕ್ಸಲರಿಂದ ಅಪಹೃತರನ್ನು ಬಿಡುಗಡೆಗೊಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಸರ್ಕಾರ ಮಾಡುತ್ತಿದೆ ಎಂದು ಇಟಲಿ ವಿದೇಶಾಂಗ ಸಚಿವ ಗ್ಯುಲಿಯೊ ತೇರ್ಜಿ ಅವರಿಗೆ ಭಾರತ ಭರವಸೆ ನೀಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.