ಭಾನುವಾರ, ಜೂನ್ 13, 2021
25 °C

ಇಟಲಿ ಪ್ರವಾಸಿಗರ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಟಲಿ ಪ್ರವಾಸಿಗರ ಅಪಹರಣ

 ಭುವನೇಶ್ವರ/ಬೆರ‌್ಹಾಂಪುರ   (ಪಿಟಿಐ): ಬುಡಕಟ್ಟು ಜನರೇ ಬಹುಸಂಖ್ಯಾತರಾಗಿರುವ ಒಡಿಶಾದ ಕಂದಮಲ್-ಗಂಜಮ್ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ನಕ್ಸಲರು ಶನಿವಾರ ರಾತ್ರಿ ಇಟಲಿಯ ಇಬ್ಬರು ಪ್ರವಾಸಿಗರನ್ನು ಅಪಹರಿಸಿದ್ದಾರೆ.`ಕಂದಮಲ್ ಜಿಲ್ಲೆಯಲ್ಲಿ ಮಾವೋವಾದಿಗಳು ಇಬ್ಬರನ್ನು ಅಪಹರಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಘಟನೆ ಕುರಿತಾಗಿ ಮತ್ತಷ್ಟು ವಿವರಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ~ ಎಂದು ಒಡಿಶಾ ಡಿಜಿಪಿ ಮನಮೋಹನ ಪ್ರಹರಾಜ್ ಹೇಳಿದ್ದಾರೆ.ಶನಿವಾರ ರಾತ್ರಿ ಅಪಹರಣ ನಡೆದಿರುವುದನ್ನು ಗೃಹ ಕಾರ್ಯದರ್ಶಿ ಯು.ಎನ್‌ಬೆಹೆರಾ ದೃಢಪಡಿಸಿದ್ದಾರೆ.  ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ತಕ್ಷಣ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಕಂದಮಲ್ ಜಿಲ್ಲಾಧಿಕಾರಿ ಆರ್.ಪಿ. ಪಾಟೀಲ್ ಹೇಳಿದ್ದಾರೆ.ಇಟಲಿಯ ಇಬ್ಬರು ಪ್ರವಾಸಿಗರಾದ ಬೊಸುಸ್ಕೊ ಪೌಲೊ ಮತ್ತು ಕ್ಲಾಡಿಯಾ ಕೊಲಾಂಜೆಲೊ ಎಂಬುವವರನ್ನು ಅಪಹರಿಸಿರುವುದಾಗಿ ನಕ್ಸಲರು ಶನಿವಾರ ತಡರಾತ್ರಿ ಕೆಲವು ಖಾಸಗಿ ಸುದ್ದಿವಾಹಿನಿಗಳ ಮೂಲಕ ಪ್ರಕಟಿಸಿದ್ದಾರೆ.ಇಟಲಿ ಪ್ರವಾಸಿಗರು ರಾಜ್ಯ ಸರ್ಕಾರದ ನಿಷೇಧದ ಹೊರತಾಗಿಯೂ, ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಆಕ್ಷೇಪಾರ್ಹ ಛಾಯಾಚಿತ್ರಗಳನ್ನು ತೆಗೆದಿದ್ದಕ್ಕಾಗಿ ಅವರನ್ನು ಅಪಹರಿಸಲಾಗಿದೆ ಎಂದು ಮಾವೋವಾದಿಗಳು ಸುದ್ದಿ ವಾಹಿನಿಗಳಿಗೆ ಕಳುಹಿಸಿರುವ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.ಒತ್ತೆಯಾಳುಗಳ ಬಿಡುಗಡೆಗೆ ನಕ್ಸಲರು 13 ಅಂಶಗಳ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.ನಕ್ಸಲ್ ನಿಗ್ರಹ ಕಾರ್ಯಾಚರಣೆ ಸ್ಥಗಿತಗೊಳಿಸುವುದು, ಮಾವೋವಾದಿಗಳ ಹೆಸರಿನಲ್ಲಿ ಬಂಧಿತರಾಗಿರುವ ಬುಡಕಟ್ಟು ಜನರ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ನಕ್ಸಲರು ಮುಂದಿಟ್ಟಿದ್ದಾರೆ.ಕೆಲವು ಪ್ರವಾಸ ನಿರ್ವಾಹಕರೊಂದಿಗೆ ಮಾರ್ಚ್ 12ರಂದು ಇಟಲಿಯ  ಪ್ರವಾಸಿಗರು ಪುರಿಯಿಂದ ಕಂದಮಲ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳ ದಾರಿಂಗಿಬದಿಗೆ ಬಂದಿದ್ದರು. ಈ ಪ್ರದೇಶದಲ್ಲಿರುವ ನಕ್ಸಲೀಯರ ಸಮಸ್ಯೆಯ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಜೆ.ಎನ್. ಪಂಕಜ್ ಹೇಳಿದ್ದಾರೆ.ಈ ಮಧ್ಯೆ, ಬೇಡಿಕೆಗಳ ಈಡೇರಿಕೆಗೆ ಯಾವುದೇ ಗಡುವು ವಿಧಿಸದಂತೆ ಕಳೆದ ವರ್ಷ ಮಲ್ಕಂಗಿರಿ ಜಿಲ್ಲಾಧಿಕಾರಿ ವೀನೆಲ್ ಕೃಷ್ಣ ಅವರನ್ನು ಅಪಹರಿಸಿದ್ದ ಸಂದರ್ಭದಲ್ಲಿ ಸರ್ಕಾರ ಮತ್ತು ಮಾವೋವಾದಿಗಳ ನಡುವೆ ಸಂಧಾನ ನಡೆಸಿದ್ದ ಸಂಧಾನಕಾರರಲ್ಲಿ ಒಬ್ಬರಾಗಿರುವ ಜನ ಅಧಿಕಾರ್ ಮಂಚ್‌ನ ಸಂಚಾಲಕ ದಂಡಪಾಣಿ ಮೊಹಾಂತಿ ಅವರು ನಕ್ಸಲರಿಗೆ ಮನವಿ ಮಾಡಿದ್ದಾರೆ.

ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸುವಂತೆ ಮೊಹಾಂತಿ  ಅವರು  ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಮನವಿ ಮಾಡಿದ್ದಾರೆ.

 

ನಿರಂತರ ಸಂಪರ್ಕ

ಇಟಲಿಯ ಇಬ್ಬರು ಪ್ರವಾಸಿಗರ ಅಪಹರಣದ ಹಿನ್ನೆಲೆಯಲ್ಲಿ  ಭಾರತವು ಇಟಲಿ ಸರ್ಕಾರದ ಜತೆಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಶನಿವಾರ ರಾತ್ರಿ ನಡೆದ ಅಪಹರಣ ಪ್ರಕರಣದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಟಲಿಯನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.