ಭಾನುವಾರ, ಆಗಸ್ಟ್ 25, 2019
20 °C

ಇಟಲಿ ಮಾಜಿ ಪ್ರಧಾನಿಗೆ ಜೈಲು ಶಿಕ್ಷೆ

Published:
Updated:

ರೋಮ್ (ಎಎಫ್‌ಪಿ): ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬರ್ಲುಸ್ಕೊನಿ ಅವರಿಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನಾಲ್ಕು ವರ್ಷಗಳ ಕಾರಾಗೃಹವಾಸ ಶಿಕ್ಷೆಯ ಪೈಕಿ ಮೂರು ವರ್ಷಗಳ ಅವಧಿಗೆ ಕ್ಷಮಾದಾನ ಸಿಗಲಿದೆ. 76 ವರ್ಷ ವಯಸ್ಸಿನ ಸಿಲ್ವಿಯೊ, ಮೂರು ಅವಧಿಗೆ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಶಿಕ್ಷೆ ಸುದ್ದಿ ಗೊತ್ತಾಗುತ್ತಲೇ ಸಿಲ್ವಿಯೊ ವಿರೋಧಿ ಪ್ರತಿಭಟನಾಕಾರರು ನ್ಯಾಯಾಲಯದ ಹೊರಗೆ ಜಮಾಯಿಸಿದರು. ಭಿತ್ತಿಪತ್ರ, ಫಲಕ ಹಿಡಿದುಕೊಂಡಿದ್ದ ಕಾರ್ಯಕರ್ತರು, `ತಪ್ಪು ಎಸಗಿದವರು ಜೈಲುಶಿಕ್ಷೆಗೆ ಗುರಿಯಾಗಲೇಬೇಕು' ಎಂದು ಘೋಷಣೆ ಹಾಕಿದರು.ಇದಕ್ಕೆ ಪ್ರತಿಯಾಗಿ ಸಿಲ್ವಿಯೊ ಬೆಂಬಲಿಗರು ರೋಮ್‌ನ ಅವರ ನಿವಾಸದ ಹೊರಗೆ ಸೇರಿ, ಘೋಷಣೆ ಕೂಗಿದರು.

ಸುದ್ದಿ ತಿಳಿದು ಸಿಲ್ವಿಯೊ ಕುಟುಂಬ ವರ್ಗ, ಸ್ನೇಹಿತರು, ಹಿತೈಷಿಗಳು, ವಕೀಲರು ಅವರ ನಿವಾಸಕ್ಕೆ ಧಾವಿಸಿದರು. ತಮ್ಮ ಪೀಪಲ್ ಆಫ್ ಫ್ರೀಡಮ್ ಪಕ್ಷದ ಪ್ರಮುಖರ ಜತೆ ಸಿಲ್ವಿಯೊ ದಿನವಿಡೀ ಚರ್ಚೆ ನಡೆಸಿ, ಮುಂದಿನ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸಿದರು.ಸಿಲ್ವಿಯೋ ವಿರೋಧಿ ಪ್ರತಿಭಟನೆ ನೇತೃತ್ವ ವಹಿಸಿರುವ ಫೈವ್ ಸ್ಟಾರ್ ಮೂವ್‌ಮೆಂಟ್ ಮುಖಂಡ `ಸಿಲ್ವಿಯೊ ಈಗ ಸತ್ತ ಹಾಗೆ. ಅವರಿಗೆ ಈಗ ಜೈಲುಶಿಕ್ಷೆ ವಿಧಿಸಿರುವುದು 1989ರ ಬರ್ಲಿನ್ ಗೋಡೆ ಪತನದಂತೆ' ಎಂದು ಪ್ರತಿಕ್ರಿಯಿಸಿದ್ದಾರೆ.ಗೃಹಬಂಧನ- ಚುನಾವಣೆಗೆ ನಿಷೇಧ: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಂದಿನ ಆರು ವರ್ಷ ಚುನಾವಣೆಯಲ್ಲಿ ಅವರು ಸ್ಪರ್ಧಿಸುವಂತಿಲ್ಲ. ಜತೆಗೆ ಈಗ ಗೃಹಬಂಧನಕ್ಕೆ ಒಳಗಾಗಬೇಕಿದೆ. ಇದನ್ನು ತಪ್ಪಿಸಿಕೊಳ್ಳಬೇಕೆಂದರೆ ಸಿಲ್ವಿಯೊ ಅವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಈ ಬಗ್ಗೆ ನ್ಯಾಯಾಲಯಕ್ಕೆ ನಿರ್ದಿಷ್ಟವಾಗಿ ಮನವಿ ಸಲ್ಲಿಸಬೇಕು. ಅದರೆ ಈಗ ಬೇಸಿಗೆ ರಜಾ ಘೋಷಿಸಿರುವುದರಿಂದ, ಅಕ್ಟೋಬರ್ 16ರ ನಂತರವೇ ಅರ್ಜಿ ಸಲ್ಲಿಸಬೇಕಾಗುತ್ತದೆ.ಸಮುದಾಯ ಸೇವೆ ಸಲ್ಲಿಸಲು ಮುಂದಾದರೆ, ಸಿಲ್ವಿಯೋ ಅವರು ವೃದ್ಧಾಶ್ರಮದಲ್ಲಿ ಕೆಲಸ ಮಾಡುವುದು, ಸೂಪರ್ ಮಾರ್ಕೆಟ್‌ನಲ್ಲಿ ಟ್ರೇ ಜೋಡಿಸುವುದು ಅಥವಾ ಗೋಡೆಬರಹ ಸ್ವಚ್ಛಗೊಳಿಸುವಂಥ ಕೆಲಸ ನಿರ್ವಹಿಸಬೇಕಾಗುತ್ತದೆ. ತಾವು ಸಾಮಾನ್ಯ ಕ್ರಿಮಿನಲ್ ಅಪರಾಧಿಗಳಂತೆ ಸಮುದಾಯ ಸೇವೆ ಮಾಡಬಯಸುವುದಿಲ್ಲ ಎಂದು ಸಿಲ್ವಿಯೊ ಈಗಾಗಲೇ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಅವರು ಗೃಹ ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತವಾಗಿದೆ.ಶಿಕ್ಷೆಗೆ ಗುರಿಯಾಗಿರುವುದರಿಂದ, 2012ರಲ್ಲಿ ಅಂಗೀಕರಿಸಿದ ಕಾನೂನಿನ ಪ್ರಕಾರ ಸಿಲ್ವಿಯೋ ಅವರು ಮುಂದಿನ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

Post Comments (+)