ಗುರುವಾರ , ಆಗಸ್ಟ್ 22, 2019
26 °C
ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರಿಂದ ಜಿಲ್ಲಾಧಿಕಾರಿಗೆ ಮನವಿ

ಇಟ್ಟಿಗೆ ಭಟ್ಟಿ ಮಾಫಿಯಾದಿಂದ ಕೆರೆಗಳನ್ನು ರಕ್ಷಿಸಿ

Published:
Updated:

ಚಿತ್ರದುರ್ಗ: ಇಟ್ಟಿಗೆ ಭಟ್ಟಿ ಮಾಫಿಯಾದಿಂದ ನಾಶವಾಗುತ್ತಿರುವ ಕೆರೆ ಕಟ್ಟೆಗಳನ್ನು ರಕ್ಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಂತರ ಮಾತನಾಡಿದ ಪ್ರತಿಭಟನಾಕಾರರು, ಒತ್ತುವರಿ ಯಂತಹ ಅಕ್ರಮ ಚಟುವಟಿಕೆಗಳಿಂದಾಗಿ ಕೆರೆ ಅಂಗಳಗಳೇ ಕಿರಿದಾಗುತ್ತಿವೆ. ನೀರು ನಿಲ್ಲುವ ಪ್ರಮಾಣವೂ ಕಡಿಮೆಯಾಗುತ್ತಿದೆ. ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಇಟ್ಟಿಗೆ ತಯಾರಕರು ಕೆರೆಯ ಅಂಗಳವನ್ನೇ ಅಕ್ರಮವಾಗಿ ಬಳಸುತ್ತಿದ್ದಾರೆ. ಮಾತ್ರವಲ್ಲ, ಅಗತ್ಯಕ್ಕಿಂತ ಹೆಚ್ಚು ಮಣ್ಣನ್ನು ಶೇಖರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.`ಮೊಳಕಾಲ್ಮುರು ತಾಲ್ಲೂಕು ಗುಂಡ್ಲೂರು ಕೆರೆಯ ಏರಿ ಮತ್ತು ಕೆರೆಯ ಕೋಡಿ ಸಮೀಪದಲ್ಲೇ ಇಟ್ಟಿಗೆ ಭಟ್ಟಿಯವರು ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಇದರಿಂದ ಏರಿ ಮತ್ತು ಕೋಡಿ ಶಿಥಿಲಗೊಂಡಿದೆ. ಈ ಕೆರೆಯಿಂದ ನೂರಾರು ಲೋಡ್ ಮಣ್ಣನ್ನು ತೆಗೆದು, ಇಟ್ಟಿಗೆ ಘಟಕದ ವ್ಯಾಪ್ತಿಯಲ್ಲಿ ಶೇಖರಿಸಲಾಗುತ್ತಿದೆ' ಎಂದು ಆರೋಪಿಸಿದರು. ಇಟ್ಟಿಗೆ ಭಟ್ಟಿ ಮಾಫಿಯಾದವರಿಂದ ಅಪಾಯದ ಅಂಚಿನಲ್ಲಿರುವ ಜಿಲ್ಲೆಯ ಅನೇಕ ಕೆರೆ, ಕಟ್ಟೆಗಳನ್ನು ರಕ್ಷಿಸುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.ರೈತರ ಹಕ್ಕೊತ್ತಾಯಗಳು

*ಕೆರೆ ಮಣ್ಣನ್ನು ಇಟ್ಟಿಗೆ ತಯಾರಿಕೆಗೆ ಬಳಸುವುದನ್ನು ಜಿಲ್ಲಾಧಿಕಾರಿಗಳು ಕೂಡಲೇ ನಿಷೇಧಿಸಬೇಕು.

*ಇಟ್ಟಿಗೆ ತಯಾರಿಕೆಗಾಗಿ ಶೇಖರಿಸಿಟ್ಟುಕೊಂಡಿರುವ ಮಣ್ಣನ್ನು ಜಿಲ್ಲಾಡಳಿತ ವಶ ಪಡಿಸಿಕೊಂಡು ರೈತರಿಗೆ ಹಂಚಿಕೆ ಮಾಡಬೇಕು.

*ಅಕ್ರಮವಾಗಿ ಕೆರೆ ಮಣ್ಣು ಶೇಖರಿಸಿಕೊಟ್ಟುಕೊಂಡಿರುವ ಎಲ್ಲ ಇಟ್ಟಿಗೆ ಭಟ್ಟಿ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಾಖಲಿಸಬೇಕು.

*ಇಟ್ಟಿಗೆ ಭಟ್ಟಿಯಿಂದ ಕೆರೆಗಳ ಮೇಲಾಗುತ್ತಿರುವ ಹಾನಿಯನ್ನು ಆಯಾ ಮಾಲೀಕರಿಂದಲೇ ತುಂಬಿಸಿಕೊಡಬೇಕು.

*ಭಟ್ಟಿಯ ಧೂಳು, ಹೊಗೆಯಿಂದ ರೈತರು ಬೆಳೆಗಳಿಗೆ ಹಾನಿಯಾಗಿದೆ ಅಂಥ ಪ್ರಕರಣಗಳನ್ನು ಗುರುತಿಸಿ ಪರಿಹಾರ ನೀಡಬೇಕು.

*ಇಟ್ಟಿಗೆ ಭಟ್ಟಿಯಿಂದ ಉಂಟಾಗುತ್ತಿದ್ದ ಪರಿಸರ ಮಾಲಿನ್ಯದ ವಿರುದ್ಧ ಹೋರಾಟ ಮಾಡಿದ ರೈತನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು.

*ಕಾನೂನು ಬಾಹಿರ ಇಟ್ಟಿಗೆ ಭಟ್ಟಿಗಳ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ರೈತರ ಜೀವ ಅಪಾಯದಲ್ಲಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಜ್ಯ ಉಪಾಧ್ಯಕ್ಷ ಬಾಗೇನಾಳ್ ಕೊಟ್ರಬಸಪ್ಪ, ಕನಕ ಶಿವಮೂರ್ತಿ, ಬೆಳಗಲ್ ಈಶ್ವರಯ್ಯಸ್ವಾಮಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನಯ್ಯ, ಮರ್ಲಹಳ್ಳಿ ರವಿಕುಮಾರ್, ಡಿ.ಚಂದ್ರ ಶೇಖರನಾಯ್ಕ, ಮಾರ್ಲಹಳ್ಳಿ ಓಬಳೇಶ್, ತಿಮ್ಮಪ್ಪನಹಳ್ಳಿ ರಾಜಣ್ಣ, ಶಿವನಕೆರೆ ಸಿದ್ದಬಸಪ್ಪ, ಶಿವಣ್ಣ, ಶಿವನಕೆರೆ ಪ್ರಕಾಶ್, ಡಿ.ಬಿ.ಸಣ್ಣಪ್ಪ, ಕನಕಯ್ಯನಹಟ್ಟಿ ಚಂದ್ರಣ್ಣ, ಗೂಂಡ್ಲೂರು ಜೆ.ಟಿ.ಸ್ವಾಮಿ, ಎಂ.ಗಂಗಾಧರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Post Comments (+)