ಇಡೀ ಜಗತ್ತೇ ಕಣ್ಣ ಮುಂದೆ..!

7

ಇಡೀ ಜಗತ್ತೇ ಕಣ್ಣ ಮುಂದೆ..!

Published:
Updated:
ಇಡೀ ಜಗತ್ತೇ ಕಣ್ಣ ಮುಂದೆ..!

ಧರಿಸಬಹುದಾದ ಗಣಕಯಂತ್ರಗಳಿಗೆ (ವೇರೇಬಲ್ ಕಂಪ್ಯೂಟಿಂಗ್) ಹೊಸ ಭಾಷ್ಯ ಬರೆಯಲು ಗೂಗಲ್ ಮುಂದಾಗಿದೆ. ಹೀಗೊಂದು ಸುದ್ದಿ ಇತ್ತೀಚೆಗೆ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ, ಗೂಗಲ್ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಈ ಸುದ್ದಿ ಮಾತ್ರ ಸ್ವಾರಸ್ಯಕರವಾಗಿದೆ. ಈಗಿನ ಸ್ಮಾರ್ಟ್‌ಫೋನ್‌ಗಳಿಗೆ ಪರ್ಯಾಯವಾಗಬಲ್ಲ, ಸಾಮಾನ್ಯ ಕನ್ನಡಕಗಳಂತೆ ಕಾಣುವ, ಅತ್ಯಾಧುನಿಕ ಕನ್ನಡಕಗಳನ್ನು ಅಭಿವೃದ್ಧಿ ಪಡಿಸುವ  ನಿಟ್ಟಿನಲ್ಲಿ ಗೂಗಲ್ ಯೋಜನೆ ರೂಪಿಸಿದೆ.  ಅಮೆರಿಕದ ಮಾಧ್ಯಮಗಳು ಗೂಗಲ್‌ನ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಈಗಾಗಲೇ ಸಾಕಷ್ಟು ಬರೆದಿವೆ.ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕಂಪೆನಿಯ `ಗೂಗಲ್‌ಎಕ್ಸ್~ ಪ್ರಯೋಗಾಯದಲ್ಲಿ ಅತ್ಯಾಧುನಿಕ ಸ್ಮಾರ್ಟ್ ಕನ್ನಡಕಗಳು ರೂಪು ತಳೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವರ್ಷದ ಅಂತ್ಯದ ವೇಳೆಗೆ ಇವು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎನ್ನುತ್ತವೆ ವಿವಿಧ ಮೂಲಗಳು.ಕನ್ನಡಕದ ಮುಂದೆ ಜಗತ್ತು..

ಗೂಗಲ್ ನಿರ್ಮಿಸಲು ಹೊರಟಿರುವ ಕನ್ನಡಕ ಸಾಮಾನ್ಯ ಕನ್ನಡಕಗಳಂತೆ ಕಂಡರೂ ಹಲವು ವೈಶಿಷ್ಠ್ಯಗಳನ್ನು ಒಳಗೊಂಡಿದೆ. ಪುಟ್ಟ ಪರದೆ, ಕ್ಯಾಮೆರಾ ಜತೆಗೆ  `ಜಿಪಿಎಸ್~ ವ್ಯವಸ್ಥೆಯೂ ಇದರಲ್ಲಿದೆ. ಹೆಚ್ಚವರಿ ಸೌಲಭ್ಯವಾಗಿ  ಸೆನ್ಸರ್‌ಗಳನ್ನೂ ಅಳವಡಿಸಲಾಗಿದೆಯಂತೆ.

 

ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶದಿಂದ ಕಾರ್ಯನಿರ್ವಹಿಸುವ ಈ ಕನ್ನಡಕ, ಈಗಿನ ಸ್ಮಾರ್ಟ್‌ಫೋನ್‌ಗಳಂತೇ ಕಾರ್ಯನಿರ್ವಹಿಸಲಿದೆ ಎನ್ನುವುದು ಸುದ್ದಿ. ಮುಂದೊಂದು ದಿನ ಇವು ಸ್ಮಾರ್ಟ್‌ಫೋನ್‌ಗಳಿಗೇ ಸ್ಪರ್ಧೆ ಒಡ್ಡಲಿದೆ ಎನ್ನುವುದು ವದಂತಿ.

ಸಾಮಾನ್ಯ ಕನ್ನಡಕಗಳಲ್ಲಿ ಗಾಜುಗಳು ಇರುವ ಜಾಗದಲ್ಲಿ ಗೂಗಲ್‌ನ ಕನ್ನಡಕದಲ್ಲಿ ಕಂಪ್ಯೂಟರ್ ಪರದೆ ಇರಲಿದೆ.ಬಳಕೆದಾರ ತನ್ನ ಕಣ್ಣೆದುರಿಗಿನ ದೃಶ್ಯಗಳನ್ನು ಕನ್ನಡಕದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾದ ಮೂಲಕ ನೋಡಬಹುದು. `ಜಿಪಿಎಸ್~ ವ್ಯವಸ್ಥೆ ಅಳವಡಿಸಿರುವುದರಿಂದ ಬಳಕೆದಾರರು ತಾವು ಇರುವ ಸ್ಥಳದ ಬಗ್ಗೆ,  ಸುತ್ತ ಮುತ್ತಲ ಪ್ರದೇಶಗಳ ಕುರಿತ ಮಾಹಿತಿಗಳನ್ನು,  ತಮ್ಮ ಸ್ನೇಹಿತರು ಇರುವ ಸ್ಥಳದ ಬಗೆಗಿನ ಮಾಹಿತಿಗಳನ್ನು ಕನ್ನಡಕದ ಪರದೆಯಲ್ಲಿ ನೇರವಾಗಿ ವೀಕ್ಷಿಸಬಹುದು.ಈ ಅತ್ಯಾಧುನಿಕ ಉಪಕರಣದಲ್ಲಿ ಗೂಗಲ್, ತನ್ನ ಇತರ ಸೇವೆಗಳಾದ ಗೂಗಲ್ ಮ್ಯಾಪ್ (ಹತ್ತಿರದ ಪ್ರದೇಶಗಳನ್ನು ಪತ್ತೆಹಚ್ಚಲು ಬಳಸುವ ನಕ್ಷೆ), ಗೂಗಲ್ ಲ್ಯಾಟಿಟ್ಯೂಡ್ (ಪ್ರದೇಶಗಳ ಕುರಿತ ಮಾಹಿತಿಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಗೂಗಲ್ ನೀಡುವ ಸೇವೆ), ಗೋಗಲ್ಸ್‌ಗಳನ್ನೂ (ಚಿತ್ರಗಳನ್ನು  ಹುಡುಕಲು ಬಳಸುವ ಸೇವೆ) ಒದಗಿಸಲಿದೆ ಎಂದು ಹೇಳುತ್ತವೆ ಮೂಲಗಳು.ಒಬ್ಬ ವ್ಯಕ್ತಿ ನಿರ್ದಿಷ್ಟ ಪ್ರದೇಶದ ಬಗ್ಗೆ ಮಾಹಿತಿಗಳನ್ನು ಹುಡುಕುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಗೂಗಲ್ ಒದಗಿಸುವ ಸೇವೆಗಳಿಂದ ಆ ಪ್ರದೇಶ ಕುರಿತ ಇತಿಹಾಸದ ವಿವರಗಳು ಮತ್ತು ಇತರರು ನೀಡಿರುವ ಪ್ರತಿಕ್ರಿಯೆಗಳನ್ನು ಕಣ್ಣಂಚಿನಲ್ಲೇ ನೇರವಾಗಿ ಓದಬಹುದು.

ಈ ಕನ್ನಡಕಗಳಿಗೆ `3ಜಿ~ ಇಲ್ಲವೇ `4ಜಿ~ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ಪ್ರಸ್ತಾವವು ಗೂಗಲ್ ಮುಂದಿದೆ.ಈಗಿನ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ದರದಲ್ಲೇ ಅಂದರೆ 200ನಿಂದ-500 ಡಾಲರ್‌ಗೆ (ಸುಮಾರು 10,000-25,000 ರೂಪಾಯಿ) ಈ ಕನ್ನಡಕಗಳೂ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.ಇಂಟರ್‌ನೆಟ್‌ನ ಆರಂಭದ ದಿನಗಳಲ್ಲಿ `ಇಡೀ ಜಗತ್ತೇ ನಮ್ಮ ಮುಂದೆ~ ಎಂಬ ಮಾತು ಸಾರ್ವತ್ರಿಕವಾಗಿ ಬಳಕೆಯಲ್ಲಿತ್ತು. ಗೂಗಲ್‌ನ ಸ್ಮಾರ್ಟ್ ಕನ್ನಡಕ ಬಂದರೆ, ಈ ಮಾತನ್ನು ಸ್ವಲ್ಪ ಬದಲಿಸಿ `ಇಡೀ ಜಗತ್ತೇ ನಮ್ಮ ಕಣ್ಣ ಮುಂದೆ~ ಎನ್ನಬಹುದು. ಆದರೆ, ಇದಕ್ಕಾಗಿ ಇನ್ನಷ್ಟು ದಿನಗಳು ಕಾಯಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry