ಗುರುವಾರ , ಅಕ್ಟೋಬರ್ 24, 2019
21 °C

ಇಡುಕ್ಕಿ ಕಹಿ ನೆನಪಲ್ಲಿ ಕಲ್ಲೂರು ಜನತೆ...

Published:
Updated:

ಹುಬ್ಬಳ್ಳಿ: `ಕರುಳಾಗಿನ ಕುಡೀನ ಇಲ್ಲ. ದೇವ್ರ ಹತ್ರ ಹೋದ ಮಗಾ ಮತ್ತ ಬರಂಗಿಲ್ಲ. ಯಾ ದೇವ್ರ ಎಷ್ಟ್ ಪೂಜೆ ಮಾಡಿದ್ರೇನ್ರಿ. ಕರ‌್ಕಂಡು ಹೋದ ದ್ಯಾವ್ರಿಗೆ ತನ್ನ ಮಕ್ಕಳನ್ನ ಸರಿಯಾಗಿ ಕಳ್ಸಬೇಕು ಅನ್ನೋದು ಗೊತ್ತಾ ಗಂಗಿಲ್ಲೇನ್ರಿ. ಮಗ ಇಲ್ಲದ ಏನ್ ಭವಿಸ್ಯಾ ಕಟ್ಟಾದೈತ್ರಿ. ಹರ‌್ಕಿ ಹೊತ್ತ ಮಗನ್ನ ದೇವ್ರ ಕಿತ್ಕೊಂಡಾನ.. ಇನ್ಯಾರ‌್ನ ಬಿಡ ತಾನ್ರಿ. ಕರುಣಾ ಇಲ್ಲದ ದೇವ್ರಿಗೆ ಯಾಕ ಬೇಕ್ರಿ ಇಂಥ ಕೆಟ್ಟ ಬುದ್ಧಿ. ಇದ್ದ ಒಬ್ಬ ಮಗನ್ನ ಕೊಟ್ರ ಸಾಕ್ರಿ... ನನ್ನಪ್ಪ....~ವರ್ಷದ ಹಿಂದೆ ಅಯ್ಯಪ್ಪ ಸ್ವಾಮಿ ವ್ರತಧಾರಿಯಾಗಿ ಮಣಿಕಂಠನ ಸನ್ನಿ ಧಾನಕ್ಕೆ ಹೋಗಿ, ಕಾಲ್ತುಳಿತದ ಅವ ಘಡದಲ್ಲಿ ಸ್ವಾಮಿಯ ಪಾದ ಸೇರಿದ ಧಾರವಾಡ ತಾಲ್ಲೂಕಿನ ಕಲ್ಲೂರು ಗ್ರಾಮದ ಮಂಜುನಾಥ ಕಡೇದ (18) ಎಂಬ ಯುವಕನ ತಾಯಿ ಫಕ್ಕೀರವ್ವನ ಮಾತುಗಳಿವು.ಧಾರೆಯಾಗಿ ಹರಿಯುತ್ತಿದ್ದ ಕಣ್ಣೀರು, ಸೆರಗಿನಿಂದ ಒರೆಸಿ ಕೊಂಡಷ್ಟೂ ಒತ್ತರಿಸಿ ಬರುತ್ತಿತ್ತು. ನೋವು, ಹತಾಶೆ, ಬದುಕಿನ ಉತ್ಸಾಹ ವನ್ನೇ ಕಳೆದುಕೊಂಡ ಜೀವ ಅದು. ಒಂದೇ ವರ್ಷದಲ್ಲಿ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ಕಾಣುತ್ತಿದ್ದ ಮುಖವೇ ದುಃಖಕ್ಕೆ ಸಾಕ್ಷಿಯಾಗಿತ್ತು.`ಹತ್ತ ವರ್ಷದ ಹಿಂದ ಮಗನ್ನ, ನನ್ನ ಬಿಟ್ಟು ಹೋದ ಗಂಡ ಇನ್ನೂ ಬಂದಿಲ್ಲ. ಅಯ್ಯಪ್ಯಸ್ವಾಮಿ ಹತ್ರ ಹೋದ ಮಗ ಇನ್ನ ಬರಂಗಿಲ್ಲ. ಯಾವ ಸರ್ಕಾರ ಪರಿ ಹಾರ ಅಂತಾ ಎಷ್ಟು ರೊಕ್ಕ ಕೊಟ್ರೂ ಹೋದ ಜೀವ ಬರತತೇನ್ರಿ. ಮಗನ ಇಲ್ದ ಜೀವನ ಇಲ್ಲ. ಮನಿಗೆ ತೊಲಿ ಭಾರ ಹೊತ್ತಿದ್ದ ತಮ್ಮ ಮಾಬಳೇಶ (ಮಹಾಬಳೇಶ್ವರ ಗುಡಕಟ್ಟಿ)ನೂ ಆಗ ಹೋದ. ಅದ್ಕ ವರ್ಷದಿಂದ ಅವನ್ನ ಪೂಜಾನ ಮಾಡಿಲ್ರಿ... ಮಗ, ತಮ್ಮನ ಹತ್ರ ನನ್ನೂ ಕರಕೋಳಪ್ಪ ಅಂತಾ ದೇವ್ರ ಕೇಳಾಕತ್ತೇನ್ರಿ... ಆದ್ರ....~ ಫಕ್ಕೀರವ್ವನಿಗೆ ಮುಂದೆ ಮಾತು ಬಾರದೆ ಮೌನ ವಹಿಸಿ, ಮುಗಿಲು ನೋಡುತ್ತ ಕುಳಿತರು.ಇದು ಫಕ್ಕೀರವ್ವಳ ಗೋಳು ಮಾತ್ರ ವಲ್ಲ ಗ್ರಾಮದ ಇನ್ನೂ ಮೂರು ಕುಟುಂಬಗಳು ತಮ್ಮ ಹೆತ್ತ ಕರುಳು ಕಳೆದುಕೊಂಡು ನರಳುತ್ತಿವೆ. ವಂಶ ಬೆಳಗಬೇಕಿದ್ದ ಏಕೈಕ ಕುಡಿಗಳೇ ಇಲ್ಲದ ಜೀವನ ಇನ್ನೇಕೆ ಎಂಬ ಹತಾಶೆ ಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಗಂಡ, ಮನೆ, ಮಕ್ಕಳೊಂದಿಗೆ ಬಾಳಿ ಬದುಕಿನ ಭವಿಷ್ಯ ರೂಪಿಸುವ ಕನಸು ಕಂಡಿದ್ದ ತಾಯಂದಿರು ಎಲ್ಲ ಆಸೆಗಳನ್ನು ಬಿಟ್ಟು ಧುತ್ತೆಂದು ಬಂದ ಸಾವಿಗಾಗಿ ನಿತ್ಯ ದೇವರನ್ನು ಶಪಿಸುತ್ತಿದ್ದಾರೆ.`ವರ ಕೊಟ್ಟು ಕಷ್ಟ ದೂರ ಮಾಡೋದು ದೇವ್ರ ಕೆಲ್ಸ. ಆದ್ರ ದೇವ್ರಿಗೆ ಕುಡಿ ಕೊಟ್ಟು, ಕಸಕೊಳ್ಳೋದು ಕೆಲ್ಸಾ ಗೈತಿ. ವ್ರತ ಮಾಡಿದೋರಿಗೆ ಒಳ್ಳೇದ ಬಯಸಲ್ಲ ಅನ್ನೋ ದೇವ್ರನ್ನ ಯಾಕ ಪೂಜೆ ಮಾಡ್ಬೇಕು? ಕರುಣೆ, ಪ್ರೀತಿ ಇಲ್ಲದ ದೇವ್ರ ದೇವ್ರ ಅಲ್ಲ; ಅಂಥವ್ನ ಪೂಜೆ ಮಾಡಿದ್ರ ಸಿಗೋದೇನೈತಿ. ದೇವ್ರ ನಮ್ಮನ್ನ ಸಾಯೋವರ್ಗೂ ನರಳಾಂಗ ಮಾಡ್ದ... ಇನ್ನ ನಾವೂ ನಮ್ಮ ದಾರಿ ಕಾಯ್ಕೋಂತಾ ಕೂಡೋದು... ನೋಡೋಣ ಯಾವಾಗ ಕರ‌್ಕೋ ತಾನ....~ ಎನ್ನುವುದು ಮೃತ ಶಿವ ಲಿಂಗಯ್ಯ ಮುರಗೋಡಮಠ ಅವರ ತಾಯಿ ರತ್ನವ್ವ ಅವರ ಅಸಮಾಧಾನದ ನುಡಿ.ನಾಲ್ವರ ಸಾವು: ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಪುಲ್‌ಮೇಡುವಿನ ಅರಣ್ಯ ಪ್ರದೇಶದಲ್ಲಿ 2011ರ ಜನವರಿ 15ರಂದು ಮಕರ ಜ್ಯೋತಿ ದರ್ಶನಕ್ಕೆ ತೆರಳಿದ್ದ ಭಕ್ತರ ಮೇಲೆ ಜೀಪ್ ಹಾಯ್ದಿತ್ತು. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತಕ್ಕೆ ಒಟ್ಟು 102 ಜನ ಭಕ್ತರು ಮೃತಪಟ್ಟಿದ್ದರು. ಅವರ ಪೈಕಿ ರಾಜ್ಯದ 33 ಜನರಿದ್ದರು. ಅವರಲ್ಲಿ ಧಾರವಾಡ ತಾಲ್ಲೂಕಿನ ಕಲ್ಲೂರಿನ ನಾಲ್ವರು ಸೇರಿದ್ದಾರೆ.ಕಲ್ಲೂರಿನ ಮಂಜುನಾಥ ಕಡೇದ (18), ಮಹಾಬಳೇಶ್ವರ ನಿಂಗಪ್ಪ ಗುಡಕಟ್ಟಿ (22), ಶಿವಲಿಂಗಯ್ಯ ಮುರ ಗೋಡಮಠ (14) ಮತ್ತು ಮಂಜು ನಾಥ ಘಂಟಿ (12) ಕಾಲ್ತುಳಿತದಲ್ಲಿ ಜೀವ ಕಳೆದುಕೊಂಡಿದ್ದರು.ಪರಿಹಾರ ಸಿಕ್ಕಿಲ್ಲ: ಶಬರಿಮಲೆ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ 2 ಲಕ್ಷ ರೂಪಾಯಿ ಪರಿ ಹಾರ ಘೋಷಿಸಿತ್ತು. ಕೇರಳ ರಾಜ್ಯ 7 ಲಕ್ಷ ಮತ್ತು ಕೇಂದ್ರ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರದ ಘೋಷಣೆ ಮಾಡಿದ್ದವು. ರಾಜ್ಯ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಪರಿಹಾರ ನೀಡಿವೆ. ಕೇರಳ ಸರ್ಕಾರದಿಂದ ಇನ್ನೂ ಪರಿಹಾರ ಪೂರ್ತಿ ಸಿಕ್ಕಿಲ್ಲ. ಮಂಜುನಾಥ ಘಂಟಿ ಮತ್ತು ಮಹಾಬಳೇಶ್ವರ ಗುಡಿಕಟ್ಟಿ ಕುಟುಂಬಕ್ಕೆ ಇನ್ನೂ ತಲಾ 4 ಲಕ್ಷ ರೂಪಾಯಿ ಹಾಗೂ ಶಿವಲಿಂಗಯ್ಯ ಮತ್ತು ಮಂಜುನಾಥ ಕಡೇದ ಅವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರದ ಬಾಕಿ ಬರಬೇಕಿದೆ. ಇದಕ್ಕಾಗಿ ಕೇರಳ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ ಎಂದು ಗ್ರಾಮದ ಮುಖಂಡ ಹಾಗೂ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪೂಜಾರ ತಿಳಿಸಿದರು.`ವ್ರತಾ ಇಲ್ರಿ~: `ಹ್ವಾದ ವರ್ಸದ ಘಟನೆ ಬಳಿಕ ಈ ವರ್ಷ ವ್ರತಾ ಮಾಡಂಗಿಲ್ರಿ. ಏಳೆಂಟು ಹಿರಿ ಸ್ವಾಮಿ ಗಳು ವ್ರತಾ ಬಿಡಬಾರ‌್ದೂ ಅಂದಿದಕ್ಕ ಮಾಲಿ ಹಾಕ್ಯಾರ. ಅವ್ರೆ ಶಬರಿಮಲೆ ಹೋಗಂಗಿಲ್ಲ. ಇಲ್ಲೆ ಪಂಪಾಕ್ಷೇತ್ರಕ್ಕೆ ಹೋಗಿ ಪೂಜೆ ಮಾಡಿ ಬರ‌್ತಾರ‌್ರಿ~ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ದಂಡಿನ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)