ಇಡ್ಲಿ- ಸಾಂಬಾರ್ ತಿಂದರೆ ಹುಷಾರ್!

7
ನೀರು ಮಿತ ಬಳಕೆ: ಶಾಲಾ ಆಡಳಿತ ಮಂಡಳಿಗಳ ಒತ್ತಡ

ಇಡ್ಲಿ- ಸಾಂಬಾರ್ ತಿಂದರೆ ಹುಷಾರ್!

Published:
Updated:

ಬೆಂಗಳೂರು: ಉತ್ತಮ ಆರೋಗ್ಯ ದೃಷ್ಟಿಯಿಂದ ಮನುಷ್ಯ ಹೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಸದಾ ನೀಡುವ ಸಲಹೆ. ನಗರದ ಕೆಲವು ನರ್ಸರಿ, ಎಲ್‌ಕೆಜಿ, ಯುಕೆಜಿ ಶಾಲೆಗಳು ಇದಕ್ಕೆ ತದ್ವಿರುದ್ಧವಾದ ಧೋರಣೆಯನ್ನು ತಳೆದಿವೆ. ಚಿಣ್ಣರು ಜಾಸ್ತಿ ನೀರು ಕುಡಿದಷ್ಟು ರಗಳೆ ಜಾಸ್ತಿ ಎಂಬುದು ಆಡಳಿತ ಮಂಡಳಿಗಳ ಸಮಜಾಯಿಷಿ.ಪ್ರಮುಖವಾಗಿ ಬಸವನಗುಡಿ, ಶ್ರೀನಗರ ಸೇರಿದಂತೆ ನಗರದ ಕೆಲವು ಶಾಲೆಗಳಲ್ಲಿ ನೀರು ಜಾಸ್ತಿ ಕುಡಿಯವುದರ ಮೇಲೆ ವಿಧಿಸಿರುವ ನಿರ್ಬಂಧ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸಂಬಂಧದ ದೂರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮೆಟ್ಟಿಲೇರಿದೆ.ಶಾಲೆಗಳಲ್ಲಿ ನೈರ್ಮಲ್ಯ ಹಾಗೂ ಶಿಸ್ತು ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಶಾಲೆಗಳ ವಾದ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬುದು ಪೋಷಕರ ದೂರು. ಶಾಲೆಗಳ ಕ್ರಮವನ್ನು ವಿರೋಧಿಸಿ ಕೆಲವು ಪೋಷಕರು ಮಕ್ಕಳ ಸಹಾಯವಾಣಿ (1098) ಹಾಗೂ ಚೈಲ್ಡ್ ರೈಟ್ ಟ್ರಸ್ಟ್‌ಗೆ ಮಾಹಿತಿ ಒದಗಿಸಿದ್ದಾರೆ. ನಗರದ ವೈದ್ಯರೊಬ್ಬರು ಸಹ ಮಕ್ಕಳ ಸಹಾಯವಾಣಿಯ ಗಮನವನ್ನೂ ಸೆಳೆದಿದ್ದಾರೆ. ಆದರೆ, `ಈ ಸಂಬಂಧ ಪೋಷಕರು ದೂರು ಸಲ್ಲಿಸಲು ಮುಂದೆ ಬರುತ್ತಿಲ್ಲ. ದೂರು ನೀಡಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತದೆ ಎಂಬುದು ಪೋಷಕರ ಆತಂಕ' ಎಂದು ಚೈಲ್ಡ್ ರೈಟ್ ಟ್ರಸ್ಟಿನ ನಾಗಸಿಂಹ ಜಿ.ರಾವ್ ಹೇಳುತ್ತಾರೆ.`ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳ ಊಟದ ಡಬ್ಬಿಯಲ್ಲಿ ಚಪಾತಿ, ದೋಸೆ, ಇಡ್ಲಿ ಮುಂತಾದ ತಿಂಡಿಗಳನ್ನು ಶಾಲೆಗೆ ತರುವುದನ್ನು ನಿಷೇಧಿಸಲಾಗಿದೆ. ಇದರ ಬದಲು ಪೋಷಕರು ಮಕ್ಕಳಿಗೆ ಸೇಬು, ಮೂಸಂಬಿ, ದಾಳಿಂಬೆಯಂತಹ ಹಣ್ಣುಗಳನ್ನು ಕೊಟ್ಟು ಕಳುಹಿಸಬೇಕು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಣ್ಣುಗಳನ್ನು ತಿನ್ನುವುದು ಉತ್ತಮ. ಆದರೆ, ಆರ್ಥಿಕವಾಗಿ ಹಿಂದುಳಿದವರಿಗೆ ಹೊರೆಯಾಗುತ್ತದೆ' ಎಂದು ಅವರು ಮಾಹಿತಿ ನೀಡಿದರು.`ಮಕ್ಕಳು ಕಡಿಮೆ ನೀರು ಕುಡಿಯುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ. ಇಂತಹ ಎರಡು ಪ್ರಕರಣಗಳು ನನ್ನ ಬಳಿಗೆ ಬರುತ್ತಿವೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ಕುದಿಸಿದ ನೀರನ್ನು ಜಾಸ್ತಿ ಕುಡಿಯಿರಿ ಎಂದು ಎಲ್ಲ ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಶಾಲೆಗಳಲ್ಲಿ ಹೆಚ್ಚು ನೀರು ಬಳಸುವುದಕ್ಕೆ ಅಡ್ಡಿ ಉಂಟು ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ' ಎಂದು ವೈದ್ಯರೊಬ್ಬರು ತಿಳಿಸಿದರು.`ಇಡ್ಲಿಯೊಂದಿಗೆ ಚಟ್ನಿ ಅಥವಾ ಸಾಂಬಾರ್ ಬಳಕೆಯನ್ನು ಕೆಲವು ಶಾಲೆಗಳಲ್ಲಿ ನಿಷೇಧಿಸಲಾಗಿದೆ. ಸಾಂಬಾರಿನ ಬದಲು ಜಾಮ್ ಬಳಸುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರಲಾಗುತ್ತಿದೆ. ಇದಲ್ಲದೆ ಮನೆಯಲ್ಲಿ ತಯಾರಿಸಿದ ತಿಂಡಿಗಳ ಬದಲು ಮಕ್ಕಳಿಗೆ ಬೇಕರಿ ತಿಂಡಿಗಳನ್ನು ನೀಡಿ ಎಂದು ಕೆಲವು ಶಾಲೆಗಳಲ್ಲಿ ಹೇಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬೇಕರಿ ಉತ್ಪನ್ನಗಳ ಸೇವನೆ ಉತ್ತಮ ಅಲ್ಲ. ಆದರೆ, ನೈರ್ಮಲ್ಯ ಹಾಗೂ ಶಿಸ್ತಿನ ಹೆಸರಿನಲ್ಲಿ ಆರೋಗ್ಯಕರ ಆಹಾರಗಳನ್ನು ನಿಷೇಧ ಹೇರುತ್ತಿರುವುದು ಸರಿಯಲ್ಲ' ಎಂದು ಅಭಿಪ್ರಾಯಪಟ್ಟರು.`ಪದೇ ಪದೇ ನೀರು ಕುಡಿಯುವುದರಿಂದ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಅನುಮತಿ ಕೇಳಿದರೆ ಇತರ ವಿದ್ಯಾರ್ಥಿಗಳು ಜತೆಯಲ್ಲೇ ಹೋಗುತ್ತಾರೆ. ಇದರಿಂದಾಗಿ ಪಾಠ ಮಾಡಲು ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನೀರಿನ ಅತಿ ಬಳಕೆಗೆ ನಿಯಂತ್ರಣ ಹೇರಿರುವ ಸಾಧ್ಯತೆ ಇದೆ' ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಿ.ಶಶಿಕುಮಾರ್ ಅಭಿಪ್ರಾಯಪಡುತ್ತಾರೆ.`ನರ್ಸರಿ, ಎಲ್‌ಕೆಜಿಯಲ್ಲಿ ಕಲಿಯುವ ಮಕ್ಕಳು ಬಳಸುವ ನೀರು ಮಿತವಾದುದು. ಅವರು ಲೀಟರ್‌ಗಟ್ಟಲೆ ನೀರು ಕುಡಿಯುವುದಿಲ್ಲ. ಕಡಿಮೆ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೂ ಅಲ್ಲ. ಶಾಲೆಗಳಲ್ಲಿ ಇದಕ್ಕೆ ನಿರ್ಬಂಧ ಹೇರುವುದು ವ' ಎಂದು ಅವರು ಸಲಹೆ ನೀಡುತ್ತಾರೆ.ಶಾಲೆಗಳ ಕ್ರಮಕ್ಕೆ ಕಡಿವಾಣ: ಒತ್ತಾಯ

ಭಾರತ ದೇಶವು ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಸಹಿ ಹಾಕಿ 21 ವರ್ಷಗಳೇ ಕಳೆದವು. ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ಒಂದೂವರೆ ವರ್ಷ ಕಳೆಯಿತು. ಆದರೆ, ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಕಡಿವಾಣ ಬಿದ್ದಿಲ್ಲ. ನಗರದ ಕೆಲವು ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿಗಳಲ್ಲಿ ಮಕ್ಕಳಿಗೆ ನೀರು ಕುಡಿಯಲು ಬಿಡುತ್ತಿಲ್ಲ ಎಂಬ ಬಗ್ಗೆ ಕೆಲವು ಪೋಷಕರು ಆರ್‌ಟಿಇ ಕಾರ್ಯಪಡೆ ಹಾಗೂ 1098 ಮಕ್ಕಳ ಸಹಾಯವಾಣಿ ಬಳಿ ಅಳಲು ತೋಡಿಕೊಂಡಿದ್ದಾರೆ. ಕರೆ ಮಾಡಿರುವ ಪೋಷಕರು ಶಾಲೆಗಳ ಹೆಸರನ್ನು, ಮಕ್ಕಳ ಹೆಸರನ್ನು, ತಮ್ಮ ಹೆಸರನ್ನು ಸಿದ್ಧರಿಲ್ಲ. ಹೆಸರು ಬಹಿರಂಗಪಡಿಸಿದರೆ ತಮಗೆ ತೊಂದರೆಯಾಗುತ್ತದೆ ಎಂಬ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಇಲಾಖೆಯ ಸಹಯೋಗದಿಂದ ಶಾಲೆಗಳಿಗೆ ಸುತ್ತೋಲೆ ಕಳುಹಿಸಬೇಕು. ನಗರದಲ್ಲಿ ಇದೇ 6 ಹಾಗೂ 7 ರಂದು ನಡೆಯಲಿರುವ ಮಕ್ಕಳ ಹಕ್ಕುಗಳ ರಕ್ಷಣೆಯ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳಬೇಕು. 

-ನಾಗಸಿಂಹ ಜಿ.ರಾವ್, ಸಂಚಾಲಕ, ಚೈಲ್ಡ್ ರೈಟ್ ಟ್ರಸ್ಟ್ಮನೆ ಆಹಾರಕ್ಕೆ ನಿರ್ಬಂಧ


ಸರ್ಕಾರಿ ಶಾಲೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತಿನ್ನುತ್ತಾರೆ. ಮಧ್ಯಮವರ್ಗದ ಮಕ್ಕಳು ಕಲಿಯುವ ಖಾಸಗಿ ಶಾಲೆಗಳಲ್ಲೂ ಇಂತಹ ಪ್ರವೃತ್ತಿಯನ್ನೇ ಕಾಣಬಹುದು. ಪ್ರತಿಷ್ಠಿತ ಎಂಬ ಹಣೆಪಟ್ಟಿಯ ಶಾಲೆಗಳಲ್ಲಿ ಮಾತ್ರ ಬೇಕರಿ ಉತ್ಪನ್ನ, ಫಾಸ್ಟ್ ಪುಡ್‌ಗೆ ಉತ್ತೇಜನ ನೀಡಲಾಗುತ್ತಿದೆ. ಇವುಗಳಿಂದ ಪೌಷ್ಟಿಕಾಂಶ ದೊರಕಲ್ಲ.  -ಡಿ.ಶಶಿಕುಮಾರ್, ಸಂಘಟನಾ ಕಾರ್ಯದರ್ಶಿ,

ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟಯಾವುದಕ್ಕೆ ನಿರ್ಬಂಧ?


ಇಡ್ಲಿ ಸಾಂಬಾರು, ಅಕ್ಕಿ ತಿನಿಸುಗಳುದೋಸೆ, ಚಪಾತಿ, ರೋಟಿಯಾವುದಕ್ಕೆ ಉತ್ತೇಜನ?

 ಬೇಕರಿ ತಿನಿಸುಗಳು, ಬ್ರೆಡ್, ಬನ್, ಜಾಮ್ಬಿಸ್ಕತ್‌ಗಳು, ಎಲ್ಲ ರೀತಿಯ ಫಾಸ್ಟ್ ಪುಡ್‌ಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry