ಇತರ ಭಾಷೆಗಳಿಗೂ ಕನ್ನಡ ಕೃತಿಗಳ ಅನುವಾದ- ಸಲಹೆ

7
`ಬೆಂಗಳೂರು ಸಾಹಿತ್ಯೋತ್ಸವ'ಕ್ಕೆ ತೆರೆ

ಇತರ ಭಾಷೆಗಳಿಗೂ ಕನ್ನಡ ಕೃತಿಗಳ ಅನುವಾದ- ಸಲಹೆ

Published:
Updated:

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳಿಂದ ನಡೆದ `ಬೆಂಗಳೂರು ಸಾಹಿತ್ಯೋತ್ಸವ'ಕ್ಕೆ ಭಾನುವಾರ ಅಂತಿಮ ತೆರೆಬಿತ್ತು. ಪುಸ್ತಕೋತ್ಸವದ ಅಬ್ಬರದ ನಡುವೆಯೂ ತಣ್ಣಗೆ ನಡೆಯುತ್ತಿದ್ದ ವಿಚಾರ ಸಂಕಿರಣದಲ್ಲಿ ಬೆರಳೆಣಿಕೆಯಷ್ಟು ಮಂದಿ ಸಾಹಿತ್ಯಾಸಕ್ತರು ಚರ್ಚೆಯಲ್ಲಿ ಪಾಲ್ಗೊಂಡರು.ಲೇಖಕರು, ವಿಮರ್ಶಕರು ಕನ್ನಡ ಸಾರಸ್ವತ ಲೋಕದಲ್ಲಿ ಎದುರಿಸುತ್ತಿರುವ ತಲ್ಲಣಗಳು, ಕನ್ನಡ ಭಾಷೆ ಅಳಿವು ಉಳಿವು, ಸಾಮಾಜಿಕ ಬದ್ಧತೆ ಹಾಗೂ ವಾಕ್ ಸ್ವಾತಂತ್ರ್ಯ, ಲೇಖಕ ಮತ್ತು ಭಾಷಾ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದರು. ಇದಲ್ಲದೇ ಕನ್ನಡ, ಹಿಂದಿ, ಮರಾಠಿ, ಉರ್ದು, ಪಂಜಾಬಿ, ಗುಜರಾತಿ, ರಾಜಸ್ತಾನಿ, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಕವಿತೆಯನ್ನು ವಾಚಿಸಿದರು.ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, `ಕನ್ನಡ ಭಾಷೆಯಲ್ಲಿರುವ ಮಹತ್ವಪೂರ್ಣ ಪುಸ್ತಕಗಳು ಇಂಗ್ಲಿಷ್ ಭಾಷೆಗೆ ಮಾತ್ರವಲ್ಲದೇ ಜರ್ಮನ್, ಇಟಲಿ ಸೇರಿದಂತೆ ಇತರೆ ಪ್ರಮುಖ ಭಾಷೆಗಳಿಗೂ ಅನುವಾದಗೊಳ್ಳಬೇಕು' ಎಂದು ತಿಳಿಸಿದರು.`ಈಗಾಗಲೇ ಪೂರ್ಣಚಂದ್ರ ತೇಜಸ್ವಿ ಅವರ `ಕರ್ವಾಲೊ' ಕೃತಿಯನ್ನು ಜರ್ಮನ್ ಭಾಷೆಗೆ ಭಾಷಾಂತರಿಸುವ ಕಾರ್ಯ ನಡೆದಿದೆ. ಕನ್ನಡದ ಶಿವರಾಮ ಕಾರಂತ, ಯು.ಆರ್.ಅನಂತಮೂರ್ತಿ, ದೇವನೂರು ಮಹಾದೇವರಂತಹ ಲೇಖಕರ ವಿಚಾರಧಾರೆಯನ್ನು ಯುರೋಪ್ ರಾಷ್ಟ್ರಗಳ ಸಾಹಿತ್ಯ ಲೋಕದಲ್ಲಿ ಕಾಣಲು ಸಾಧ್ಯವಿಲ್ಲ. ಈ ನೆಲದ ಸಾಹಿತಿಗಳನ್ನು ಇತರ ರಾಷ್ಟ್ರಗಳಿಗೂ ಪರಿಚಯಿಸುವ ಬಗ್ಗೆ ಕಾರ್ಯೋನ್ಮುಖರಾಗಬೇಕು' ಎಂದು ಸಲಹೆ ನೀಡಿದರು.`ಭ್ರಷ್ಟಾಚಾರ ಮತ್ತು ಕೋಮುವಾದದಿಂದ ರಾಜ್ಯವನ್ನು ಗುರುತಿಸುವಂತೆ ಆಗಿರುವುದು ದುರಾದೃಷ್ಟ. ಆದರೆ, ಈ ರಾಜ್ಯದ ಸಾಹಿತಿಗಳು ಈ ಎರಡು ಅಪಾಯದ ಅಂಶಗಳಿಂದ ಹೊರಗುಳಿದಿರುವುದು ಸಮಾಧಾನಕರ ಸಂಗತಿ. ಜಾತಿಯನ್ನು ಮೀರುವ ಮತ್ತು ಕಾಯಕವನ್ನು ಪ್ರಮುಖ ಅಂಶವಾಗಿಸಿಕೊಂಡಿರುವ ವಚನಸಾಹಿತ್ಯದ ಮಾದರಿಯೂ ಪ್ರಪಂಚಕ್ಕೆ ಆದರ್ಶ' ಎಂದು ಶ್ಲಾಘಿಸಿದರು.ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, `ಪ್ರಕಾಶಕರು, ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರ ಪರಸ್ಪರ ಸಹಕಾರದೊಂದಿಗೆ ಸಾಹಿತೋತ್ಸವ ಯಶಸ್ವಿಯಾಗಿದ್ದು, ಈ ವರ್ಷದ ಸಮಾರಂಭದಲ್ಲಿ ನಡೆದಿರುವ ಲೋಪಗಳನ್ನು ಮುಂದಿನ ವರ್ಷ ಆಗದಂತೆ ನೋಡಿಕೊಳ್ಳಲಾಗುವುದು' ಎಂದು ಹೇಳಿದರು.

ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, ಸಾಹಿತಿಗಳಾದ ಎಂ.ಟಿ.ವಾಸುದೇವನ್ ನಾಯರ್, ಡಾ.ಸೀತಾಕಾಂತ ಮಹಾಪಾತ್ರ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry