ಇತಿಹಾಸದ ಸ್ಟುಡಿಯೊ!

7

ಇತಿಹಾಸದ ಸ್ಟುಡಿಯೊ!

Published:
Updated:
ಇತಿಹಾಸದ ಸ್ಟುಡಿಯೊ!

ಹಳೆಯ ಕಾಲದ ವಸ್ತುಗಳು ಎಂದಾಕ್ಷಣ ಕುತೂಹಲ ಹೆಚ್ಚುತ್ತದೆ. ಅಂದಿನ ಸಂಸ್ಕೃತಿ, ಕಾಲಘಟ್ಟವನ್ನು ಪ್ರತಿನಿಧಿಸುವ ಸಾಮಗ್ರಿಗಳನ್ನು ನೋಡಿದರೆ ಎಲ್ಲರ ಕಣ್ಣಲ್ಲೂ ಬೆರಗು ಮೂಡುತ್ತದೆ. ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಇರುವ ವ್ಯತ್ಯಾಸವನ್ನು ತಾಳೆ ಹಾಕುವಂತೆ ಮಾಡುವ ಅಪರೂಪದ ವಸ್ತುಗಳು ಇಂದಿಗೂ ಕಾಣಸಿಗುತ್ತವೆ.ಅಪರೂಪದ ಕೆಲವು ಸಾಮಗ್ರಿಗಳನ್ನು ಜಯನಗರದ `ಈ- ಸ್ಟುಡಿಯೋ ಇಂಟರ್‌ನ್ಯಾಷನಲ್' ಒಳಗೊಂಡಿದೆ. ಆಗಿನ ಕಾಲದ ಬೆಳ್ಳಿಯ ಚದುರಂಗದಾಟದ ಕಾಯಿಗಳು, ಈಗ ಮಾಯವಾಗುತ್ತಿರುವ, ಸಮಯದೊಟ್ಟಿಗೆ ಕುಕ್ಕೂ ಧ್ವನಿ ಮೂಡಿಸುತ್ತಿದ್ದ ಜರ್ಮನಿಯ ಕುಕ್ಕೂ ಗಡಿಯಾರ, ಹೀಗೆ ತರಹೇವಾರಿ ವಸ್ತುಗಳು ಇಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲ, ನೆಪೋಲಿಯನ್, ಜೂಲಿಯಸ್ ಸೀಝರ್ ಮುಂತಾದ ಇತಿಹಾಸಕಾರರು ಬಳಸುತ್ತಿದ್ದ ಕತ್ತಿ ಮತ್ತು ಚಾಕುವಿನ ಪ್ರತಿಕೃತಿಗಳನ್ನೂ ಇಲ್ಲಿ ಕಾಣಬಹುದು.ಪುಟ್ಟ ವಸ್ತುಸಂಗ್ರಹಾಲಯದಂತಿರುವ ಈ ಸ್ಟುಡಿಯೋದ ಒಳಗೆ ಪ್ರವೇಶಿಸುತ್ತಿದ್ದಂತೆ ಬೆಳ್ಳಿಯ ಕೃಷ್ಣನ ದೊಡ್ಡ ವಿಗ್ರಹ ನಿಮ್ಮನ್ನು ಸ್ವಾಗತಿಸುತ್ತದೆ. ಇನ್ನು ಮಳಿಗೆಯಲ್ಲಿ ನಿಮಗೆ ಈ ಕಲಾತ್ಮಕ ವಸ್ತುಗಳ ಕುರಿತು ಮಾಲೀಕ ಸೋನು ಮೂಲ್‌ಚಂದಾನಿ ಮತ್ತು ಸಿಬ್ಬಂದಿ ಮಾರ್ಗದರ್ಶನ ನೀಡುತ್ತಾರೆ. ಮುನ್ನಡೆದರೆ ವಿವಿಧ ಭಂಗಿಯ ಗಣೇಶನ ಮೂರ್ತಿಗಳು ಹಾಗೂ ಚಿತ್ರಗಳು ಮನ ಸೆಳೆಯುತ್ತವೆ. ಇವನ್ನು ಇಟಲಿಯಿಂದ ವಿಶೇಷವಾಗಿ ಮಾಡಿಸಿ ತರಿಸಲಾಗಿದೆಯಂತೆ.

ಮಳಿಗೆಯ ಮಧ್ಯದಲ್ಲಿರುವ ಕಲಾತ್ಮಕವಾದ ಪೋಕರ್ ಆಟದ ಮೇಜಿನ ಮೇಲೆ ರೋಮನ್ ಹಾಗೂ ಆಫ್ರಿಕನ್ ರಾಜ-ರಾಣಿಯರು ಚದುರಂಗದ ಫಲಕದ ಮೇಲೆ ತಮ್ಮ ಸೇನೆಯೊಂದಿಗೆ ಸಮರಕ್ಕೆ ಸಿದ್ಧರಾಗಿ ನಿಂತಿರುವುದು ನಿಜಕ್ಕೂ ಕಲಾತ್ಮಕವಾಗಿದೆ.

ಇನ್ನೂ ಮುನ್ನಡೆದರೆ ಇತಿಹಾಸ ಪ್ರಸಿದ್ಧವಾದ ನೌಕೆಗಳ ಮಾದರಿಗಳ ಸಾಲು ಕುತೂಹಲ ಮೂಡಿಸುತ್ತದೆ. ವಿದ್ಯುತ್ ಬಲ್ಬಿನೊಳಗೆ ತೂರಿಸಿರುವ ಪುಟ್ಟ ನೌಕೆಗಳ ಮಾದರಿಗಳು ನೋಡಿದಷ್ಟೂ ನೋಡಬೇಕೆನಿಸುತ್ತವೆ. ಮಳಿಗೆಯ ಸುತ್ತ ಕಣ್ಣು ಹಾಯಿಸಿದರೆ, ವಿಕ್ಟೋರಿಯನ್ ಕಾಲದ ಗಡಿಯಾರದ ಮಾದರಿಗಳು, ಹುಕ್ಕ, ಬಳಪದ ಕಲ್ಲಿನ ಮೇಲೆ ಮೂಡಿದ ಖ್ಯಾತ ಕಲಾವಿದರ ಚಿತ್ರಗಳ ಪ್ರತಿಕೃತಿ ಇನ್ನೂ ಮುಂತಾದ ಅಮೂಲ್ಯ ಹಾಗೂ ಕಲಾತ್ಮಕ ವಸ್ತುಗಳು ಕಾಣಸಿಗುತ್ತವೆ. ಇವು ನೋಡುವುದಕ್ಕಷ್ಟೇ ಅಲ್ಲ, ಖರೀದಿಸಲೂ ಅವಕಾಶವಿದೆ. ಇಂದಿರಾನಗರದಲ್ಲೂ ಈ ಮಳಿಗೆಯಿದ್ದು, ಜಯನಗರದಲ್ಲಿ ಇದು ಮೂರನೇ ಮಳಿಗೆ. ಮಾಲೀಕ ಸೋನು ಮೂಲ್‌ಚಂದಾನಿಯವರು ವರ್ಷಕ್ಕೆ ಮೂರು ಬಾರಿ ವಿಶ್ವದ ವಿವಿಧ ದೇಶಗಳಿಗೆ ಭೇಟಿ ನೀಡುವ ಹವ್ಯಾಸ ಹೊಂದಿರುವವರು. ಅಲ್ಲಿ ಕಾಣಸಿಗುವ ಕಲಾತ್ಮಕ ವಸ್ತುಗಳನ್ನು ಆರಿಸಿ ತಂದು ಇಲ್ಲಿ ಪ್ರದರ್ಶನಕ್ಕಿಡುತ್ತಾರೆ.`ಜನರು ತಮ್ಮ ಮನೆ, ಕಚೇರಿಗಳ ಒಳಾಂಗಣವನ್ನು ಕಲಾತ್ಮಕ ವಸ್ತುಗಳಿಂದ ಸಿಂಗರಿಸಲು ನೆರವಾಗುವುದೇ ತಮ್ಮ ಉದ್ದೇಶ. ಇಲ್ಲಿನ ಪ್ರತಿಯೊಂದು ವಸ್ತುವೂ ಅಮೂಲ್ಯವಾಗಿದೆ. ಅಲ್ಲದೆ, ಉಡುಗೊರೆ ನೀಡಲೂ ಇಲ್ಲಿ ಕಲಾತ್ಮಕ ವಸ್ತುಗಳನ್ನು ತಯಾರಿಸಲಾಗುತ್ತದೆ' ಎಂದು ವಿವರಿಸುತ್ತಾರೆ.

ದೇಶದಾದ್ಯಂತ ಹದಿನೆಂಟು ಮಳಿಗೆಗಳನ್ನು ಸ್ಥಾಪಿಸಬೇಕೆನ್ನುವುದು ಸೋನು ಅವರ ಆಸೆಯಂತೆ. ಇವರ ಜಯನಗರ ಮಳಿಗೆ ಕಳೆದ ವಾರ ಆರಂಭವಾಯಿತು. ಸ್ಥಳ: ಮುರುಡೇಶ್ವರ ಆರ್ಕೇಡ್, 27ನೇ ಮುಖ್ಯರಸ್ತೆ, ರಾಗಿಗುಡ್ಡ ಆರ್ಚ್ ಸಮೀಪ, ಜಯನಗರ 9ನೇ ಬ್ಲಾಕ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry