ಇತಿಹಾಸ ಪ್ರಸಿದ್ಧ ದಾನಿವಾಸ ವೆಂಕಟರಮಣ

7

ಇತಿಹಾಸ ಪ್ರಸಿದ್ಧ ದಾನಿವಾಸ ವೆಂಕಟರಮಣ

Published:
Updated:

ನರಸಿಂಹರಾಜಪುರ ತಾಲ್ಲೂಕಿನ ಮಡಬೂರು ಗ್ರಾಮದಲ್ಲಿರುವ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನ ಐತಿಹಾಸಿಕ ಪ್ರಾಮುಖ್ಯತೆ ಪಡೆದ ತಾಲ್ಲೂಕಿನ ಪ್ರಮುಖ ದೇವಾಲಯ.ಈ ದೇವಸ್ಥಾನವನ್ನು ಮಡಬೂರು ಗ್ರಾಮದಲ್ಲಿ ಪುನರ್ ನಿರ್ಮಾಣ ಮಾಡುವುದಕ್ಕೂ ಮುನ್ನ ತಾಲ್ಲೂಕಿನ ಹಳೇದಾನಿವಾಸ ಗ್ರಾಮದಲ್ಲಿತ್ತು. 1958ರಲ್ಲಿ ಭದ್ರಾಜಲಾಶಯ ನಿರ್ಮಾಣ ಮಾಡಿದ ನಂತರ ಈ ಗ್ರಾಮವು ಭದ್ರಾಹಿನ್ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಈ ದೇವಸ್ಥಾನವು ನೀರಿನಲ್ಲಿ ಮುಳುಗಿತು. ಬೇಸಿಗೆಯ ಸಂದರ್ಭದಲ್ಲಿ ಹಿನ್ನೀರು ಕಡಿಮೆಯಾದಾಗ ದೇವಸ್ಥಾನದ ಸುತ್ತಮುತ್ತ ನೀರು ಬಿಟ್ಟಿರುತ್ತಿತ್ತು. ನೀರಿನಲ್ಲಿ ಮುಳುಗಿದರೂ ಈ ದೇವಸ್ಥಾನ ಸ್ವಲ್ಪವೂ ಶಿಥಿಲವಾಗಿರಲಿಲ್ಲ. ಹಾಗಾಗಿ ಭಕ್ತಾಧಿಗಳ ಇಚ್ಛೆಯಂತೆ ಇದನ್ನು ತಂದು ಶಿವಮೊಗ್ಗ-ಎನ್.ಆರ್.ಪುರ  ಮಾರ್ಗದ ಮಧ್ಯೆಬರುವ ಮಡಬೂರು ಗ್ರಾಮದಲ್ಲಿರುವ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಪುನರ್‌ನಿರ್ಮಾಣ ಮಾಡಲಾಯಿತು.ಹಳೇ ದಾನಿವಾಸದಲ್ಲಿದ್ದ ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮುನ್ನೂರು ವರ್ಷಗಳ ಐತಿಹಾಸಿಕ ಹಿನ್ನಲೆಯಿದೆ. ಅಲ್ಲದೆ ಈ ದೇವಸ್ಥಾನದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಐತಿಹ್ಯವಿದೆ. ಎನ್.ಆರ್.ಪುರದ ಅಗ್ರಹಾರದ ನಿವಾಸಿ ಸಾಹುಕಾರ ಮಂಜಯ್ಯ ಎಂಬುವರು ತಿರುಪತಿ ಶ್ರೀವೆಂಕಟರಮಣ ದೇವರ ಭಕ್ತರಾಗಿದ್ದರು. ಸಾಕಷ್ಟು ಶ್ರೀಮಂತರೂ ಆಗಿದ್ದ ಇವರ ಮನೆತನದವರೆಲ್ಲರೂ ತಿರುಪತಿ ಯಾತ್ರೆಗೆ ಹೋಗಿ ಹರಕೆ, ಕಾಣಿಕೆಗಳನ್ನು ತೀರಿಸುತ್ತಾ ಶ್ರದ್ಧಾ ಭಕ್ತಿಗಳಿಂದ ನಡೆಸಿಕೊಂಡು ಬರುತ್ತಿದ್ದರು. ಒಮ್ಮೆ ಅವರು ತಿರುಪತಿಗೆ ದೇವರ ಹರಕೆ ತಿರಿಸಲು  ಹೋರಟು ಹಳೇ ದಾನಿವಾಸದ ಹತ್ತಿರ ಬಂದಾಗ ಸಂಜೆಯಾಗಿದ್ದರಿಂದ ಅಲ್ಲೆ ವಿಶ್ರಮಿಸಿ ಬೆಳಿಗ್ಗೆ ಪ್ರಯಾಣ ಬೆಳೆಸುವುದೆಂದು ತೀರ್ಮಾನಿಸಿದರು. ಆ ದಿನ ರಾತ್ರಿ ವೆಂಕಟರಮಣ ಸ್ವಾಮಿ ಮಂಜಯ್ಯನವರ ಕನಸಿನಲ್ಲಿ ಬಂದು ನೀನು ತಂಗಿರುವ (ಹಳೇದಾನಿವಾಸ) ಸ್ಥಳದಲ್ಲೇ ನನ್ನ ಸಾನಿಧ್ಯವಿದೆ ಏಕೆ? ಅಷ್ಟು ದೂರ ನಡೆದು ಹೋಗುವಿರಿ ಎಂದು ನುಡಿದಂತೆ ಆಯಿತಂತೆ. ಬೆಳಿಗ್ಗೆ ಎದ್ದು ಎಲ್ಲಾ ಕಡೆ ಶೋಧಿಸಲಾಗಿ ಪೊದೆಯೊಂದರಲಿ ವೆಂಕಟರಮಣ ಸ್ವಾಮಿಯ ಒಂದು ವಿಗ್ರಹ ಸಿಕ್ಕಿತಂತೆ. ತದನಂತರ ವಿಗ್ರಹ ದೊರೆತ ಸ್ಥಳದಲ್ಲಿಯೇ ಗುಡಿಯೊಂದನ್ನು ಕಟ್ಟಿ ವೆಂಕಟರಮಣ ಸ್ವಾಮಿ  ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸುವ ವ್ಯವಸ್ಥೆ ಮಾಡಿದರು. ಇವರ ಕುಟುಂಬದವರಾದ ರಾಯಪ್ಪನವರು, ಮನೆಪುಟ್ಟಪ್ಪನವರು ಉಸ್ತುವಾರಿ ವಹಿಸಿಕೊಂಡು ನಿತ್ಯ ಪೂಜೆ ನಡೆಸುತ್ತಾ ಬಂದರು. ನಂತರ ಮುಜುರಾಯಿ ಇಲಾಖೆಗೆ ಬಿಟ್ಟುಕೊಟ್ಟರು.ಹಳೇ ದಾನಿವಾಸ ಗ್ರಾಮ ಮುಳುಗಡೆಯಾದ ನಂತರ ವೆಂಕಟರಮಣ ಸ್ವಾಮಿ ವಿಗ್ರಹವನ್ನು ಅಗ್ರಹಾರದ ಗಣಪತಿಕಟ್ಟೆಯಲ್ಲಿ 36ವರ್ಷ ಇಡ ಲಾಗಿತ್ತು. 1992ರಲ್ಲಿ  ಈ ದೇವರ ಭಕ್ತಾಧಿಗಳು ಸಭೆ ಸೇರಿ ದಿ. ಎಪ್.ಪಿ.ಗೋವಿಂದೇಗೌಡರ ನೇತೃತ್ವದಲ್ಲಿ ಮಡಬೂರಿನಲ್ಲಿರುವ ದುರ್ಗಾಂಬ ದೇವರ ಪಕ್ಕದ ನಿವೇಶನದಲ್ಲಿ ತೀರ್ಮಾಸಿದರು. ಅದರಂತೆ ಇದೇ ಸಾಹುಕಾರ ಮನೆತನದವರಾದ ನಿವೃತ್ತ ತಹಶೀಲ್ದಾರ್ ದಿ. ಎಸ್.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮೇ 1998ರಲ್ಲಿ ಪ್ರತಿಷ್ಠಾಪಿಸಲಾಯಿತು.ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಎಲ್ಲಾ ಭಕ್ತರ ಸಹಕಾರದಿಂದ ಶ್ರಾವಣಮಾಸದಲ್ಲಿ ಪ್ರತಿ ಶನಿವಾರ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರ ಸಹಕಾರದಿಂದ ಇದನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ದೇವಸ್ಥಾನದ  ಉಸ್ತುವಾರಿ ನಿರ್ವಹಿಸುತ್ತಿರುವ  ಸಾಹುಕಾರ್ ಮನೆತನದ ಶ್ರೀನಾಥ್.ಈ ದೇವಸ್ಥಾನ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತಾಧಿಗಳು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಇಲ್ಲಿಗೆ ಆಗಮಿಸುತ್ತಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry