ಶುಕ್ರವಾರ, ಮೇ 7, 2021
27 °C

ಇತಿಹಾಸ ಬೋಧನೆ: ರಾಜಕೀಯ ಹಸ್ತಕ್ಷೇಪ ನಿಲ್ಲಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸ ಬೋಧನೆ: ರಾಜಕೀಯ ಹಸ್ತಕ್ಷೇಪ ನಿಲ್ಲಲಿ

ಬೆಂಗಳೂರು: `ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಸ್ತಕ್ಷೇಪ ನಿಲ್ಲದ ಹೊರತು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಇತಿಹಾಸವನ್ನು ಬೋಧಿಸಲು ಸಾಧ್ಯವಿಲ್ಲ~ ಎಂದು ಇತಿಹಾಸ ತಜ್ಞ ಡಾ. ಎಚ್.ಎಸ್.ಗೋಪಾಲರಾವ್ ತಿಳಿಸಿದರು.ಕರ್ನಾಟಕ ಇತಿಹಾಸ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 25ನೇ ವಾರ್ಷಿಕ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ಪಕ್ಷಗಳ ಸಿದ್ಧಾಂತಕ್ಕೆ ತಕ್ಕ ಇತಿಹಾಸದ ಪಠ್ಯವನ್ನು ಸಿದ್ಧಪಡಿಸಬೇಕು ಎಂಬ ರಾಜಕೀಯ ನಾಯಕರ ಪ್ರತಿಷ್ಠೆ ಮತ್ತು ಅವರನ್ನು ಎದುರಿಸಲಾಗದ ಅಧಿಕಾರಿಗಳ ಬಲ ಪ್ರಯೋಗದ ನಿವಾರಣೆ ಆಗುವವರೆಗೆ ಜನರಿಗೆ ಬೇಕಾದ ಇತಿಹಾಸ ಲಭ್ಯವಾಗುವುದಿಲ್ಲ.ಶಿಕ್ಷಣದ ಬೇಕು ಬೇಡಗಳನ್ನು ಶಿಕ್ಷಣ ತಜ್ಞರು ನಿರ್ಧರಿಸಬೇಕು. ಇಸವಿ ಪ್ರಧಾನವಾದ ಮತ್ತು ನೇರವಾಗಿ ಸಂಬಂಧಿಸದ ಇತಿಹಾಸವನ್ನು ಬಲವಂತವಾಗಿ ಬೋಧಿಸುವುದರ ಬದಲು ಜನಪ್ರೀತಿ ಗಳಿಸುವಂತಹ ಇತಿಹಾಸ ಬೋಧಿಸುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರೀತಿ ಮೂಡುತ್ತದೆ~ ಎಂದರು.`ಪ್ರೌಢಶಾಲೆಯ ಹಂತದಲ್ಲಿ ಆಯಾ ರಾಜ್ಯಗಳ ಇತಿಹಾಸ, ಪದವಿ ಪೂರ್ವ ಹಂತದಲ್ಲಿ ಒಂದು ವರ್ಷ ಭಾರತದ ಹಾಗೂ ಮತ್ತೊಂದು ವರ್ಷ ಆಯಾ ರಾಜ್ಯಗಳ ಸಮಗ್ರ ಇತಿಹಾಸ ಬೋಧನೆಯಾಗಬೇಕು. ಪದವಿ ಹಂತದಲ್ಲಿ ವಿದ್ಯಾರ್ಥಿಗಳು ತಮಗೆ ಪ್ರಿಯವಾದ ವಿಷಯಗಳ ಅಧ್ಯಯನಕ್ಕೆ ಅವಕಾಶ ಇರಬೇಕು.ಸ್ನಾತಕೋತ್ತರ ಹಂತದಲ್ಲಿ ಸಂಶೋಧನೆಗೆ ಅನುಕೂಲವಾದ ಅಧ್ಯಯನಕ್ಕೆ ತೊಡಗುವ ವಾತಾವರಣ ಇರಬೇಕು. ಆಗ ಮಾತ್ರ ಇತಿಹಾಸದ ಬೇರು ಭದ್ರವಾಗುತ್ತದೆ~ ಎಂದು ಅಭಿಪ್ರಾಯಪಟ್ಟರು.`ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ಇತಿಹಾಸವನ್ನು ಕಾಲಾನುಕ್ರಮದಲ್ಲಿ ವಿಂಗಡಿಸಿ ತಮ್ಮ ಅಧ್ಯಯನಗಳಿಗೆ ಮಿತಿ ಹಾಕಿಕೊಂಡಿರುವಂತೆ ಭಾಸವಾಗುತ್ತದೆ. ಚರಿತ್ರೆ ಸಮಗ್ರವಾದುದು. ಸುತ್ತ ಬೇಲಿ ಹಾಕಿಕೊಂಡು ಕಂಡದ್ದನ್ನು ಮಾತ್ರವೇ ವಿಶ್ವ ಎಂದು ಕೊಳ್ಳುವ ಬದಲು ವಿಶಾಲ ಪ್ರಪಂಚವನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಸಾರ್ಥಕತೆ ಇರುತ್ತದೆ.ಇಂತಹ ಸಂದರ್ಭದಲ್ಲಿ ಕವಿ ರವೀಂದ್ರನಾಥ ಟ್ಯಾಗೋರರ `ಎಲ್ಲಿ ಮನಕಿಲ್ಲ ಭಯ, ಎಲ್ಲಿ ತಲೆ ಎತ್ತಿಹುದೊ, ಎಲ್ಲಿ ಜ್ಞಾನವು ಮುಕ್ತ, ಎಲ್ಲಿ ನಾವಿಹ ವಸುಧೆ ಶತಖಂಡವಲ್ಲ~ ಎಂಬ ಮಾತು ನೆನಪಾಗುತ್ತದೆ.

ಪ್ರಾದೇಶಿಕ ಇತಿಹಾಸದ ತಳಪಾಯದ ಮೇಲೆ ಸಮಗ್ರ ಇತಿಹಾಸವನ್ನು ಅಧ್ಯಯನ ಮಾಡುವ ಅವಕಾಶ ಎಲ್ಲರಿಗೂ ದಕ್ಕಬೇಕು~ ಎಂದು ತಿಳಿಸಿದರು.`ದೇಶದ ಮಾತಿರಲಿ ರಾಜ್ಯದಲ್ಲಿಯೇ ಅಪ್ರಕಟಿತ ಶಾಸನಗಳ ಹಸ್ತಪ್ರತಿಗಳ ಸಂಖ್ಯೆ ಸಾಕಷ್ಟಿದೆ. ಇವುಗಳ ಶೋಧ ಮತ್ತು ಪ್ರಕಟಣೆ ಆಗದಿದ್ದರೆ ಅದೆಷ್ಟೋ ಅಮೂಲ್ಯ ಆಕರಗಳು ಶಾಶ್ವತವಾಗಿ ಕೈ ತಪ್ಪಿ ಹೋಗುತ್ತವೆ. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ಸಿಬ್ಬಂದಿ ಕೊರತೆ ನಡುವೆಯೂ ಸಕ್ರಿಯವಾಗಿ ತೊಡಗಿಕೊಂಡಿವೆ.ಆದರೆ ಅವುಗಳ ಶೋಧ ಕಾರ್ಯವನ್ನು ವರದಿ ರೂಪದಲ್ಲಿ ಪ್ರಕಟಿಸಲು ವಿಳಂಬವಾಗುತ್ತಿದೆ. ಮೈಸೂರು, ಧಾರವಾಡ, ಬೆಂಗಳೂರು, ಹಂಪಿ ವಿಶ್ವವಿದ್ಯಾಲಯಗಳ ಕೆಲವು ನಿಯತಕಾಲಿಕೆಗಳು ಮುಖ್ಯ ಆಕರ ಗ್ರಂಥಗಳಾಗಿದ್ದ ಅವುಗಳ ಪ್ರಕಟಣೆ ನಿರಂತರವಾಗಿ ನಡೆಯದಿರುವುದು ಬೇಸರದ ವಿಷಯ~ ಎಂದರು.`ಹೆಸರಿಗಷ್ಟೇ ಪಿಎಚ್.ಡಿ ಪಡೆಯುವುದು ಸಂಶೋಧನೆ ಎನ್ನಿಸಿಕೊಳ್ಳುವುದಿಲ್ಲ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಸಂಶೋಧನೆಗೆ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೇ ಇರಬಹುದು. ಆದ್ದರಿಂದ ಪರೀಕ್ಷೆಗಳಲ್ಲಿ ಅನುಸರಿಸುವ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವಿದೆ~ ಎಂದು ಹೇಳಿದರು.ಸಮ್ಮೇಳನ ಉದ್ಘಾಟಿಸಿದ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, `ಅಕಾಡೆಮಿಯು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಶಾಸನಗಳ ಅನ್ವೇಷಣೆ, ವೀರಗಲ್ಲು ಮಾಸ್ತಿಕಲ್ಲುಗಳ ಅಧ್ಯಯನ, ಚಾರಿತ್ರಿಕ ಕಡತಗಳ ಅನ್ವೇಷಣೆ ಮತ್ತು ಅಧ್ಯಯನ ಹಾಗೂ ಜನಸಾಮಾನ್ಯರಿಗೆ ಅವುಗಳನ್ನು ಪರಿಚಯಿಸುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. 1,600 ಪ್ರಬಂಧಗಳು 180 ಶಾಸನಗಳ ಪ್ರಕಟಣಾ ಕಾರ್ಯ ನಡೆದಿದೆ~ ಎಂದರು.`1986ರಲ್ಲಿ ರೂಪುಗೊಂಡ ಅಕಾಡೆಮಿಯು ಜಿ.ಎಸ್.ದೀಕ್ಷಿತರನ್ನು ಅಧ್ಯಕ್ಷರನ್ನಾಗಿ ಪಡೆಯಿತು. 1987ರಲ್ಲಿ ವಾರ್ಷಿಕ ಸಮ್ಮೇಳನವನ್ನು ವಿ.ಕೃ ಗೋಕಾಕರು ಉದ್ಘಾಟಿಸಿದರು. ಡಾ.ಚಿದಾನಂದಮೂರ್ತಿ ಅಂದಿನ ಅಧ್ಯಕ್ಷರಾಗಿದ್ದರು. ಅಕಾಡೆಮಿಯು ಇತಿಹಾಸ ಸಂಶೋಧಕ ಸೂರ್ಯನಾಥ ಕಾಮತರ ಭವಿಷ್ಯದ ಕನಸು~ ಎಂದು ಮೆಚ್ಚುಗೆಸಂದರ್ಭದಲ್ಲಿ ಇತಿಹಾಸ ದರ್ಶನ 26ನೇ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.ಶಾಸನತಜ್ಞ ಕೆ. ಮಹಮದ್ ಷರೀಫ್ ಅವರಿಗೆ ಮಿಥಿಕ್ ಸೊಸೈಟಿ ಅಧ್ಯಕ್ಷ ಡಾ. ಎಂ.ಕೆ.ಎಲ್.ಎನ್.ಶಾಸ್ತ್ರಿ ಅವರು `ಡಾ.ಬಾ.ರಾ.ಗೋಪಾಲ್ ಪ್ರಶಸ್ತಿ~ ಪ್ರದಾನ ಮಾಡಿದರು. ಡಾಕ್ಟರೇಟ್ ಪಡೆದ ಸಂಶೋಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಎಂ.ಎಸ್.ಕೃಷ್ಣಮೂರ್ತಿ, ಅಕಾಡೆಮಿಯ ಗೌರವಾಧ್ಯಕ್ಷ ಡಾ.ಸೂರ್ಯನಾಥ ಕಾಮತ್, ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, ಮಾಜಿ ಕೋಶಾಧ್ಯಕ್ಷ ಎಂ.ಬಿ.ಪಾಟೀಲ್, ಕೇಂದ್ರ ಪುರಾತತ್ವ ಇಲಾಖೆ ಪ್ರಾದೇಶಿಕ ನಿರ್ದೇಶಕ ಎಸ್.ವಿ.ವೆಂಕಟೇಶಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.`ಇತಿಹಾಸಕ್ಕೆ ಅಪಚಾರ~

`ಕೆಲವು ಕಾದಂಬರಿಗಳು ಇತಿಹಾಸಕ್ಕೆ ಮಾಡಿರುವ ಅಪಚಾರವನ್ನು ತೀವ್ರವಾಗಿ ಖಂಡಿಸಬೇಕು. ಇತಿಹಾಸದಲ್ಲಿ ಇಲ್ಲದ ಜಕ್ಕಣಾಚಾರಿ ಎಂಬ ವ್ಯಕ್ತಿಯನ್ನು ಈಗ ಬಲವಂತವಾಗಿಯಾದರೂ ಇತಿಹಾಸಕ್ಕೆ ಸೇರಿಸಬೇಕಾಗಿದೆ. ಹಾಗೆಂದು ರಾಜಕಾರಣಿಗಳು ಫರ್ಮಾನು ಹೊರಡಿಸಿದರೂ ಅದನ್ನು ವಿರೋಧಿಸುವಂತಿಲ್ಲ.ರಾಣಿ ಶಾಂತಲೆಯು ಶಿವಗಂಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಳೆಂಬ ಕಾದಂಬರಿಯ ಉಲ್ಲೇಖವು ಈಗ ಸತ್ಯ ಘಟನೆಯಂತೆ ಅಭಿವ್ಯಕ್ತಿಗೊಳ್ಳುತ್ತಿದೆ~ ಎಂದು ಇತಿಹಾಸ ತಜ್ಞ  ಡಾ. ಎಚ್.ಎಸ್.ಗೋಪಾಲರಾವ್ ವಿಷಾದ ವ್ಯಕ್ತಪಡಿಸಿದರು.`ಕಾದಂಬರಿ ಸೃಜನಾತ್ಮಕವಾದರೂ ಅಲ್ಲಿ ಕಲ್ಪನೆಗಳಿಗೆ ಅವಕಾಶ ಇದ್ದರೂ ಸತ್ಯ ಸಂಗತಿಗಳಿಗೆ ಅಪಚಾರ ಮಾಡದೆ ಬರೆಯಬೇಕು. ಆಗ ಇತಿಹಾಸಕ್ಕೆ ಕ್ಷೇಮ. ನಿಧಿಯನ್ನು ಪತ್ತೆ ಹಚ್ಚುವ ಕುರಿತ ರೋಮಾಂಚಕ ಪತ್ತೇದಾರಿ ಕಾದಂಬರಿಗಳಿಂದ ಸೃಷ್ಟಿಯಾಗುವ ಸುಳ್ಳುಗಳು ಇತಿಹಾಸದ ದಾರಿ ತಪ್ಪಿಸುತ್ತಿವೆ~ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.